2 ವೋಟರ್‌ ಐಡಿ: ಕೈ ನಾಯಕ ಖೇರಾಗೆ ಆಯೋಗ ನೊಟೀಸ್‌

KannadaprabhaNewsNetwork |  
Published : Sep 03, 2025, 01:01 AM IST
ಖೇರಾ | Kannada Prabha

ಸಾರಾಂಶ

ಬಿಜೆಪಿ ವಿರುದ್ಧ ಮತಗಳವಿನ ಆರೋಪ ಮಾಡಿದ್ದ ಕಾಂಗ್ರೆಸ್‌ ಮಾಧ್ಯಮ ವಕ್ತಾರ ಪವನ್‌ ಖೇರಾ ವಿರುದ್ಧವೇ ಇದೀಗ ಅಕ್ರಮದ ಆರೋಪ ಕೇಳಿಬಂದಿದೆ. ಖೇರಾ ದೆಹಲಿಯಲ್ಲಿ ಎರಡು ಪ್ರತ್ಯೇಕ ವಿಳಾಸಗಳಲ್ಲಿ ಎರಡು ಪ್ರತ್ಯೇಕ ಮತದಾರರ ಗುರುತಿನ ಚೀಟಿ ಹೊಂದಿದೆ ಎಂದು ಬಿಜೆಪಿ ಆರೋಪಿಸಿದೆ

ಆರೋಪ ಮಾಡಿದ್ದ ನಾಯಕನೇ ಆರೋಪಿ

ನವದೆಹಲಿ: ಬಿಜೆಪಿ ವಿರುದ್ಧ ಮತಗಳವಿನ ಆರೋಪ ಮಾಡಿದ್ದ ಕಾಂಗ್ರೆಸ್‌ ಮಾಧ್ಯಮ ವಕ್ತಾರ ಪವನ್‌ ಖೇರಾ ವಿರುದ್ಧವೇ ಇದೀಗ ಅಕ್ರಮದ ಆರೋಪ ಕೇಳಿಬಂದಿದೆ. ಖೇರಾ ದೆಹಲಿಯಲ್ಲಿ ಎರಡು ಪ್ರತ್ಯೇಕ ವಿಳಾಸಗಳಲ್ಲಿ ಎರಡು ಪ್ರತ್ಯೇಕ ಮತದಾರರ ಗುರುತಿನ ಚೀಟಿ ಹೊಂದಿದೆ ಎಂದು ಬಿಜೆಪಿ ಆರೋಪಿಸಿದೆ. ಅದರ ಬೆನ್ನಲ್ಲೇ ಈ ಕುರಿತು ಸ್ಪಷ್ಟೀಕರಣ ನೀಡುವಂತೆ ಚುನಾವಣಾಧಿಕಾರಿಗಳು ಖೇರಾ ಅವರಿಗೆ ನೊಟೀಸ್ ಜಾರಿ ಮಾಡಿದ್ದಾರೆ.

‘ತಾವು ಒಂದಕ್ಕಿಂತ ಹಚ್ಚಿನ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಜನತಾ ಪ್ರಾತಿನಿಧ್ಯ ಕಾಯ್ದೆ 1950ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ, ಈ ಕಾಯ್ದೆಯಡಿಯಲ್ಲಿ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಕಾರಣ ತೋರಿಸಲು ನಿರ್ದೇಶಿಸಲಾಗಿದೆ’ ಎಂದು ನೊಟೀಸ್‌ನಲ್ಲಿ ಬರೆಯಲಾಗಿದೆ.

ನವದೆಹಲಿ ಮತ್ತು ಜಂಗಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಖೇರಾ ಮತದಾರರ ಗುರುತಿನ ಚೀಟಿ ಪಡೆದಿದ್ದಾರೆಂಬುದು ಬಿಜೆಪಿ ಆರೋಪ.

==

ಜಾರಂಗೆ ಬೇಡಿಕೆಗೆ ಸರ್ಕಾರ ಅಸ್ತು: ಮರಾಠ ಮೀಸಲು ಹೋರಾಟ ಅಂತ್ಯ

- ಕುಣಬಿ ಪ್ರಮಾಣ ಪತ್ರ ವಿತರಣೆಗೆ ಸರ್ಕಾರ ಸಮ್ಮತಿ

ಮುಂಬೈ: ಮರಾಠ ಮೀಸಲು ಸಂಬಂಧ ಮನೋಜ್‌ ಜಾರಂಗೆ ಮುಂದಿಟ್ಟಿದ್ದ ಬಹುತೇಕ ಬೇಡಿಕೆಗಳಿಗೆ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಸಮ್ಮತಿ ನೀಡಿದೆ. ಇದರೊಂದಿಗೆ ಕಳೆದ 5 ದಿನಗಳಿಂದ ನಡೆಸುತ್ತಿದ್ದ ತಮ್ಮ ಮೀಸಲು ಹೋರಾಟವನ್ನು ಜಾರಂಗೆ ಹಿಂದಕ್ಕೆ ಪಡೆದಿದ್ದಾರೆ. ಅರ್ಹ ಮರಾಠರಿಗೆ ಕುಣಬಿ ಜಾತಿ ಪ್ರಮಾಣ ಪತ್ರ, ಹೈದರಾಬಾದ್‌ ಗೆಜೆಟ್‌ ಜಾರಿಗೆ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಒಪ್ಪಿದೆ. ಇದರಿಂದಾಗಿ ಕುಣಬಿ ಪ್ರಮಾಣಪತ್ರ ಪಡೆದ ಮರಾಠಿಗರು ಇನ್ನು ಒಬಿಸಿ ಕೋಟಾದಡಿ ಮೀಸಲು ಪಡೆಯಲು ಅರ್ಹರಾಗುತ್ತದೆ. ಹೈದ್ರಾಬಾದ್‌ ನಿಜಾಮರ ಕಾಲಘಟ್ಟದಲ್ಲಿ ಹೊರಡಿಸಿದ್ದ ನಿಯಮದ ಪ್ರಕಾರ ಕುಣಬಿ ಜನಾಂಗ ಎಂದರೆ ಮರಾಠರ ಅನೇಕ ಸಮುದಾಯಗಳನ್ನು ಒಳಗೊಂಡ ಹಿಂದುಳಿದ ವರ್ಗ. ಈ ಹಿಂದೆ ಕುಣಬಿಗಳಿಗೆ ಅಧಿಕಾರ, ಆಡಳಿತ ಎರಡರಲ್ಲೂ ಪ್ರಾತಿನಿಧ್ಯ ನೀಡಲಾಗಿತ್ತು, ಅನಂತರ ಬದಲಾದ ಕಾಲಘಟ್ಟದಲ್ಲಿ ಮೀಸಲಾತಿ ನೀಡಲಾಯಿತು.

==

ಸತತ 7ನೇ ದಿನ ಚಿನ್ನದ

ಬೆಲೆ ಏರಿಕೆ: ಬೆಂಗ್ಳೂರಲ್ಲಿ 10 ಗ್ರಾಂಗೆ ₹1,10,100

ನವದೆಹಲಿ: ಅಮೆರಿಕದ ವ್ಯಾಪಾರ ಒಪ್ಪಂದ ಗೊಂದಲಗಳ ಮುಂದುವರೆದಿರುವ ನಡುವೆಯೇ ಚಿನ್ನದ ಬೆಲೆ ಸತತ 7ನೇ ದಿನವಾದ ಮಂಗಳವಾರ ಕೂಡಾ ಏರಿಕೆ ಕಂಡಿದೆ. ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 400 ರು. ಏರಿಕೆಯಾಗಿ 1,06,070 ರು.ಗೆ ತಲುಪಿದೆ. 99.5 ಶುದ್ಧತೆಯ ಚಿನ್ನ ಸಹ 400 ರು. ಏರಿ 1,05,200 ರು.ಗೆ ಮುಟ್ಟಿದೆ. ಬೆಂಗಳೂರಿನಲ್ಲಿ 99.5 ಶುದ್ಧತೆಯ ಬಂಗಾರದ ಬೆಲೆ 10 ಗ್ರಾಂಗೆ 100 ರು. ಏರಿಕೆಯಾಗಿ 1,10,100 ರು.ಗೆ ಜಿಗಿದಿದೆ. ಕಳೆದ ಡಿಸೆಂಬರ್‌ನಲ್ಲಿ 10 ಗ್ರಾಂಗೆ 78,950 ರು. ಇದ್ದ ಬೆಲೆಯು ಈ ವರ್ಷ ಬರೋಬ್ಬರಿ 34.35ರಷ್ಟು ಏರಿಕೆ ಕಂಡಿದೆ. ಇನ್ನು ಬೆಳ್ಳಿಯು ದೆಹಲಿಯಲ್ಲಿ 100 ರು. ಏರಿಕೆಯಾಗಿ ಕೇಜಿಗೆ ದಾಖಲೆಯ 1,26,100 ರು.ಗೆ ತಲುಪಿದೆ. ಆದರೆ ಬೆಂಗಳೂರಿನಲ್ಲಿ 1000 ರು. ಕುಸಿದು 1,31,000 ರು.ಗೆ ತಲುಪಿದೆ.

==

ಟ್ರಂಪ್‌ ತೆರಿಗೆ ಏಟಿನ ಮಧ್ಯೆ ರಷ್ಯಾ ತೈಲ ರಿಯಾಯ್ತಿ $4ಕ್ಕೆ ಏರಿಕೆ

ಮಾಸ್ಕೋ: ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕಾಗಿ ಭಾರತದ ಮೇಲೆ ಅಮೆರಿಕ ಶೇ.50ರಷ್ಟು ತೆರಿಗೆ ಹೇರಿರುವ ನಡುವೆಯೇ ರಷ್ಯಾ ಭಾರತಕ್ಕೆ ಇನ್ನಷ್ಟು ರಿಯಾಯ್ತಿಯನ್ನು ನೀಡಿದೆ. ತೈಲ ಖರೀದಿ ಮೇಲೆ ಇಲ್ಲಿವರೆಗೂ ನೀಡುತ್ತಿದ್ದ 2.50 ಡಾಲರ್‌ನಷ್ಟು ರಿಯಾಯ್ತಿಯನ್ನು 3-4 ಡಾಲರ್‌ಗೆ ಏರಿಸಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಅತ್ಯಾಪ್ತ ಭೇಟಿ ಬಳಿಕ ಈ ಬೆಳವಣಿಗೆಯಾಗಿದ್ದು, ಟ್ರಂಪ್‌ ಅವರಿಗೆ ನೇರ ತಿರುಗೇಟು ನೀಡಲಾಗಿದೆ. ಈ ಮೂಲಕ ಭಾರತೀಯ ತೈಲ ಕಂಪನಿಗಳಿಗೆ ತೈಲ ರಿಯಾಯ್ತಿಯ ಭಾರಿ ಲಾಭ ಮಾಡಿಕೊಡಲಿದೆ ಎನ್ನಲಾಗಿದೆ. ರಷ್ಯಾದ ಉರಾಲ್‌ ಕಂಪನಿಯು ಸೆಪ್ಟೆಂಬರ್‌-ಅಕ್ಟೋಬರ್‌ಗೆ ಲೋಡ್‌ ಮಾಡುವ ತೈಲಕ್ಕೆ ಈ ರಿಯಾಯ್ತಿ ಅನ್ವಯವಾಗಲಿದೆ.

PREV

Recommended Stories

ಈ ಬಾರಿ ಜನಗಣತಿಯಲ್ಲಿ ಮನೆಗಳಿಗೆ ಜಿಯೋಟ್ಯಾಗ್‌ ನೀಡಲು ಕೇಂದ್ರ ಸಿದ್ಧತೆ
ದೇಶದ ಮೊದಲ 32 ಬಿಟ್‌ ಮೈಕ್ರೋಪ್ರೊಸೆಸರ್‌ ಚಿಪ್‌ ‘ವಿಕ್ರಂ’ ಬಿಡುಗಡೆ