ಪಿಟಿಐ ಅಯೋಧ್ಯೆ
ನೂತನ ರಾಮಮಂದಿರದ ಮೂಲಕ ಕೋಟ್ಯಂತರ ಭಕ್ತರ ಸ್ವಾಗತಕ್ಕೆ ಸಜ್ಜಾಗಿರುವ ರಾಮನ ನಗರಿ ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಲಿದ್ದಾರೆ. ರಾಮಮಂದಿರ ಉದ್ಘಾಟನೆಗೂ ಮುನ್ನ ನಡೆಯಲಿರುವ ಈ ಭೇಟಿ ವೇಳೆ ಅಯೋಧ್ಯೆಯಲ್ಲಿ ಹೊಸ ವಿಮಾನ ನಿಲ್ದಾಣ, ಮರು ಅಭಿವೃದ್ಧಿಗೊಂಡ ರೈಲು ನಿಲ್ದಾಣವನ್ನು ಮೋದಿ ಉದ್ಘಾಟಿಸಲಿದ್ದಾರೆ.ಜೊತೆಗೆ 11 ಸಾವಿರ ಕೋಟಿ ರು. ಮೌಲ್ಯದ ಅಯೋಧ್ಯೆ ಅಭಿವೃದ್ಧಿ ಕಾಮಗಾರಿ ಹಾಗೂ ಉತ್ತರ ಪ್ರದೇಶದ 4,600 ಕೋಟಿ ರು. ಅಭಿವೃದ್ಧಿ ಯೋಜನೆಗಳಿಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ. ಹೀಗಾಗಿ ಪ್ರಧಾನಿ ಸ್ವಾಗತಕ್ಕೆ ರಾಮಜನ್ಮಭೂಮಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇನ್ನು 6 ವಂದೇ ಭಾರತ್ ರೈಲು ಹಾಗೂ ಅಯೋಧ್ಯೆ ಮೂಲಕ ಹಾದು ಹೋಗುವ ರೈಲು ಸೇರಿ 2 ಅಮೃತ್ ಭಾರತ್ ರೈಲುಗಳಿಗೂ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ. ಇದಲ್ಲದೇ ರಾಮ ಮಂದಿರಕ್ಕೆ ಪ್ರವೇಶವನ್ನು ಹೆಚ್ಚಿಸಲು ರೂಪಿಸಲಾಗಿರುವ ನಾಲ್ಕು ರಸ್ತೆಗಳಾದ ರಾಮಪಥ, ಭಕ್ತಿಪಥ, ಧರ್ಮಪಥ ಮತ್ತು ಶ್ರೀ ರಾಮ ಜನ್ಮಭೂಮಿ ಪಥಗಳನ್ನು ಸಹ ಅವರು ಉದ್ಘಾಟಿಸಲಿದ್ದಾರೆ. ₹2183 ಕೋಟಿ ವೆಚ್ಚದ ಹೊಸ ಅಯೋಧ್ಯೆ ಟೌನ್‌ಶಿಪ್ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.15 ಕಿ.ಮೀ. ರೋಡ್ ಶೋ:ಈ ನಡುವೆ, ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ತೆರಳುವಾಗ ಮೋದಿ ಸುಮಾರು 15 ಕಿ.ಮೀ ದೂರದ ಪ್ರದೇಶದಲ್ಲಿ ರೋಡ್‌ಶೋ ನಡೆಸಲಿದ್ದಾರೆ. ಮೋದಿ ಏರ್‌ಪೋರ್ಟ್ ಉದ್ಘಾಟಿಸುತ್ತಿದ್ದಂತೆಯೇ, ಬೆಳಗ್ಗೆ 10 ಗಂಟೆಗೆ ದೆಹಲಿ ಬಿಡಲಿರುವ ಮೊದಲ ವಿಮಾನವು (ಏರ್ ಇಂಡಿಯಾ ವಿಮಾನ) 11.20ಕ್ಕೆ ಅಯೋಧ್ಯೆ ತಲುಪಲಿದೆ.ಕಾರ್ಯಕ್ರಮದ ವಿವರ ನೀಡಿರುವ ಅಧಿಕಾರಿಗಳು, ‘ಪ್ರಧಾನಿ ಅವರು ಬೆಳಿಗ್ಗೆ 10:45ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ಅವರು ನೇರವಾಗಿ ಅಯೋಧ್ಯೆ ರೈಲು ನಿಲ್ದಾಣಕ್ಕೆ ತೆರಳಿ ಮರು ಅಭಿವೃದ್ಧಿ ಮಾಡಿದ ‘ಅಯೋಧ್ಯೆ ಧಾಮ ಜಂಕ್ಷನ್’ ರೈಲು ನಿಲ್ದಾಣವನ್ನು ಉದ್ಘಾಟಿಸುತ್ತಾರೆ. ನಂತರ ಅವರು ವಿಮಾನ ನಿಲ್ದಾಣಕ್ಕೆ ಹಿಂತಿರುಗಿ, ‘ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ’ದ ಉದ್ಘಾಟನೆ ಮಾಡುತ್ತಾರೆ. ಅಯೋಧ್ಯೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಲ್ಲಿಂದಲೇ ಚಾಲನೆ ನೀಡುತ್ತಾರೆ. ನಂತರ ಅವರು ಏರ್‌ಪೋರ್ಟ್ ಸನಿಹ ಬೃಹತ್ ಜನಸಭೆ (ರ್‍ಯಾಲಿ) ನಡೆಸಲಿದ್ದು, ಸಭೆಗೆ ಸುಮಾರು 1.5 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ನಂತರ ಪ್ರಧಾನಿ ಅಯೋಧ್ಯೆಯಿಂದ ನಿರ್ಗಮಿಸಲಿದ್ದಾರೆ’ ಎಂದು ಹೇಳಿದರು.
ಖಲಿಸ್ತಾನಿ ಉಗ್ರ ಪನ್ನು ಬೆದರಿಕೆ:ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು, ಪ್ರಧಾನಿ ನರೇಂದ್ರ ಮೋದಿ ಅವರ ಅಯೋಧ್ಯೆ ರ್‍ಯಾಲಿಯನ್ನು ಗುರಿಯಾಗಿಸಿ ದಾಳಿ ಮಾಡುವಂತೆ ಉತ್ತರಪ್ರದೇಶದ ಮುಸ್ಲಿಮರಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ತುಂಬ ಭಾರಿ ಸರ್ಪಗಾವಲು ಹಾಕಲಾಗಿದೆ. ಅರೆಸೇನಾ ಪಡೆಗಳು ಸೇರಿದಂತೆ ವಿವಿಧ ಪಡೆಗಳನ್ನು ನಿಯೋಜಿಸಲಾಗಿದೆ.
ಅಯೋಧ್ಯೆಯಲ್ಲಿ ಇಂದು1.ಬೆಳಗ್ಗೆ 10.45ಕ್ಕೆ ಏರ್‌ಪೋರ್ಟ್‌ಗೆ ಮೋದಿ ಆಗಮನ, ನೇರವಾಗಿ ರೈಲು ನಿಲ್ದಾಣಕ್ಕೆ2. ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ 15 ಕಿ.ಮೀ. ಮೋದಿ ರೋಡ್ ಶೋ3. ಏರ್‌ಪೋರ್ಟ್ ಮಾದರಿಯಲ್ಲಿ ನವೀಕರಣಗೊಂಡ ಅಯೋಧ್ಯೆ ರೈಲು ನಿಲ್ದಾಣ ಉದ್ಘಾಟನೆ4. ಬಳಿಕ ರಾಮಮಂದಿರ ರೀತಿಯಲ್ಲಿ ನಿರ್ಮಾಣಗೊಂಡ ಹೊಸ ವಿಮಾನ ನಿಲ್ದಾಣ ಉದ್ಘಾಟನೆ 5. ಅಯೋಧ್ಯೆಯ ರಾಮಪಥ, ಭಕ್ತಿಪಥ, ಧರ್ಮಪಥ ಮತ್ತು ಶ್ರೀರಾಮ ಜನ್ಮಭೂಮಿ ಪಥ ಉದ್ಘಾಟನೆ6. ₹ 2183 ಕೋಟಿ ವೆಚ್ಚದ ಹೊಸ ಅಯೋಧ್ಯೆ ಟೌನ್‌ಶಿಪ್ ಯೋಜನೆಗೆ ಮೋದಿ ಶಂಕುಸ್ಥಾಪನೆ 7. ಬಳಿಕ ಏರ್‌ಪೋರ್ಟ್ ಸನಿಹ 1.5 ಲಕ್ಷ ಜನರನ್ನು ಉದ್ದೇಶಿಸಿ ಭಾಷಣ, ನಂತರ ದಿಲ್ಲಿಗೆ ವಾಪಸ್