ಸಣ್ಣ ದೇಗುಲಗಳಿಗೆ ನೆರವಾಗುವ ಕಾಯ್ದೆ ಅನುಮೋದಿಸಿ : ಅರ್ಚಕರು

Follow Us

ಸಾರಾಂಶ

ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಸುಮಾರು ‘ಸಿ’ ದರ್ಜೆ ದೇವಾಲಯಗಳ ಅಭಿವೃದ್ಧಿಗಾಗಿ ಸರ್ಕಾರ ತಂದ ಮುಜರಾಯಿ ಕಾಯ್ದೆ ತಿದ್ದುಪಡಿ ಬಿಲ್‌ಗೆ ತಕ್ಷಣ ಅನುಮೋದಿಸುವಂತೆ ಅಖಿಲ ಕರ್ನಾಟಕ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ರಾಜ್ಯಪಾಲರನ್ನು ಒತ್ತಾಯಿಸಿದೆ.

 ಬೆಂಗಳೂರು : ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಸುಮಾರು ‘ಸಿ’ ದರ್ಜೆ ದೇವಾಲಯಗಳ ಅಭಿವೃದ್ಧಿಗಾಗಿ ಸರ್ಕಾರ ತಂದ ಮುಜರಾಯಿ ಕಾಯ್ದೆ ತಿದ್ದುಪಡಿ ಬಿಲ್‌ಗೆ ತಕ್ಷಣ ಅನುಮೋದಿಸುವಂತೆ ಅಖಿಲ ಕರ್ನಾಟಕ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ರಾಜ್ಯಪಾಲರನ್ನು ಒತ್ತಾಯಿಸಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಪ್ರೊ.ಕೆ.ಈ.ರಾಧಾಕೃಷ್ಣ, ರಾಜ್ಯದಲ್ಲಿ ‘ಎ’ ವರ್ಗದಡಿ 205, ‘ಬಿ’ ವರ್ಗದಡಿ 193 ಹಾಗೂ ‘ಸಿ’ ವರ್ಗದಡಿ 34,165 ಪ್ರವರ್ಗದ ದೇವಾಲಯಗಳಿವೆ. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಎ, ಬಿ ದರ್ಜೆ ದೇವಸ್ಥಾನಗಳ ಆದಾಯದಲ್ಲಿ ಎಲ್ಲ ಖರ್ಚಿನ ಬಳಿಕ ಉಳಿವ ಮೊತ್ತದಲ್ಲಿ ಶೇ.10ರಷ್ಟನ್ನು ಸಿ ದರ್ಜೆ ದೇವಸ್ಥಾನಗಳ ಅಭಿವೃದ್ಧಿಗೆ ನೀಡಲು ಸದನ ನಿರ್ಧರಿಸಿತ್ತು. ಆದರೆ, ಕಾರಣಾಂತರದಿಂದ ಆಗಿರಲಿಲ್ಲ ಎಂದರು.

ಈಗ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕಳೆದ ಅಧಿವೇಶನದಲ್ಲಿ ಮುಜರಾಯಿ ಕಾಯ್ದೆಗೆ ತಿದ್ದುಪಡಿ ತಂದು ಬಿಲ್ ಮಂಡಿಸಿದ್ದರು. ಉಭಯ ಸದನಗಳಲ್ಲಿ ಈ ಬಿಲ್‌ ಪಾಸಾಗಿದ್ದು, ಅಂಕಿತಕ್ಕಾಗಿ ರಾಜ್ಯಪಾಲರಿಗೆ ಸರ್ಕಾರ ಕಳುಹಿಸಿದೆ. ಆದರೆ, ರಾಜ್ಯಪಾಲರು ಈ ಕಾಯ್ದೆಗೆ ವಿನಾಕಾರಣ ಅನುಮೋದನೆ ನೀಡದೆ ತಮ್ಮಲ್ಲೇ ಇರಿಸಿಕೊಂಡಿದ್ದಾರೆ. ಈ ಬಗ್ಗೆ ಒಕ್ಕೂಟದ ನೇತೃತ್ವದಲ್ಲಿ ನಿಯೋಗ ಕೊಂಡೊಯ್ದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಇದರಿಂದ ₹ 60- ₹70 ಕೋಟಿ ವಾರ್ಷಿಕ ಮೊತ್ತ ‘ಸಿ’ ದರ್ಜೆ ದೇವಾಲಯಗಳಿಗೆ ಸಿಗುತ್ತದೆ. ತೀರಾ ಕಷ್ಟದಲ್ಲಿರುವ, ಸೌಲಭ್ಯ ಇಲ್ಲದ ಗ್ರಾಮೀಣ ಪ್ರದೇಶದ ದೇಗುಲಗಳಿಗೆ ಇದರಿಂದ ಅನುಕೂಲ ಆಗಲಿದೆ. ಕೂಡಲೇ ರಾಜ್ಯಪಾಲರು ಅನುಮೋದನೆ ನೀಡಿ ಕಾಯ್ದೆಯ ಅನುಷ್ಠಾನಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಒಕ್ಕೂಟದ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಮಾತನಾಡಿ, ರಾಜ್ಯದಲ್ಲಿ ‘ಸಿ’ ದರ್ಜೆ ದೇವಾಲಯಗಳ ಲಕ್ಷಾಂತರ ಎಕರೆ ಭೂಮಿ ಒತ್ತುವರಿಯಾಗಿದೆ. ದಶಕಗಳಿಂದ ಪ್ರಭಾವಿ ವ್ಯಕ್ತಿಗಳು ಕನಿಷ್ಠ ಮೊತ್ತದ ಲೀಸ್ ಮೇಲೆ ಬಳಸಿಕೊಳ್ಳುತ್ತಿದ್ದಾರೆ. ಈ ಆಸ್ತಿ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ದೇವಸ್ಥಾನಗಳಿಗೆ ನ್ಯಾಯಯುತ ಬಾಡಿಗೆ ಬರುವಂತೆ ಕ್ರಮ ವಹಿಸಬೇಕು ಎಂದರು.

ರಾಜ್ಯ ಪುರಾತತ್ವ ಇಲಾಖೆ, ಮುಜರಾಯಿ ಸುಪರ್ದಿಯ ಐತಿಹಾಸಿಕ ದೇವಸ್ಥಾನಗಳ ಸಮೀಕ್ಷೆ ನಡೆಸಿ ಅಭಿವೃದ್ಧಿಗೆ ₹500 ಕೋಟಿ ನೀಡಬೇಕು. ದೇವಸ್ಥಾನದ ಪೂಜಾದ್ರವ್ಯಗಳ ಖರೀದಿಗೆ ₹ 5ಸಾವಿರ ನೀಡಬೇಕು. ರಾಜಕೀಯ ಪುಢಾರಿಗಳಿಂದ ಅರ್ಚಕರ ಮೇಲಾಗುವ ದೌರ್ಜನ್ಯ ತಡೆಯಬೇಕು ಎಂದು ಒತ್ತಾಯಿಸಿದರು.

ಮುಜರಾಯಿ ದೇವಾಲಯಗಳ ಖಾಸಗಿಕರಣಗೊಳಿಸಬೇಕು ಎಂಬ ಪೇಜಾವರ ಶ್ರೀಗಳ ಹೇಳಿಕೆ ಅಪ್ರಸ್ತುತ ಮತ್ತು ಅವರ ಅಜ್ಞಾನ ತೋರ್ಪಡಿಸುತ್ತದೆ. ದೇವಾಲಯಗಳ ಸಂಪನ್ಮೂಲ ಮತ್ತು ಪರಂಪರೆ ವರ್ಗಾಯಿಸುವುದು ಸಾಧ್ಯವಿಲ್ಲದ ಮಾತು. ಇದರಿಂದ ಅರ್ಚಕರ ಬದುಕಿಗೆ ದೊಡ್ಡ ಪೆಟ್ಟು ಬೀಳುತ್ತದೆ. ಶ್ರೀಗಳು ತಮ್ಮ ಹೇಳಿಕೆ ಹಿಂಪಡೆಯಬೇಕು. ಅವರ ಜತೆ ವೈಯಕ್ತಿಕವಾಗಿ ಮಾತನಾಡುತ್ತೇವೆ.

-ಪ್ರೊ.ಕೆ.ಈ.ರಾಧಾಕೃಷ್ಣ, ಒಕ್ಕೂಟ ಅಧ್ಯಕ್ಷ