ಡೆಹ್ರಾಡೂನ್: ಕಿರಿಯ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಹಿರಿಯ ವೈದ್ಯಕೀಯ ಸಿಬ್ಬಂದಿ ಬಂಧಿಸಲು ಪೊಲೀಸರು ಆಸ್ಪತ್ರೆಯ 6ನೇ ಮಹಡಿಯ ವಾರ್ಡ್‌ನೊಳಗೆ ಜೀಪ್ ನುಗ್ಗಿಸಿದ ಅಚ್ಚರಿಯ ಘಟನೆಯೊಂದು ಉತ್ತರಾಖಂಡದ ಋಷಿಕೇಷದಲ್ಲಿರುವ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಲೈಂಗಿಕ ಕಿರುಕುಳದ ಘಟನೆ ಬಳಿಕ ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವೈದ್ಯಕೀಯ ಸಿಬ್ಬಂದಿಯನ್ನು ನಡೆಸಿಕೊಂಡು ಕರೆದುಕೊಂಡು ಬಂದಿದ್ದರೆ ಆತನ ಮೇಲೆ ಹಲ್ಲೆ ಆಗುವ ಸಾಧ್ಯತೆ ಇತ್ತು. ಹೀಗಾಗಿ ನೆಲ ಮಹಡಿಯಲ್ಲಿನ ತುರ್ತುಚಿಕಿತ್ಸಾ ಘಟಕದ ಮೂಲಕ ಜೀಪ್ ನುಗ್ಗಿಸಿ ಅಲ್ಲಿದ್ದ ಮಾರ್ಗದ ಮೂಲಕ ನೇರವಾಗಿ 6ನೇ ಮಹಡಿ ಪ್ರವೇಶಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣ ಹಿನ್ನೆಲೆ:
ಈ ಬಗ್ಗೆ ವೈದ್ಯೆ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಸತೀಶ್ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ್ದರು. ವಿಷಯ ಕೈಮೀರಿದ್ದನ್ನು ಅರಿತು ಸತೀಶ್ ಅನಾರೋಗ್ಯದ ನೆಪಹೇಳಿ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ.
ಈ ನಡುವೆ ಸತೀಶ್ ವಿರುದ್ಧದ ಪ್ರಕರಣದ ತನಿಖೆಗೆ ಆಗಮಿಸಿದ ಪೊಲೀಸರಿಗೆ ಆಸ್ಪತ್ರೆ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಕಂಡುಬಂತು. ಈ ಹಂತದಲ್ಲಿ ಆರೋಪಿಯನ್ನು ಬಂಧಿಸಿ ಕರೆತಂದರೆ ಆತನ ಮೇಲೆ ಹಲ್ಲೆಯಾಗುವ ಸಾಧ್ಯತೆ ಮನಗಂಡ ಪೊಲೀಸರು ಆಸ್ಪತ್ರೆಯೊಳಗೆ ಆ್ಯಂಬುಲೆನ್ಸ್ ಪ್ರವೇಶಿಸಲು ಇರುವ ಮಾರ್ಗದಲ್ಲಿ ಜೀಪನ್ನು ನುಗ್ಗಿಸಿದರು.ಹೀಗೆ ವಾಹನ ತೆರಳುವ ಮೊದಲ ಮಹಡಿಯಲ್ಲಿ ತುರ್ತುಚಿಕಿತ್ಸಾ ಘಟಕ ಇತ್ತು. ಅಲ್ಲಿಯೂ ನಿಧಾನವಾಗಿ ಜೀಪ್ ಕೊಂಡೊಯ್ದ ಪೊಲೀಸರು ಬಳಿಕ 6ನೇ ಮಹಡಿಯ ವಾರ್ಡ್‌ಗೆ ಪ್ರವೇಶಿಸಿ ಅಲ್ಲಿ ಆರೋಪಿ ಸತೀಶ್ ಕುಮಾರ್‌ನನ್ನು ವಶಕ್ಕೆ ಪಡೆದುಕೊಂಡೊಯ್ದಿದ್ದಾರೆ.
ಪೊಲೀಸ್ ಜೀಪ್ ಹೀಗೆ ಆಸ್ಪತ್ರೆಯೊಳಗೆ ನುಗ್ಗಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.