ಮೋದಿ ಟೀಂ ಇಂಡಿಯಾ ಮಂತ್ರ : ಒಂದಾಗಿ ಕೆಲಸ ಮಾಡಿದರೆ ಯಾವುದೇ ಗುರಿ ತಲುಪುವುದು ಕಷ್ಟವಲ್ಲ

Published : May 25, 2025, 06:35 AM IST
Prime Minister Narendra Modi at Rising North East Investors Summit 2025. (Photo/ANI)

ಸಾರಾಂಶ

‘ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಟೀಂ ಇಂಡಿಯಾ ರೀತಿ ಒಂದಾಗಿ ಕೆಲಸ ಮಾಡಿದರೆ ಯಾವುದೇ ಗುರಿ ತಲುಪುವುದು ಕಷ್ಟಕರವಲ್ಲ

  ನವದೆಹಲಿ : ‘ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಟೀಂ ಇಂಡಿಯಾ ರೀತಿ ಒಂದಾಗಿ ಕೆಲಸ ಮಾಡಿದರೆ ಯಾವುದೇ ಗುರಿ ತಲುಪುವುದು ಕಷ್ಟಕರವಲ್ಲ. ರಾಜ್ಯಗಳು ‘1 ರಾಜ್ಯ, 1 ಅಂತಾರಾಷ್ಟ್ರೀಯ ಪ್ರವಾಸಿ ಸ್ಥಳ’ ಪರಿಕಲ್ಪನೆಯ ಅಡಿ ತಮ್ಮ ರಾಜ್ಯದ ಕನಿಷ್ಠ ಒಂದು ಪ್ರವಾಸಿ ಸ್ಥಳವನ್ನಾದರೂ ಅಂತಾರಾಷ್ಟ್ರೀಯ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ರಾಜ್ಯಗಳು ವಿಕಸಿತವಾದಾಗ ದೇಶ ವಿಕಸಿತವಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯಲ್ಲಿ ಶನಿವಾರ ಮಾತನಾಡಿದರು. ‘2024ರ ವಿಕಸಿತ ಭಾರತಕ್ಕೆ ವಿಕಸಿತ ರಾಜ್ಯ’ ಈ ಬಾರಿಯ ಆಯೋಗದ ಸಭೆಯ ಮುಖ್ಯ ವಿಷಯವಾಗಿತ್ತು.

ರಾಜ್ಯಗಳು ವಿಕಸಿತವಾಗಲಿ:

‘ದೇಶದಲ್ಲಿ ಅಭಿವೃದ್ಧಿಗೆ ವೇಗ ನೀಡುವ ಅಗತ್ಯವಿದ್ದು, ಈಗಾಗಲೇ ನಾವು ಅದರ ವೇಗ ಹೆಚ್ಚಿಸಿದ್ದೇವೆ. ವಿಕಸಿತ ಭಾರತ ಎಲ್ಲಾ ಭಾರತೀಯರ ಗುರಿ. ಪ್ರತಿ ರಾಜ್ಯವೂ ವಿಕಸಿತವಾದಾಗ ಭಾರತದ ವಿಕಾಸ ಸಾಧ್ಯವಾಗುತ್ತದೆ. ವಿಕಸಿತ ಭಾರತವು 140 ಕೋಟಿ ಭಾರತೀಯರ ಆಕಾಂಕ್ಷೆ’ ಎಂದರು.

‘ನಾವು ಪ್ರತಿ ರಾಜ್ಯಗಳು, ಪ್ರತಿ ನಗರಗಳು, ಪ್ರತಿ ಪಾಲಿಕೆಗಳು ಮತ್ತು ಪ್ರತಿ ಗ್ರಾಮಗಳು ವಿಕಸಿತ ಆಗಬೇಕೆಂಬ ಗುರಿ ಇಟ್ಟುಕೊಳ್ಳಬೇಕು. ಈ ಏಕಗುರಿಯೊಂದಿಗೆ ಕೆಲಸ ಮಾಡಿದಾಗ ವಿಕಸಿತ ಭಾರತಕ್ಕಾಗಿ 2047ರ ವರೆಗೆ ಕಾಯಬೇಕಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮಕ್ಕೆ ಒತ್ತು:

‘ಅಂತಾರಾಷ್ಟ್ರೀಯ ಮಾದರಿಯಲ್ಲಿ ಎಲ್ಲಾ ಸೌಲಭ್ಯಗಳು ಮತ್ತು ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಗಳು ಕನಿಷ್ಠ ಒಂದು ಪ್ರವಾಸೋದ್ಯಮ ಸ್ಥಳವನ್ನಾದರೂ ಅಭಿವೃದ್ಧಿಪಡಿಸಬೇಕು. ‘ಒಂದು ರಾಜ್ಯ; ಒಂದು ಅಂತಾರಾಷ್ಟ್ರೀಯ ಪ್ರವಾಸಿ ಸ್ಥಳ’ ಪರಿಕಲ್ಪನೆಯು ಆಸುಪಾಸಿನ ನಗರಗಳನ್ನೂ ಪ್ರವಾಸಿ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸಲು ದಾರಿ ಮಾಡಿಕೊಡುತ್ತದೆ. ಭಾರತದಲ್ಲಿ ತೀವ್ರಗತಿಯಲ್ಲಿ ನಗರೀಕರಣವಾಗುತ್ತಿದ್ದು, ನಾವು ಭವಿಷ್ಯದ ನಗರಗಳನ್ನು ನಿರ್ಮಿಸುವ ಕುರಿತು ಕೆಲಸ ಮಾಡಬೇಕು’ ಎಂದು ಹೇಳಿದರು.

ಬೆಳವಣಿಗೆ, ಆವಿಷ್ಕಾರ ಮತ್ತು ಸುಸ್ಥಿರತೆಯು ಭಾರತದ ನಗರಗಳ ಅಭಿವೃದ್ಧಿಯ ಚಾಲಕ ಶಕ್ತಿಯಾಗಬೇಕು ಎಂದ ಅವರು, ಮಹಿಳೆಯರಿಗೆ ಕೆಲಸದ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ನೀಡುವ ಕುರಿತೂ ಪ್ರಸ್ತಾಪಿಸಿದರು. ಈ ನಿಟ್ಟಿನಲ್ಲಿ ಕಾನೂನುಗಳು ಮತ್ತು ನೀತಿಗಳನ್ನು ರೂಪಿಸಬೇಕಿದೆ ಎಂದೂ ತಿಳಿಸಿದರು.

‘ಅಭಿವೃದ್ಧಿ ವಿಚಾರದಲ್ಲಿ ಇರುವ ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸಿ ಅಭಿವೃದ್ಧಿ ತೀವ್ರಗೊಳಿಸಬೇಕು’ ಎಂದು ಸಿಎಂಗಳಿಗೆ ಮೋದಿ ಮನವಿ ಮಾಡಿದರು.

ಆಪರೇಷನ್‌ ಸಿಂದೂರಕ್ಕೆ ಮೆಚ್ಚುಗೆ:

ಈ ನಡುವೆ, ಸಭೆಯು ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್‌ ಸಿಂದೂರಕ್ಕೆ ಮೆಚ್ಚುಗೆ ಸೂಚಿಸಿತು. ಆಪರೇಷನ್‌ ಸಿಂದೂರ ಕಾರ್ಯಾಚರಣೆ ಬಳಿಕ ನಡೆಯುತ್ತಿರುವ ನೀತಿ ಆಯೋಗದ ಮೊದಲ ಸಭೆ ಇದಾಗಿತ್ತು.

ನೀತಿ ಆಯೋಗದ ಆಡಳಿತ ಮಂಡಳಿಯು ಎಲ್ಲಾ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್‌ ಗವರ್ನರ್‌ಗಳು ಮತ್ತು ಹಲವು ಕೇಂದ್ರ ಸಚಿವರನ್ನು ಒಳಗೊಂಡಿದೆ. ಪ್ರಧಾನಿ ಇದರ ಅಧ್ಯಕ್ಷರಾಗಿದ್ದಾರೆ.

ಸಭೆಯಲ್ಲಿ ಸಿಎಂಗಳಾದ ತಮಿಳುನಾಡಿನ ಎಂ.ಕೆ ಸ್ಟಾಲಿನ್‌, ಆಂಧ್ರದ ಚಂದ್ರಬಾಬು ನಾಯ್ಡ, ಪಂಜಾಬ್‌ನ ಭಗವಂತ ಮಾನ್‌, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ, ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್‌, ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ, ಪ್ರಹ್ಲಾದ ಜೋಶಿ ಮೊದಲಾದವರಿದ್ದರು.

5 ರಾಜ್ಯಗಳು ಗೈರು

ನೀತಿ ಆಯೋಗದ ಸಭೆಗೆ 36 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪೈಕಿ 31 ರಾಜ್ಯಗಳ ಸಿಎಂಗಳು/ಪ್ರತಿನಿಧಿಗಳು ಭಾಗಿಯಾಗಿದ್ದರು. ಇದು ಹಿಂದೆಂದಿಗಿಂತ ಉತ್ತಮ ಹಾಜರಾತಿ. ಆದರೆ ಕರ್ನಾಟಕ, ಕೇರಳ, ಪ.ಬಂಗಾಳ, ಬಿಹಾರ ಹಾಗೂ ಪುದುಚೇರಿ ಸಿಎಂಗಳು ಗೈರು ಹಾಜರಾಗಿದ್ದರು ಎಂದು ನೀತಿ ಆಯೋಗ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಹೇಳಿದ್ದಾರೆ.

ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳಿಗೆ 50% ಕೊಡಿ: ತ.ನಾಡು ಸಿಎಂ ಆಗ್ರಹ 

ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳಿಗೆ ಶೇ.50 ಪಾಲು ಸಿಗಬೇಕು. ಕೇಂದ್ರ ತಡೆಹಿಡಿದಿರುವ 2,200 ಕೋಟಿ ರು. ಶೈಕ್ಷಣಿಕ ನಿಧಿಯನ್ನು ಬಿಡುಗಡೆ ಮಾಡಬೇಕು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಆಗ್ರಹಿಸಿದರು.

PREV
Read more Articles on

Latest Stories

ದಿನಕ್ಕೆ 8 ರೈತರ ಆತ್ಮ ಹತ್ಯೆ ಇದ್ರೂ ಕಲಾಪದಲ್ಲಿ ಕೃಷಿ ಸಚಿವ ರಮ್ಮಿ ಆಟ!
ಅವಳಲ್ಲ ಅವನು : ನೇಹಾ ಹೆಸರಲ್ಲಿ ಅಕ್ರಮ ವಾಸ - ಬಾಂಗ್ಲಾ ಅಬ್ದುಲ್‌ ಕಲಾಂ ಸೆರೆ
ಲಿಕ್ಕರ್‌ ಹಗರಣ : ಮಾಜಿ ಸಿಎಂ ಜಗನ್‌ಗೆ ಮಾಸಿಕ ₹60 ಕೋಟಿ