ಆಸ್ತಿ ಹಂಚಿಕೆ ಹೇಳಿಕೆ ನೀಡುವಾಗ ಮುಸ್ಲಿಂ ಪದ ಬಳಸಿಲ್ಲ. ಹಿಂದು-ಮುಸ್ಲಿಂ ಭೇದ ಮಾಡೋದಿಲ್ಲ, ಇದು ನನ್ನ ಸಂಕಲ್ಪ ಎಂದು ಹೇಳಿ ವಾರಾಣಸಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ ಮಾಡಿದರು.
‘ಒಂದು ಊರಿನಲ್ಲಿ 200 ಮನೆಗಳಿವೆ ಎಂದುಕೊಳ್ಳೋಣ. ಆಗ ಸರ್ಕಾರದ ಯೋಜನೆ ಎಲ್ಲರಿಗೂ ಮುಟ್ಟಬೇಕು ಎಂದು ನಾನು ಕೆಲಸ ಮಾಡುತ್ತೇನೇ ವಿನಾ, ಆಗ ಆ ಧರ್ಮದವ ಯಾರು? ಈ ಧರ್ಮದವ ಯಾರು ಎಂದು ನೋಡಲು ಹೋಗುವುದಿಲ್ಲ. ಅಲ್ಲಿ 60 ಲಾಭಾರ್ಥಿಗಳು ಇದ್ದರೆ ಎಲ್ಲರಿಗೂ ಜಾತಿ ಭೇದವಿಲ್ಲದೇ ಯೋಜನೆಗಳ ಲಾಭ ತಲುಪಿಸುತ್ತೇನೆ’ ಎಂದರು.‘ನಾನು ಯಾವತ್ತೂ ಮುಸ್ಲಿಮರ ಮೇಲೆ ಪ್ರೀತಿ ಹೊಂದಿದ್ದೇನೆ ಎಂಬ ಹೇಳಿಕೆ ನೀಡುತ್ತ ಅದನ್ನು ಮಾರ್ಕೆಟಿಂಗ್ (ಪ್ರಚಾರ) ಮಾಡಲು ಇಷ್ಟಪಡುವುದಿಲ್ಲ. ಯಾವತ್ತು ಪ್ರಚಾರ ಮಾಡಲು ಇಷ್ಟಪಡುವೆನೋ ಅಂದು ನಾನು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯ ಎನ್ನಿಸಿಕೊಳ್ಳಲ್ಲ. ನಾನು ಮತ ಬ್ಯಾಂಕ್‌ಗಾಗಿ ಕೆಲಸ ಮಾಡುವುದಿಲ್ಲ. ನಾನು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅನ್ನು ನಂಬುತ್ತೇನೆ’ ಎಂದು ಮೋದಿ ಸ್ಪಷ್ಟಪಡಿಸಿದರು.ನನ್ನ ಮನೆಗೆ ಮುಸ್ಲಿಮರ ಊಟ:‘ನೀವು ಮುಸ್ಲಿಮರ ವಿರುದ್ಧ ಇಲ್ಲ ಎಂಬ ಗ್ರಹಿಕೆಯನ್ನು ಮುರಿಯುವಲ್ಲಿ ಏಕೆ ಯಶಸ್ವಿಯಾಗಲಿಲ್ಲ?’ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ‘ಇದು ಮುಸಲ್ಮಾನರ ಪ್ರಶ್ನೆಯಲ್ಲ. 2002ರ ನಂತರ ನನ್ನ ಇಮೇಜ್ ಗೆ ಧಕ್ಕೆಯಾಯಿತು’ ಎಂದು ಹೇಳಿದರು ಹಾಗೂ ತಾವು ಮತ್ತು ತಮ್ಮ ಕುಟುಂಬ ಹೇಗೆ ಬಾಲ್ಯದಲ್ಲಿ ಮುಸ್ಲಿಮರ ಜತೆ ಅನ್ಯೋನ್ಯವಾಗಿತ್ತು ಎಂಬ ಕೆಲವು ಪ್ರಸಂಗಗಳನ್ನು ವಿವರಿಸಿದರು.‘ನನ್ನ ಮನೆಯಲ್ಲಿ, ನನ್ನ ಸುತ್ತಲೂ ಎಲ್ಲಾ ಮುಸ್ಲಿಂ ಕುಟುಂಬಗಳಿದ್ದವು. ನಮ್ಮ ಮನೆಯಲ್ಲೂ ಈದ್ ಆಚರಿಸುತ್ತಿದ್ದರು. ಈದ್ ದಿನದಂದು ನಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ನನ್ನ ಮನೆಗೆ ಎಲ್ಲಾ ಮುಸ್ಲಿಂ ಕುಟುಂಬಗಳಿಂದ ಆಹಾರ ಬರುತ್ತಿತ್ತು. ಮೊಹರಂ ಪ್ರಾರಂಭವಾದಾಗ, ನಾವು ತಾಜಿಯಾ ಅಡಿಯಲ್ಲಿ ನಡೆದುಕೊಂಡು ಸಾಗಲು ನಮಗೆ ಕಲಿಸಲಾಗಿತ್ತು. ನಾನು ಆ ಜಗತ್ತಿನಲ್ಲಿ ಬೆಳೆದೆ. ಇಂದಿಗೂ ನನ್ನ ಅನೇಕ ಸ್ನೇಹಿತರು ಮುಸ್ಲಿಮರಾಗಿದ್ದಾರೆ’ ಎಂದು ಹೇಳಿದರು.‘2002ರ ನಂತರ (ಗುಜರಾತ್ ಗಲಭೆ ನಂತರ) ನನ್ನ ಇಮೇಜ್‌ಗೆ ಧಕ್ಕೆಯಾದಾಗ ನೆಲದ ವಾಸ್ತವತೆಯನ್ನು ಅರಿಯಲು ಸಮೀಕ್ಷೆ ನಡೆಸಿದ್ದೆ’ ಎಂದ ಪ್ರಧಾನಿ ಆ ಸಮೀಕ್ಷೆಯಲ್ಲಿ ಏನಾಯಿತೆಂಬ ಸ್ವಾರಸ್ಯಕರ ಮಾಹಿತಿ ಬಿಚ್ಚಿಟ್ಟರು.‘ಅಹಮದಾಬಾದ್‌ನಲ್ಲಿ ಮಾಣೆಕ್ ಚೌಕ್ ಎಂಬ ಸ್ಥಳವಿದೆ. ಅಲ್ಲಿ ಜನರು ಸಂಜೆ ತಿಂಡಿ ತಿನ್ನಲು ಹೋಗುತ್ತಾರೆ. ಅಲ್ಲಿನ ಎಲ್ಲ ವ್ಯಾಪಾರಿಗಳು ಮುಸ್ಲಿಮರು ಮತ್ತು ಎಲ್ಲಾ ಖರೀದಿದಾರರು ಹಿಂದೂಗಳು. 2002ರಲ್ಲಿ ಆ ಮಾರುಕಟ್ಟೆಯಲ್ಲಿ ಸಮೀಕ್ಷೆ ನಡೆಸಲು ಕೆಲವರನ್ನು ಕಳುಹಿಸಿದ್ದೆ. ಸಮೀಕ್ಷೆ ಮಾಡುವವರಲ್ಲಿ ಒಬ್ಬ ವ್ಯಕ್ತಿ ನನ್ನ ವಿರುದ್ಧ ಮಾತನಾಡಿದ. ಆಗ ಅಂಗಡಿಯವನು ಅವನನ್ನು ತಡೆದು ‘ಮೋದಿ ವಿರುದ್ಧ ಒಂದು ಮಾತು ಹೇಳಬೇಡಿ. ಇಂದು ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ ಎಂದರೆ ಅದು ಮೋದಿಯವರಿಂದಾಗಿ’ ಎಂದ. ಸುಮಾರು ಶೇ.90 ಅಂಗಡಿ ಮಾಲೀಕರು ಇದೇ ಮಾತು ಹೇಳಿದರು’ ಎಂದು ಮೋದಿ ವಿವರಿಸಿದರು.