ನವದೆಹಲಿ: ಕೆಲ ವರ್ಷಗಳ ಹಿಂದೆ ಅಂಬೆಗಾಲಿಡುತ್ತಿದ್ದ ಎಐ ಇದೀಗ ದಾಪುಗಾಲಿಡುತ್ತಾ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಂಡು, ನಿರುದ್ಯೋಗದ ಆತಂಕವನ್ನು ಹೆಚ್ಚಿಸಿರುವ ಹೊತ್ತಿನಲ್ಲಿ, ‘ಈ ಭಯಕ್ಕೆ ತಯಾರಿಯೊಂದೇ ಮದ್ದು. ಎಐನಿಂದ ಹೊಸ ಉದ್ಯೋಗಗಳು ಸೃಷ್ಟಿ ಆಗಲಿದ್ದು, ರೂಪಾಂತರಗೊಳ್ಳುವ ಕೆಲಸಗಳನ್ನು ಕಲಿತು ಅವನ್ನು ಬಾಚಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ
ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ಇತಿಹಾಸವನ್ನು ನೋಡಿದರೆ, ತಂತ್ರಜ್ಞಾನವು ಕೆಲಸ ಕಸಿಯುವ ಬದಲು ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ. ಈಗ ಅದನ್ನು ಮಾಡುತ್ತಿರುವ ಎಐ, ಕೆಲ ಕೆಲಸಗಳ ರೂಪವನ್ನು ಬದಲಿಸುತ್ತಿದೆ’ ಎಂದು ಅಭಯ ನೀಡಿದರು. ಜತೆಗೆ, ‘ಎಐ ಚಾಲಿತ ವ್ಯವಸ್ಥೆಯನ್ನು ಭವಿಷ್ಯವೆಂದು ಪರಿಗಣಿಸುವ ಬದಲು ವರ್ತಮಾನದ ಸಮಸ್ಯೆಯೆಂದು ನೋಡಿ, ಅದಕ್ಕೆ ಅಗತ್ಯವಾದ ಕೌಶಲ್ಯಾಭಿವೃದ್ಧಿಗೆ ಹಲವು ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ’ ಎಂದು ಹೇಳಿದರು.
‘ಎಐ ಕ್ಷೇತ್ರದಲ್ಲೂ ಭಾರತ ಆತ್ಮನಿರ್ಭರ ಸಾಧಿಸಲು, ಎಐ ಬಳಸುವುದಷ್ಟೇ ಅಲ್ಲ, ಅದನ್ನು ಸೃಷ್ಟಿಸುವ ನಿಟ್ಟಿನಲ್ಲೂ ಕೆಲಸ ಮಾಡುತ್ತಿದೆ. ಸಾರ್ವಭೌಮತ್ವ, ಒಳಗೊಳ್ಳುವಿಕೆ ಮತ್ತು ನಾವೀನ್ಯತೆಯ ಆಧಾರದಲ್ಲಿ ಇದನ್ನು ಸಾಧಿಸಲಾಗುತ್ತಿದ್ದು, ವಿಶ್ವದ ಟಾಪ್ 3 ಎಐ ದೈತ್ಯ ರಾಷ್ಟ್ರಗಳ ಪೈಕಿ ಭಾರತ ನಿಲ್ಲಬೇಕು ಎಂಬುದು ನನ್ನ ಗುರಿಯಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನು ಸಾಧಿಸುವ ಬಗೆಯನ್ನು ವಿವರಿಸುತ್ತಾ, ‘ಭಾರತದ ಎಐ ಮಾದರಿಯು ವಿಶ್ವಾದ್ಯಂತ ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗಲಿದೆ. ಎಐ ನವೋದ್ಯಮಗಳು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವ ಕೋಟಿಗಳಷ್ಟು ಬೆಲೆಬಾಳುವಂಥವಾಗಲಿವೆ. ನಮ್ಮ ಎಐ ಆಧರಿತ ಸಾರ್ವಜನಿಕ ಸೇವೆಗಳ ಅಧ್ಯಯನ ಜಗತ್ತಿನಾದ್ಯಂತ ನಡೆಯಲಿದೆ. ಭಾರತೀಯರು ಎಐಅನ್ನು ಹೊಸ ಅವಕಾಶ ಸೃಷ್ಟಿಸುವ, ಸಾಮರ್ಥ್ಯ ಹೆಚ್ಚಿಸುವ ಸೇವಕನಾಗಿ ಕಾಣಬೇಕು. ವೈದ್ಯರು, ಶಿಕ್ಷಕರು ಮತ್ತು ವಕೀಲರು ಈ ಸಾಧನಗಳನ್ನು ಬಳಸಿಕೊಂಡು ನಿಖರತೆ ಮತ್ತು ದಕ್ಷತೆಯೊಂದಿಗೆ ಅನೇಕರಿಗೆ ಸೇವೆ ನೀಡಬಹುದು’ ಎಂದು ಕಿವಿಮಾತು ಹೇಳಿದರು.
ನಿಯಂತ್ರಣ ಹೇಗೆ?:
ಕ್ಷಿಪ್ರವಾಗಿ ಆವರಿಸಿಕೊಳ್ಳುತ್ತಿರುವ ಎಐಅನ್ನು ನಿಯಂತ್ರಿಸುವ ಬಗ್ಗೆ ವಿಶ್ವ ಚರ್ಚಿಸುತ್ತಿದ್ದರೆ, ಭಾರತ ಮಾತ್ರ ನಾವೀನ್ಯತೆಯನ್ನು ಉತ್ತೇಜಿಸುತ್ತಲೇ ರಕ್ಷಣೆಯನ್ನೂ ನೀಡಬಹುದು ಎಂಬುದನ್ನು ತೋರಿಸುತ್ತಿದೆ ಎಂದು ಮೋದಿ ಹೇಳಿದರು. ‘ಎಐ ಬೆಳೆಯುತ್ತಾ ಸಾಗಿದಂತೆ ಅದನ್ನು ಜವಾಬ್ದಾರಿಯುತವಾಗಿ ಬಳಸುವ ವಿವೇಚನೆಯೂ ನಮ್ಮಲ್ಲಿ ಬರಬೇಕು. ಭಾರತದ ಇದರತ್ತ ಗಮನ ಹರಿಸುತ್ತಿದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ, ಮಕ್ಕಳು ಮತ್ತು ಮಹಿಳೆಯರ ಘನತೆಗೆ ಕುತ್ತು ತರುವ ಡೀಪ್‌ಫೇಕ್‌ನಂತಹ ತಂತ್ರಜ್ಞಾನದ ಮೌಲ್ಯಮಾಪನ ಮಾಡಲಾಗುತ್ತಿದೆ’ ಎಂದರು.
- ತಂತ್ರಜ್ಞಾನ ಕೆಲಸ ಕಸಿಯಲ್ಲ, ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ
- ಎಐ ಪರಿಣಾಮದಿಂದ ಹಲವು ಕೆಲಸಗಳು ರೂಪಾಂತರ ಆಗುತ್ತವೆ
- ರೂಪಾಂತರಗೊಳ್ಳವ ಹೊಸ ಹೊಸ ಕೆಲಸಗಳನ್ನು ಕಲಿಯಬೇಕು
- ಇದರಿಂದ ಆ ಹೊಸ ಉದ್ಯೋಗಾವಕಾಶಗಳ ಬಾಚಿಕೊಳ್ಳಬಹುದು
- ಜವಾಬ್ದಾರಿಯುತವಾಗಿ ಎಐ ಬಳಕೆಯ ವಿವೇಚನೆ ತೀರಾ ಅಗತ್ಯ
- ವಿಶ್ವದ ಟಾಪ್ 3 ಎಐ ದೈತ್ಯ ದೇಶಗಳ ಸಾಲಲ್ಲಿ ಭಾರತ ನಿಲ್ಲಬೇಕು