ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ನೂತನ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಯಾಗಿ ಸೋಮವಾರ ಇಲ್ಲಿ ಸಭೆ ಸೇರಿದ್ದ ಆಯ್ಕೆ ಸಮಿತಿ, ಹೆಸರನ್ನು ಅಂತಿಮಗೊಳಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರವಾನಿಸಿದೆ. ಈ ಆಯ್ಕೆಗೆ ರಾಷ್ಟ್ರಪತಿ ಅನುಮೋದನೆ ಸಿಗುತ್ತಲೇ ನೂತನ ಸಿಇಸಿ ಹೆಸರು ಪ್ರಕಟಗೊಳ್ಳಲಿದೆ.
ಹಾಲಿ ಮುಖ್ಯ ಚುನಾವಣಾ ಆಯುಕ್ತರಾಗಿರುವ ರಾಜೀವ್ ಕುಮಾರ್ ಅವಧಿ ಮಂಗಳವಾರ ಮುಕ್ತಾಯಗೊಳ್ಳಲಿದ್ದು, ನೂತನ ಸಿಇಸಿ ಮಂಗಳವಾರವೇ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಸಭೆ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನೊಳಗೊಂಡ ಸಮಿತಿ ಸೋಮವಾರ ಇಲ್ಲಿ ನೂತನ ಸಿಇಸಿ ಆಯ್ಕೆಗೆ ಸಭೆ ನಡೆಸಿತು. ಈ ವೇಳೆ ಸಂಭವನೀಯ 5 ಜನರ ಹೆಸರನ್ನು ಸಭೆಯ ಮುಂದಿಡಲಾಗಿತ್ತು.
ಆದರೆ ಸಭೆಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ. ‘ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯ ರಚನೆಯ ಕುರಿತು ಸಲ್ಲಿಸಲಾಗಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಫೆ.19ರಂದು ವಿಚಾರಣೆ ನಡೆಯಲಿದ್ದು, ಅದಾದ ಬಳಿಕವೇ ಆಯುಕ್ತರನ್ನು ಘೋಷಿಸಿ’ ಎಂದು ಒತ್ತಾಯ ಮಾಡಿದ್ದಾರೆ. ಆದರೆ ಅವರ ಆಕ್ಷೇಪದ ಹೊರತಾಗಿಯೂ ಸಮಿತಿಯ ಉಳಿದಿಬ್ಬರು ಸದಸ್ಯರು ಬಹುಮತದೊಂದಿಗೆ ನೂತನ ಸಿಇಸಿ ಹೆಸರನ್ನು ಅಂತಿಮಗೊಳಿಸಿ ರಾಷ್ಟ್ರಪತಿಗೆ ರವಾನಿಸಿದ್ದಾರೆ.
ಈ ನಡುವೆ ಸಭೆಯ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ, ‘ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ತೆಗೆದುಹಾಕುವ ಮೂಲಕ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೇಲೆ ಹಿಡಿತ ಸಾಧಿಸಲು ಬಯಸಿದೆ. ಈ ಕುರಿತ ಕೇಸ್ ಸುಪ್ರೀಂ ಕೋರ್ಟ್‌ನಲ್ಲಿದ್ದು, ಅದರ ವಿಚಾರಣೆ ಫೆ.19ರಂದು ನಡೆಯಲಿದೆ. ಅದರ ಬಳಿಕವೇ ಮುಖ್ಯ ಆಯುಕ್ತರ ಹೆಸರು ಘೋಷಿಸಲು ಮನವಿ ಮಾಡುತ್ತೇವೆ’ ಎಂದರು.
ಈಗಿನ ಸಮಿತಿ ಕುರಿತು ಅಸಮಾಧಾನ:
ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಗೆ ರಚಿಸಲಾದ ಸಮಿತಿಯನ್ನು ಬದಲಿಸುವ ಕಾನೂನನ್ನು ಕಳೆದ ವರ್ಷ ಜಾರಿಗೆ ತರಲಾಗಿತ್ತು. ಇದರ ಪ್ರಕಾರ ಸಮಿತಿಯಲ್ಲಿ ಪ್ರಧಾನಿ, ಅವರು ಸೂಚಿಸುವ ಓರ್ವ ಕೇಂದ್ರ ಸಚಿವ ಹಾಗೂ ವಿಪಕ್ಷದ ನಾಯಕರು ಇರುತ್ತಾರೆ. ಈ ಬದಲಾವಣೆಯ ಮೂಲಕ ಕೇಂದ್ರ ಸರ್ಕಾರವು ಆಯೋಗದ ವಿಶ್ವಾಸಾರ್ಹತೆಯನ್ನು ಕಾಪಾಡುವ ಬದಲು ಅದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಯಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.