ನವದೆಹಲಿ: ಸ್ವಾತಂತ್ರ್ಯೋತ್ಸವಕ್ಕೆ ಇನ್ನು 2 ವಾರವಷ್ಟೇ ಬಾರಿ ಇದೆ. ಈ ಹಿನ್ನೆಲೆಯಲ್ಲಿ, ಈ ಬಾರಿಯ ಸ್ವಾತಂತ್ರ್ಯ ದಿನದಂದು ಯಾವ ವಿಷಯದ ಬಗ್ಗೆ ತಾವು ಮಾತನಾಡಬಹುದು ಎಂಬ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, ‘ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ನೀವು ಯಾವ ವಿಷಯ ಅಥವಾ ವಿಚಾರಗಳ ಮೇಲೆ ಬೆಳಕು ಚೆಲ್ಲಬೇಕು ಎಂದು ಬಯಸುತ್ತೀರಿ?’ ಎಂದು ಕೇಳಿದ್ದಾರೆ. ಜನರು ಮೈಗೌ ಅಥವಾ ನಮೋ ಆ್ಯಪ್‌ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ.
₹ 1ಕ್ಕೆ 1 ತಿಂಗಳು 4ಜಿ ಸೇವೆ : ಬಿಎಸ್ಸೆನ್ನೆಲ್ ಹೊಸ ಪ್ಲ್ಯಾನ್
ನವದೆಹಲಿ: ಗ್ರಾಹಕರನ್ನು ಸೆಳೆಯುವ ಸಲುವಾಗಿ, ಒಂದೊಮ್ಮೆ ಮನೆಮಾತಾಗಿದ್ದ ಬಿಎಸ್‌ಎನ್‌ಎಲ್ ಇದೀಗ 1 ತಿಂಗಳ 4ಜಿ ಸೇವೆಯನ್ನು ಕೇವಲ 1 ರು.ಗೆ ಒದಗಿಸುವ ಹೊಸ ಯೋಜನೆಯನ್ನು ಘೋಷಿಸಿದೆ. ಸ್ವಾತಂತ್ರ್ಯ ದಿನದ ಅಂಗವಾಗಿ ಬಿಡುಗಡೆಯಾಗಿರುವ ಇದಕ್ಕೆ, ‘ಫ್ರೀಡಂ ಪ್ಲ್ಯಾನ್’ ಎಂದು ಹೆಸರಿಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಎಸ್‌ಎನ್‌ಎಲ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎ. ರಾಬರ್ಟ್ ಜೆ. ರವಿ, ‘ಆತ್ಮನಿರ್ಭರ ಮಿಷನ್ ಅಡಿ ಈ ಯೋಜನೆಯನ್ನು ರೂಪಿಸಲಾಗಿದ್ದು, ಈ ಮೂಲಕ ಪ್ರತಿಯೊಬ್ಬ ಭಾರತೀಯನಿಗೆ 30 ದಿನ ಖರ್ಚಿಲ್ಲದೆ ಸ್ವದೇಶಿ ನೆಟ್‌ವರ್ಕ್‌ನ ಅನುಭವ ಪಡೆಯುವ ಅವಕಾಶ ಕೊಡುತ್ತದೆ’ ಎಂದು ಹೇಳಿದ್ದಾರೆ.ಪ್ರಸ್ತುತ ಭಾರತದಲ್ಲಿ 9.1 ಕೋಟಿ ಬಿಎಸ್‌ಎನ್‌ಎಲ್ ಗ್ರಾಹಕರಿದ್ದಾರೆ.
ಏನಿದು ಯೋಜನೆ:
1 ರು. ಪಾವತಿಸಿ ಫ್ರೀಡಂ ಯೋಜನೆ ಹಾಕಿಸಿಕೊಳ್ಳುವ ಗ್ರಾಹಕರು, ಮುಂದಿನ 1 ತಿಂಗಳು ಅನಿಯಮಿತ ಕರೆಗಳು(ಸ್ಥಳೀಯ ಮತ್ತು ಎಸ್‌ಟಿಡಿ), ದಿನಕ್ಕೆ 2 ಜಿಬಿ ಹೈಸ್ಪೀಡ್ ಇಂಟರ್‌ನೆಟ್, ದಿನಕ್ಕೆ 100 ಉಚಿತ ಎಸ್‌ಎಂಎಸ್ ಸೌಲಭ್ಯ ಪಡೆಯಲಿದ್ದಾರೆ. ಜತೆಗೆ ಉಚಿತ ಬಿಎಸ್‌ಎನ್‌ಎಲ್ ಸಿಮ್ ಕೂಡ ದೊರೆಯಲಿದೆ.
ಯುವ ಪತ್ರಕರ್ತರ ವರ್ತನೆ ನೋಡಿದರೆ ಬಾರಿಸುವ ಮನಸ್ಸಾಗುತ್ತದೆ : ರೇವಂತ್
ಹೈದರಾಬಾದ್: ‘ಇಂದಿನ ಯುವ ಪತ್ರಕರ್ತರಿಗೆ ಹಿರಿಯರನ್ನು ಗೌರವಿಸುವುದೇ ಗೊತ್ತಿಲ್ಲ. ಅವರ ವರ್ತನೆ ನೋಡಿದರೆ ಕೆನ್ನೆಗೆ ಬಾರಿಸುವ ಮನಸ್ಸಾಗುತ್ತದೆ’ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ರೆಡ್ಡಿ, ‘ಹಿರಿಯ ಪತ್ರಕರ್ತರು ಬಂದಾಗ ಎದ್ದುನಿಂತು ಗೌರವಿಸಬೇಕು ಎಂದೂ ಇಂದಿನ ಪತ್ರಕರ್ತರಿಗೆ ಅನ್ನಿಸುವುದಿಲ್ಲ. ಪತ್ರಿಕಾಗೋಷ್ಠಿ ವೇಳೆ ಮುಂದಿನ ಸಾಲಲ್ಲಿ ಕೂತು, ನಾನೇ ತಲೆಬಾಗಿಸಿ ಅವರಿಗೆ ವಂದಿಸಬೇಕು ಎಂಬಂತೆ ದಿಟ್ಟಿಸುತ್ತಿರುತ್ತಾರೆ. ಅಂತಹ ವರ್ತನೆ ನೋಡಿದಾಗ ಕಪಾಳಕ್ಕೆ ಬಾರಿಸಬೇಕು ಅನ್ನಿಸುತ್ತದೆ. ಆದರೆ ನನ್ನ ಸ್ಥಾನ ಅಡ್ಡಬರುತ್ತದೆ’ ಎಂದರು.
ಈ ಮೊದಲು ಮಾರ್ಚ್‌ನಲ್ಲಿ, ನಿಂದನೀಯ ಮತ್ತು ಅವಹೇಳನಕಾರಿ ವಿಡಿಯೋ ಹಂಚಿಕೊಂಡದ್ದಕ್ಕಾಗಿ ಬಂಧಿತರಾಗಿದ್ದ ಯೂಟ್ಯೂಬರ್‌ಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದ ರೇವಂತ್, ‘ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅವರ ಕುಟುಂಬದವರ ವಿರುದ್ಧ ಪ್ರಚಾರಗಳನ್ನು ಪೋಸ್ಟ್ ಮಾಡಲು ಪತ್ರಕರ್ತರಂತೆ ನಟಿಸುವ ಜನರನ್ನು ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಬೇಕು’ ಎಂದಿದ್ದರು.
ತಪ್ಪುಗ್ರಹಿಕೆಯಿಂದ ಕ್ರೈಸ್ತ ಸನ್ಯಾಸಿನಿ ಬಂಧನ, ಶೀಘ್ರ ಜಾಮೀನು: ಆರ್‌ಸಿ
ತ್ರಿಶೂರ್: ಮಾನವ ಕಳ್ಳಸಾಗಣೆ ಮತ್ತು ಬಲವಂತದ ಮತಾಂತರದ ಆರೋಪದ ಮೇಲೆ ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ಬಂಧಿಸಲ್ಪಟ್ಟಿದ್ದ ಕ್ರೈಸ್ತ ಸನ್ಯಾಸಿನಿಯರ ಬಗ್ಗೆ ಮಾತನಾಡಿರುವ ಕೇರಳದ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ‘ತಪ್ಪು ತಿಳುವಳಿಕೆಯಿಂದ ಹೀಗಾಗಿದೆ. ಅವರಿಗೆ ಆದಷ್ಟು ಬೇಗ ಜಾಮೀನು ಸಿಗಲಿದೆ’ ಎಂದು ಹೇಳಿದ್ದಾರೆ.
ಭಾರತದ ಕ್ಯಾಥೋಲಿಕ್ ಬಿಷಪ್ ಸಮ್ಮೇಳನದ (ಸಿಬಿಸಿಐ) ಅಧ್ಯಕ್ಷರಾದ ತ್ರಿಶೂರಿನ ಆರ್ಚ್‌ಬಿಷಪ್ ಆಂಡ್ರ್ಯೂಸ್ ಥಜತ್ ಅವರನ್ನು ಭೇಟಿಯಾದ ರಾಜೀವ್, ‘ನ್ಯಾಯಾಂಗ ಪ್ರಕ್ರಿಯೆ ನಡೆಯಲಿ. ಆದರೆ ಇದನ್ನು ರಾಜಕೀಯಗೊಳಿಸಬೇಡಿ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಹ, ನನ್‌ಗಳಿಗೆ ಜಾಮೀನು ಸಿಗುವ ಭರವಸೆ ನೀಡಿದ್ದಾರೆ’ ಎಂದರು.ನಾರಾಯಣಪುರದ 3 ಹುಡುಗಿಯರನ್ನು ಮತಾಂತರಿಸಿ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಭಜರಂಗದಳ ನೀಡಿದ್ದ ದೂರಿನ ಆಧಾರದಲ್ಲಿ ಜು.25ರಂದು ದುರ್ಗ್ ರೈಲು ನಿಲ್ದಾಣದಲ್ಲಿ 2 ನನ್‌ಗಳನ್ನು ಬಂಧಿನವಾಗಿತ್ತು.
ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್:
ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ವಿಶೇಷ ಎನ್‌ಐಎ ನ್ಯಾಯಾಲಯವು ಬಂಧಿತ ಕ್ರೈಸ್ತ ಸನ್ಯಾಸಿನಿಯರು ಸೇರಿ ಮೂವರ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದೆ. ಶನಿವಾರ ಪ್ರಕರಣದ ವಿಚಾರಣೆ ನಡೆಯಲಿದ್ದು, ಬಳಿಕ ತೀರ್ಪು ನೀಡಲಾಗುವುದು.
8 ಪುರುಷರನ್ನು ವರಿಸಿ ವಂಚಿಸಿದ್ದ ವಧು ಕೊನೆ ಪತಿಯಿಂದ ಸಿಕ್ಕಿಬಿದ್ಲು!
ನಾಗ್ಪುರ: ಈಗಾಗಲೇ 8 ಜನರಿಗೆ ಸುಖಸಂಸಾರದ ಕನಸು ತೋರಿಸಿ, ವರಿಸಿ ಲಕ್ಷಾಂತರ ರುಪಾಯಿಗಳನ್ನು ದೋಚಿದ್ದ ವಧುವಿಗೆ ಇದೀಗ ಪೊಲೀಸರು ಕೈಕೋಳ ತೊಡಿಸಿದ್ದಾರೆ.ವಂಚಕಿ ಸಮೀರಾ ಫಾತಿಮಾ (35) ಕಳೆದ 15 ವರ್ಷಗಳಿಂದ ಶ್ರೀಮಂತ, ವಿವಾಹಿತ, ವಿಚ್ಛೇದಿತ ಮುಸ್ಲಿಂ ಪುರುಷರನ್ನು ಫೇಸ್‌ಬುಕ್ ಮೂಲಕ ಸಂಪರ್ಕಿಸಿ, ವಾಟ್ಸ್‌ಅಪ್‌ನಲ್ಲಿ ಹತ್ತಿರವಾಗಿ, ತನ್ನ ಜೀವನದ ಬಗ್ಗೆ ದುರಂತ ಕಥೆ ಹೆಣೆದು ವಿವಾಹವಾಗುತ್ತಿದ್ದಳು. ಬಳಿಕ ಪತಿಯ ಮೇಲೆ ಕಿರುಕುಳದ ಸುಳ್ಳು ಆರೋಪ ಹೊರಿಸಿ, ದೂರನ್ನು ಹಿಂಪಡೆಯಲು ದುಡ್ಡಿಗೆ ಬೇಡಿಕೆ ಇಡುತ್ತಿದ್ದಳು.
ಆದರೆ ಯಾರಿಗೂ ವಿಚ್ಛೇದನ ಕೊಡುತ್ತಿರಲಿಲ್ಲ. ಈಕೆಯ ಹಿಂದೆ ಒಂದು ಗ್ಯಾಂಗ್ ಇತ್ತು.ಫಾತಿಮಾ ಸರ್ಕಾರಿ ಶಾಲೆಯೊಂದರ ಶಿಕ್ಷಕಿಯಾಗಿದ್ದು, 12 ವರ್ಷದ ಮಗಳೂ ಇದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನ ಹೇಗೆ?:
2022ರಲ್ಲಿ ವಿವಾಹವಾಗಿದ್ದ 8ನೇ ಪತಿ ಇಮ್ರಾನ್ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು 2024ರಲ್ಲಿ ಫಾತಿಮಾಳ ಬಂಧನಕ್ಕೆ ಮುಂದಾಗಿದ್ದಾಗ ಆಕೆ 7 ತಿಂಗಳ ಗರ್ಭಿಣಿಯಾಗಿದ್ದ ಕಾರಣ ಬಚಾವಾಗಿದ್ದಳು. ಆದರೆ ಜು.30ರಂದು, ಫಾತಿಮಾ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಹಿಂಪಡೆಯುವ ನೆಪದಲ್ಲಿ ಆಕೆಯನ್ನು ಕೋರ್ಟ್‌ಗೆ ಕರೆಸಿದ್ದ ಇಮ್ರಾನ್, ಪೊಲೀಸರಿಗೆ ಹಿಡಿದುಕೊಟ್ಟಿದ್ದರು.