ಪ್ರಜ್ವಲ್‌ ವಿದೇಶ ಯಾನಕ್ಕೆ ಅನುಮತಿ ನೀಡಿಲ್ಲ: ಕೇಂದ್ರ

ಸಾರಾಂಶ

ಲೈಂಗಿಕ ಹಗರಣದ ಆರೋಪಿ ಹಾಗೂ ಜನತಾ ದಳ (ಜಾತ್ಯತೀತ) ಸಂಸದ ಪ್ರಜ್ವಲ್ ರೇವಣ್ಣ ಅವರು, ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ಪ್ರಯಾಣಿಸಿದ್ದಾರೆ.

ನವದೆಹಲಿ: ‘ಲೈಂಗಿಕ ಹಗರಣದ ಆರೋಪಿ ಹಾಗೂ ಜನತಾ ದಳ (ಜಾತ್ಯತೀತ) ಸಂಸದ ಪ್ರಜ್ವಲ್ ರೇವಣ್ಣ ಅವರು, ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ಪ್ರಯಾಣಿಸಿದ್ದಾರೆ. ಅವರು ನಮ್ಮಿಂದ ಯಾವುದೇ ರಾಜಕೀಯ ಅನುಮತಿ ಕೇಳಿಲ್ಲ ಅಥವಾ ನಾವು ನೀಡಿಯೂ ಇಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

‘ಘೋರ ಆರೋಪಗಳನ್ನು ಹೊತ್ತಿದ್ದರೂ ಪ್ರಜ್ವಲ್‌ ವಿದೇಶಕ್ಕೆ ಪ್ರಯಾಣಿಸಲು ಕೇಂದ್ರ ಸರ್ಕಾರ ಹೇಗೆ ಅನುಮತಿ ನೀಡಿತು? ಪ್ರಧಾನಿ ನರೇಂದ್ರ ಮೋದಿ ಅವರ ಅಣತಿಯಂತೆಯೇ ಪ್ರಜ್ವಲ್‌ ವಿದೇಶಕ್ಕೆ ಹೋಗಿದ್ದಾರೆ’ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಇದರ ಬೆನ್ನಲ್ಲೇ ವಿದೇಶಾಂಗ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್, ‘ಈ ಸಂಸದ (ಪ್ರಜ್ವಲ್‌ ರೇವಣ್ಣ) ಜರ್ಮನಿಗೆ ಪ್ರಯಾಣಿಸುವ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಯಾವುದೇ ರಾಜಕೀಯ ಅನುಮತಿ ಕೇಳಿಲ್ಲ. ನಾವು ಅನುಮತಿ ನೀಡಿಯೂ ಇಲ್ಲ’ ಎಂದರು.

‘ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರಿಗೆ ಜರ್ಮನಿಗೆ ಪ್ರಯಾಣಿಸಲು ಯಾವುದೇ ವೀಸಾ ಅಗತ್ಯವಿಲ್ಲ. ಹೀಗಾಗಿ ಸಚಿವಾಲಯವು ಈ ಸಂಸದನಿಗೆ ಯಾವುದೇ ದೇಶಕ್ಕೆ ವೀಸಾ ಟಿಪ್ಪಣಿಯನ್ನು ನೀಡಿಲ್ಲ. ಅವರು ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸಿದ್ದಾರೆ’ ಎಂದು ಜೈಸ್ವಾಲ್‌ ನುಡಿದರು.

ಇದೇ ವೇಳೆ, ‘ಪ್ರಜ್ವಲ್‌ರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಹಿಂಪಡೆಯಬೇಕು’ ಎಂಬ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಕ್ಕೆ ಉತ್ತರಿಸಿದ ಜೈಸ್ವಾಲ್‌, ‘ಪಾಸ್‌ಪೋರ್ಟ್ ಕಾಯಿದೆ, 1967ರ ಅಡಿಯಲ್ಲಿ ರಾಜತಾಂತ್ರಿಕ ಪಾಸ್‌ಪೋರ್ಟ್ ಹಿಂಪಡೆಯಬಹುದು. ಆದರೆ, ಇದಕ್ಕೆ ಕೋರ್ಟ್‌ ಆದೇಶ ಬೇಕಾಗುತ್ತದೆ. ಕೋರ್ಟ್‌ಗಳಿಂದ ಇಲ್ಲಿಯವರೆಗೆ ಅಂತಹ ಯಾವುದೇ ನಿರ್ದೇಶನಗಳನ್ನು ನಾವು ಸ್ವೀಕರಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

Share this article