ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೋದಿ ಏಕಾಂಗಿಯಾಗಿ ನರೇಗಾ ಯೋಜನೆ ನಾಶಪಡಿಸಿದರು. ಗ್ರಾಮೀಣ ಆರ್ಥಿಕತೆ ಹಾಳು ಮಾಡಿ, ಬಡವರ ಮೇಲೆ ನೇರ ದಾಳಿ ಮಾಡಿದರು ಎಂದಿದ್ದಾರೆ.
ಸಿಡಬ್ಲ್ಯೂಸಿ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಪ್ರಧಾನಿ ನರೇಂದ್ರ ಮೋದಿಯವರು ಸಂಪುಟದಲ್ಲಿ ಚರ್ಚಿಸದೆ, ಅಧ್ಯಯನ ಮಾಡದೇ ಒಬ್ಬಂಟಿಯಾಗಿ ನರೇಗಾ ಯೋಜನೆಯನ್ನು ಹಾಳು ಮಾಡಿದರು. ನಾವು ಇದನ್ನು ವಿರೋಧಿಸಿ, ಹೋರಾಡುತ್ತೇವೆ. ಇದರ ವಿರುದ್ಧ ವಿಪಕ್ಷಗಳು ಒಟ್ಟಿಗೆ ನಿಲ್ಲುತ್ತವೆ ಎಂಬ ವಿಶ್ವಾಸವಿದೆ’ ಎಂದರು.
ಬಳಿಕ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಅವರು, ‘ಯೋಜನೆ ಅಂತ್ಯದ ಹಿಂದೆ ಬಡವರ ಉದ್ಯೋಗದ ಹಕ್ಕನ್ನು ಅಳಿಸು ವುದು, ರಾಜ್ಯಗಳಿಂದ ಆರ್ಥಿಕ ಮತ್ತು ರಾಜಕೀಯ ಹಕ್ಕನ್ನು ಕಸಿದು, ಆ ಹಣವನ್ನು ಕೋಟ್ಯಧಿಪತಿ ಸ್ನೇಹಿತರಿಗೆ ಹಸ್ತಾಂತರಿ ಸುವ ಏಕೈಕ ಉದ್ದೇಶವಿದೆ. ಇದರಿಂದ ಗ್ರಾಮೀಣ ಆರ್ಥಿಕತೆ ಕುಸಿಯುತ್ತಿದೆ. ಹಳ್ಳಿಗಳು ದುರ್ಬಲಗೊಂಡಾಗ ದೇಶವು ದುರ್ಬಲಗೊಳ್ಳುತ್ತದೆ, ಇದು ರಾಜ್ಯಗಳು ಮತ್ತು ಬಡ ಜನರ ಮೇಲಿನ ವಿನಾಶಕಾರಿ ದಾಳಿ, ಇದನ್ನು ಪ್ರಧಾನಿ ಏಕಾಂಗಿಯಾಗಿ ನೋಟು ಅಮಾನ್ಯೀಕರಣದಂತೆಯೇ ನಡೆಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.