ಯುವ ಯೋಧರು ಬೇಕೆಂದು ಅಗ್ನಿವೀರರ ನೇಮಕ: ಇದು ಸೇನೆ ಕೈಗೊಂಡ ಅಗತ್ಯ ಸುಧಾರಣಾ ಕ್ರಮ - ಮೋದಿ

KannadaprabhaNewsNetwork |  
Published : Jul 27, 2024, 12:46 AM ISTUpdated : Jul 27, 2024, 06:26 AM IST
ಮೋದಿ | Kannada Prabha

ಸಾರಾಂಶ

‘ಅಗ್ನಿವೀರ್‌ ಯೋಜನೆಯು ಸೇನೆ ಕೈಗೊಂಡ ಅಗತ್ಯ ಸುಧಾರಣಾ ಕ್ರಮಗಳಿಗೆ ಅತ್ಯುತ್ತಮ ಉದಾಹರಣೆಯಾಗಿದೆ ಹಾಗೂ ಬಲಿಷ್ಠ ಯುವ ಸೇನೆಯನ್ನು ಕಟ್ಟುವ ಉದ್ದೇಶ ಹೊಂದಿದೆ.

   ದ್ರಾಸ್ (ಕಾರ್ಗಿಲ್) : ಸೇನೆಗೆ 4 ವರ್ಷಗಳ ತಾತ್ಕಾಲಿಕ ಅವಧಿಗೆ ಸೈನಿಕರನ್ನು ನೇಮಿಸಿಕೊಳ್ಳುವ ಅಗ್ನಿಪಥ್ (ಅಗ್ನಿವೀರ) ಯೋಜನೆ ವಿರುದ್ಧ ನಿರಂತರ ಪ್ರಹಾರ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಯೋಜನೆಯು ಸೇನೆ ಕೈಗೊಂಡ ಅಗತ್ಯ ಸುಧಾರಣಾ ಕ್ರಮಗಳಿಗೆ ಅತ್ಯುತ್ತಮ ಉದಾಹರಣೆಯಾಗಿದೆ ಹಾಗೂ ಬಲಿಷ್ಠ ಯುವ ಸೇನೆಯನ್ನು ಕಟ್ಟುವ ಉದ್ದೇಶ ಹೊಂದಿದೆ. ಆದರೆ ಈ ವಿಷಯದಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ’ ಎಂದು ಆರೋಪಿಸಿದ್ದಾರೆ.

ಶುಕ್ರವಾರ ಕಾರ್ಗಿಲ್ ವಿಜಯದ 25ನೇ ವಾರ್ಷಿಕೋತ್ಸವದ ಅಂಗವಾಗಿ ಲಡಾಖ್‌ನ ದ್ರಾಸ್‌ಗೆ ಭೇಟಿ ನೀಡಿದ ಮೋದಿ, ಕಾರ್ಗಿಲ್‌ ಸ್ಮಾರಕಕ್ಕೆ ನಮನ ಸಲ್ಲಿಸಿ ಮಾತನಾಡಿ, ‘ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯದ ಬಗ್ಗೆ ಕೆಲವರು ರಾಜಕೀಯ ಮಾಡುತ್ತಿದ್ದಾರೆ ಮತ್ತು ಪಿಂಚಣಿ ಹಣವನ್ನು ಉಳಿಸಲು ಅಗ್ನಿಪಥ್ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಸುಳ್ಳು ಹರಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಅಗ್ನಿವೀರರ ನೇಮಕದ ಹಿಂದಿನ ಕಾರಣ ವಿವರಿಸಿದ ಅವರು, ‘ಭಾರತೀಯ ಸೈನಿಕರ ಸರಾಸರಿ ವಯಸ್ಸು ಜಾಗತಿಕ ಸರಾಸರಿಗಿಂತ ಹೆಚ್ಚಿರುವುದು ಕಳವಳಕಾರಿಯಾಗಿದೆ. ಹೀಗಾಗಿ ಸೇನೆಯು ಯುವಕರಿಂದ ತುಂಬಿರಬೇಕು ಎಂಬ ಚರ್ಚೆಗಳು ದಶಕದಿಂದ ನಡೆದಿದ್ದವು. ಆದರೆ ಅದನ್ನು ಜಾರಿಗೊಳಿಸು ಇಚ್ಛಾಶಕ್ತಿಯನ್ನು ಯಾರೂ ಮೊದಲೇ ತೋರಲಿಲ್ಲ. ಆದರೆ ನಾವು ಇದನ್ನು ಜಾರಿಗೆ ತಂದು ದೇಶದ ಬಗ್ಗೆ ಕಾಳಜಿ ಪ್ರದರ್ಶಿಸಿದೆವು’ ಎಂದರು.

‘ಅಗ್ನಿಪಥದ ಗುರಿಯು ಪಡೆಗಳನ್ನು ಯುವಕರನ್ನಾಗಿಸುವುದಾಗಿದೆ ಹಾಗೂ ಸೇನೆಗಳನ್ನು ನಿರಂತರವಾಗಿ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಇಡುವುದಾಗಿದೆ, ಆದರೆ ದುರದೃಷ್ಟವಶಾತ್, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಇಂತಹ ಸೂಕ್ಷ್ಮ ವಿಷಯವನ್ನು ಕೆಲವರು ರಾಜಕೀಯ ವಿಷಯವನ್ನಾಗಿ ಮಾಡಿದ್ದಾರೆ. ಸೇನೆಯ ಈ ಸುಧಾರಣೆಯಲ್ಲೂ ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಬೇಸರಿಸಿದರು.‘ಪಿಂಚಣಿ ಹಣ ಉಳಿಸಲು ಸರ್ಕಾರ ಈ ಯೋಜನೆ ತಂದಿದೆ ಎಂಬ ತಪ್ಪು ಕಲ್ಪನೆಯನ್ನೂ ಕೆಲವರು ಹಬ್ಬಿಸುತ್ತಿದ್ದಾರೆ. ಆದರೆ ಪಿಂಚಣಿ ಪ್ರಶ್ನೆ ಬರುವುದು ಸೈನಿಕರು ನಿವೃತ್ತಿ ಆದ ನಂತರ. ಅಂದರೆ 30 ವರ್ಷ ನಂತರ. 30 ವರ್ಷ ನಂತರ ಹಣ ಉಳಿಸಲು ಯೋಚಿಸಿ ಈಗ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆಯೇ? ನಮಗೆ ದೇಶದ ಭದ್ರತೆಯೇ ಮುಖ್ಯ, ರಾಜಕೀಯವಲ್ಲ’ ​​ಎಂದು ಪ್ರಹಾರ ನಡೆಸಿದರು.

ಅಲ್ಲದೆ, 4 ವರ್ಷದ ಸೇವೆಯ ನಂತರ ಅಗ್ನಿವೀರರನ್ನು ಸರ್ಕಾರ ಕೈಬಿಡುವುದಿಲ್ಲ. ವಿವಿಧ ಪೊಲೀಸ್‌ ಹಾಗೂ ಅರೆಸೇನಾಪಡೆಗಳಿಗೆ ಅವರನ್ನು ನೇಮಿಸಿಕೊಳ್ಳುವ ಯೋಜನೆ ಜಾರಿಗೆ ತರುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಸಷ್ಟಪಡಿಸಿದರು.ಈ ವೇಳೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ‘ಇಂದು ದೇಶದ ಯುವಕರನ್ನು ದಾರಿ ತಪ್ಪಿಸುತ್ತಿರುವ ವಿಪಕ್ಷಗಳು ಅಧಿಕಾರದಲ್ಲಿದ್ದಾಗ ಸಾವಿರಾರು ಕೋಟಿ ಸೇನಾ ಹಗರಣಗಳನ್ನು ಮಾಡಿ ನಮ್ಮ ಪಡೆಗಳನ್ನು ದುರ್ಬಲಗೊಳಿಸಿದವು. ಭಾರತೀಯ ವಾಯುಪಡೆಗಾಗಿ ಆಧುನಿಕ ಯುದ್ಧ ವಿಮಾನಗಳನ್ನು ಖರೀದಿಸಲು ಹಿಂದೇಟು ಹಾಕಿದರು. ಇವರಿಗೆ ಸೈನಿಕರ ಬಗ್ಗೆ ಕಾಳಜಿ ಇಲ್ಲ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ₹500 ಕೋಟಿ ಇಡುಗಂಟು ತೋರಿಸಿ ಯೋಧರಿಗೆ ಏಕ ಶ್ರೇಣಿ ಏಕ ಪಿಂಚಣಿ ಜಾರಿ ಮಾಡುತ್ತೇವೆ ಎಂದು ಎಂದು ಸುಳ್ಳು ಹೇಳಿದರು. ಆದರೆ ನಮ್ಮ ಸರ್ಕಾರ ಮಾಜಿ ಸೈನಿಕರಿಗೆ 1.25 ಲಕ್ಷ ಕೋಟಿ ರು. ನೀಡಿ ಏಕಶ್ರೇಣಿ ಏಕ ಪಿಂಚಣಿ ಜಾರಿಗೆ ತಂದಿತು. 500 ಕೋಟಿ ರು. ಎಲ್ಲಿ? 125 ಕೋಟಿ ರು. ಎಲ್ಲಿ?’ ಎಂದು ಪ್ರಶ್ನಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸಲ್ಲ: ದೋವಲ್‌
ಅಮೆರಿಕ ನಿಗೂಢ ಅಸ್ತ್ರದಿಂದ ವೆನಿಜುವೆಲನ್ನರಿಗೆ ರಕ್ತ ವಾಂತಿ!