ಎಲ್ಲಾ ಕೇಸಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಪ್ರಜ್ವಲ್‌ ಮೊರೆ

KannadaprabhaNewsNetwork |  
Published : May 30, 2024, 12:47 AM ISTUpdated : May 30, 2024, 05:15 AM IST
Prajwal Revanna

ಸಾರಾಂಶ

ಭಾರತಕ್ಕೆ ಆಗಮನ ಸಮೀಪಿಸುತ್ತಿದ್ದಂತೆ ಜೈಲು ತಪ್ಪಿಸಿಕೊಳ್ಳಲು ಯತ್ನ ಮುಂದುವರೆದಿದ್ದು, 2 ರೇಪ್‌, 1 ಲೈಂಗಿಕ ದೌರ್ಜನ್ಯ ಕೇಸಲ್ಲಿ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಪ್ರಕರಣಗಳು ನಾಳೆಯೇ ವಿಚಾರಣೆಗೆ ಬರಲಿವೆ.

 ಬೆಂಗಳೂರು :  ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿಯಿಂದಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ತಮ್ಮ ವಿರುದ್ಧ ದಾಖಲಾದ ಎಲ್ಲಾ ಪ್ರಕರಣದಲ್ಲಿಯೂ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೇ 31ಕ್ಕೆ ಇದನ್ನು ವಿಚಾರಣೆ ನಡೆಸಲು ಕೋರ್ಟ್‌ ನಿರ್ಧರಿಸಿದೆ.

ಸಿಐಡಿ ಪೊಲೀಸ್‌ ಠಾಣೆ, ಹೊಳೇನರಸೀಪುರ ಮತ್ತು ಸೈಬರ್‌ ಕ್ರೈಂ ಠಾಣೆಯಲ್ಲಿ ದಾಖಲಾದ ಮೂರು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಲಾಗಿದೆ. ಪ್ರಕರಣ ದಾಖಲಾಗಿ ಒಂದು ತಿಂಗಳ ಬಳಿಕ ನಿರೀಕ್ಷಣಾ ಜಾಮೀನಿಗಾಗಿ ಪ್ರಜ್ವಲ್‌ ರೇವಣ್ಣ ಅರ್ಜಿ ಸಲ್ಲಿಸಿದ್ದಾರೆ. ಇದೇ 31ರಂದು ರಾಜ್ಯಕ್ಕೆ ಆಗಮಿಸುವುದಾಗಿ ವಿದೇಶದಿಂದ ವಿಡಿಯೋ ಮೂಲಕ ಮಾಹಿತಿ ನೀಡಿದ್ದು, ರಾಜ್ಯಕ್ಕೆ ಬರುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ.

ಬುಧವಾರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು ಇದೇ 31ರಂದು ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ನಿರೀಕ್ಷಣಾ ಜಾಮೀನಿನ ಅರ್ಜಿಗಳ ತರ್ತು ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಪ್ರಜ್ವಲ್ ರೇವಣ್ಣ ಪರ ವಕೀಲರು ನ್ಯಾಯಾಲಯಕ್ಕೆ ಮಾಡಿದರು. ಆದರೆ, ನ್ಯಾಯಾಲಯವು ಮೂರು ಪ್ರಕರಣಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಎಸ್ಐಟಿಗೆ ಸಮಯಾವಕಾಶ ಬೇಕು. ತುರ್ತಾಗಿ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿ ವಿಚಾರಣೆ ಮೇ 31ಕ್ಕೆ ಮುಂದೂಡಿತು. ಅಂದೇ ಪ್ರಜ್ವಲ್‌ ರೇವಣ್ಣ ರಾಜ್ಯಕ್ಕೆ ಆಗಮಿಸಲಿದ್ದಾರೆ.

ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಇದರ ತನಿಖೆಗಾಗಿ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ. ಈಗಾಗಲೇ ಪ್ರಜ್ವಲ್ ವಿರುದ್ಧ ಬಂಧನದ ವಾರಂಟ್, ಲುಕ್ ಔಟ್ ನೋಟಿಸ್ ಸಹ ಜಾರಿ ಮಾಡಲಾಗಿದೆ. ಅಲ್ಲದೇ, ಬ್ಲ್ಯೂ ಕಾರ್ನರ್ ನೋಟಿಸ್ ಕೂಡ ಜಾರಿಗೊಳಿಸಲಾಗಿದೆ. ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಗೊಳಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

PREV

Recommended Stories

ಉತ್ತರಾಖಂಡದಲ್ಲಿ ಮಳೆ ಆರ್ಭಟ, ಭೂಕುಸಿತ
₹200 ಕೋಟಿ ವಂಚನೆ : ಜಯಾ ಆಪ್ತೆ ಶಶಿಕಲಾ ಆಸ್ತಿ ಮೇಲೆ ಇಡಿ ದಾಳಿ