ದೆಹಲಿ : ಸರ್ಕಾರಿ ಶಾಲೆಗಳ ಕೊಠಡಿಗಳ ನಿರ್ಮಾಣದಲ್ಲಿ 2000 ಕೋಟಿ ರು. ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ದೆಹಲಿ ಸರ್ಕಾರದ ಮಾಜಿ ಸಚಿವರಾದ ಮನೀಷ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮತಿಸಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಈ ಅಕ್ರಮ ನಡೆದಿರುವುದಾಗಿ ಆರೋಪಿಸಿದ್ದ ದೆಹಲಿ ವಿಚಕ್ಷಣಾ ನಿರ್ದೇಶನಾಲಯ, ಆ ಕುರಿತ ವರದಿಯನ್ನೂ ಸಲ್ಲಿಸಿತ್ತು. 2020ರ ಫೆ.17ರ ವರದಿಯಲ್ಲಿ, ಲೋಕೋಪಯೋಗಿ ಇಲಾಖೆ ನಿರ್ಮಿಸಿದ್ದ 2,400 ತರಗತಿಗಳಲ್ಲಿ ಅಕ್ರಮ ನಡೆದಿರುವುದಾಗಿ ತಿಳಿಸಲಾಗಿತ್ತು.
ಈ ಸಂಬಂಧ ಸಿಸೋಡಿಯಾ ಹಾಗೂ ಜೈನ್ ಅವರ ವಿರುದ್ಧ ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ 2023ರ ಅಡಿಯಲ್ಲಿ ಪ್ರಕರಣ ದಾಖಲಿಸಲು ರಾಷ್ಟ್ರಪತಿಗಳ ಅನುಮತಿ ದೊರಕಿದೆ.
ಕ್ರಿಮಿನಲ್ ಅಭ್ಯರ್ಥಿಗಳಿಗೆ ಎಲೆಕ್ಷನ್ ನಿರ್ಬಂಧ: 18ಕ್ಕೆ ಸುಪ್ರೀಂ ವಿಚಾರಣೆ
ನವದೆಹಲಿ: ಗಂಭೀರ ಅಪರಾಧ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳನ್ನು ಆಜೀವ ಚುನಾವಣೆಯಿಂದ ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾ.18ರಂದು ನಡೆಸುವ ನಿರೀಕ್ಷೆ ಇದೆ.
ನ್ಯಾ.ಸೂರ್ಯಕಾಂತ್ ಮತ್ತು ನ್ಯಾ.ಕೋಟೀಶ್ವರ್ ಸಿಂಗ್ ಅವರ ಪೀಠವು ಈ ಕುರಿತು ವಿಚಾರಣೆ ನಡೆಸುವ ಸಾಧ್ಯತೆ ಇದೆ. ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಕೋರ್ಟ್ ಸೆ.22ರಂದು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೇಳಿತ್ತು. ಇದೀಗ ಆ ಅರ್ಜಿಯ ಮುಂದಿನ ವಿಚಾರಣೆ ನಡೆಯಲಿದೆ.ಗಂಭೀರ ಕ್ರಿಮಿನಲ್ ಕೇಸ್‌ಗಳಲ್ಲಿ ಆರೋಪಿಗಳಾಗಿರುವವರನ್ನು ಚುನಾವಣೆಯಿಂದಲೇ ನಿರ್ಬಂಧಿಸುವ ಕೋರಿಕೆ ಜತೆಗೆ, ಗಂಭೀರ ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಅಭ್ಯರ್ಥಿಗಳ ಉಮೇದುವಾರಿಕೆಗೆ ಅವಕಾಶ ನೀಡದಂತೆ ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆಯೂ ಮನವಿ ಮಾಡಲಾಗಿದೆ.
ಕಾನೂನು ಆಯೋಗದ ಶಿಫಾರಸುಗಳು, ನ್ಯಾಯಾಲಯದ ನಿರ್ದೇಶನಗಳ ಹೊರತಾಗಿಯೂ ಕೇಂದ್ರ ಮತ್ತು ಸರ್ಕಾರ ಅಭ್ಯರ್ಥಿಗಳ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.2019ರ ಲೋಕಸಭಾ ಚುನಾವಣೆಯಲ್ಲಿ 223 ಅಥವಾ ಶೇ.43ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿದ್ದರು. ಹೀಗಾಗಿ ದೇಶದಲ್ಲಿ ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಸಂಸದರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಕೆಯಾಗಿದೆ.