ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಧಗಧಗ : 2 ಮಂತ್ರಿ, 3 ಶಾಸಕರ ಮನೆಗೆ ದಾಳಿ !

KannadaprabhaNewsNetwork |  
Published : Nov 17, 2024, 01:18 AM ISTUpdated : Nov 17, 2024, 05:14 AM IST
ಮಣಿಪುರ | Kannada Prabha

ಸಾರಾಂಶ

ಜನಾಂಗೀಯ ಸಂಘರ್ಷಪೀಡಿತ ಮಣಿಪುರದಲ್ಲಿ ಇತ್ತೀಚೆಗೆ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದರು ಎನ್ನಲಾದ 6 ಜನರ ಮೃತದೇಹಗಳು ಜಿರಿಬಾಂ ಜಿಲ್ಲೆಯಲ್ಲಿ ಪತ್ತೆಯಾಗಿವೆ.

ಇಂಫಾಲ್‌: ಜನಾಂಗೀಯ ಸಂಘರ್ಷಪೀಡಿತ ಮಣಿಪುರದಲ್ಲಿ ಇತ್ತೀಚೆಗೆ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದರು ಎನ್ನಲಾದ 6 ಜನರ ಮೃತದೇಹಗಳು ಜಿರಿಬಾಂ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಇದರ ಬೆನ್ನಲ್ಲೇ ಇವರ ಸಾವು ಖಂಡಿಸಿ ರಾಜ್ಯದಲ್ಲಿ ಮತ್ತೆ ಹಿಂಸೆ ಆರಂಭವಾಗಿದೆ. ಉದ್ರಿಕ್ತರು ಇಬ್ಬರು ಬಿಜೆಪಿ ಸಚಿವರು ಹಾಗೂ 3 ಶಾಸಕರ ಮನೆಗಳಿಗೆ ದಾಳಿ ಮಾಡಿದ್ದಾರೆ.

ದಾಳಿಗೊಳಗಾದ ಮನೆಗಳಲ್ಲಿ ಮುಖ್ಯಮಂತ್ರಿ ಬೀರೇನ್‌ ಸಿಂಗ್‌ ಅವರ ಅಳಿಯನಾಗಿರುವ ಶಾಸಕನ ಮನೆಯೂ ಸೇರಿದೆ.

ಇಂಫಾಲ್‌ನಲ್ಲಿ ವ್ಯಾಪಾರ ವಹಿವಾಟುಗಳು ಸ್ಥಗಿತವಾಗಿದ್ದು, ಇಂಫಾಲ್‌ನ ಪಶ್ಮಿಮ ಭಾಗಗಳಲ್ಲಿ ಟೈರ್‌ಗಳಿಗೆ ಬೆಂಕಿಯಿಟ್ಟು ಪ್ರತಿಭಟಿಸಲಾಗಿದೆ. ಮಾರುಕಟ್ಟೆ ಬಂದ್ ಮಾಡಲಾಗಿದೆ. ಭಾರಿ ಹಿಂಸೆ ಕಾರಣ ಇಂಫಾಲ್ ಪಶ್ಚಿಮ, ಪೂರ್ವ, ಬಿಷ್ಣುಪುರ, ತೌಬಾಲ್, ಕಾಕ್ಚಿಂಗ್, ಕಾಂಗ್‌ಪೋಕ್ಪಿ ಮತ್ತು ಚುರಾಚಂದ್‌ಪುರ ಜಿಲ್ಲೆಗಳಲ್ಲಿ (7 ಜಿಲ್ಲೆಗಳಲ್ಲಿ) 2 ದಿನ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆ ಸ್ಥಗಿತಗೊಳಿಸಲಾಗಿದೆ. ಇಂಫಾಲ್ ಪಶ್ಚಿಮ ಹಾಗೂ ಪೂರ್ವ ಜಿಲ್ಲೆಗಳಲ್ಲಿ ಕರ್ಫ್ಯೂ ಸಾರಲಾಗಿದೆ. 6 ಠಾಣೆಗಳ ವ್ಯಾಪ್ತಿಯಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಆಫ್‌ಸ್ಪಾ) ಜಾರಿ ಮಾಡಲಾಗಿದೆ.

ಹಿಂಸೆ ಏಕೆ?:

ಸೋಮವಾರ ಮಣಿಪುರದ ಜಿರಿಬಾಂ ಎಂಬಲ್ಲಿ ನಡೆದ ಚಕಮಕಿ ವೇಳೆ 10 ಶಂಕಿತ ಕುಕಿ ಹಾಗೂ ಮಿಜೋ ಉಗ್ರರನ್ನು ಸಿಆರ್‌ಪಿಎಫ್‌ ಪಡೆಗಳು ಕೊಂದಿದ್ದವು. ಬಳಿಕ ನಿರಾಶ್ರಿತರ ಶಿಬಿರದಲ್ಲಿದ್ದ 3 ಮಹಿಳೆಯರು ಹಾಗೂ 3 ಮಕ್ಕಳು ನಾಪತ್ತೆಯಾಗಿದ್ದು, ಅವರನ್ನು ಉಗ್ರರು ಅಪಹರಿಸಿರುವುದಾಗಿ ಮೈತೇಯಿ ಸಮುದಾಯದವರು ಆರೋಪಿಸಿದ್ದರು.

ಈ ಪೈಕಿ ಓರ್ವ ಮಹಿಳೆ ಹಾಗೂ 2 ಮಕ್ಕಳು ಸೇರಿ 3 ಮಂದಿಯ ಶವಗಳು ಜಿರಿ ಹಾಗೂ ಬರಕ್‌ ನದಿಗಳ ಸಂಗಮಸ್ಥಾನದಲ್ಲಿ ಶನಿವಾರ ಬೆಳಗ್ಗೆ ದೊರಕಿವೆ. ಇದಕ್ಕೂ ಮುನ್ನ 3 ಶವಗಳು ಪತ್ತೆ ಆಗಿದ್ದವು. ಇದರೊಂದಿಗೆ ಎಲ್ಲ 6 ಶವಗಳೂ ಸಿಕ್ಕಂತಾಗಿದೆ. ಇವರ ಸಾವು ಖಂಡಿಸಿ ಹಿಂಸೆ ಆರಂಭವಾಗಿದೆ.

ಉಗ್ರರ ಕುಟುಂಬಗಳ ಮೇಲೆ ಲಾಠಿ ಚಾರ್ಜ್‌

ಮಣಿಪುರದ ಜಿರಿಬಾಂನಲ್ಲಿ ಕಳೆದ ಸೋಮವಾರ ಮೃತರಾದ 10 ಶಂಕಿತ ಉಗ್ರರ ದೇಹಗಳನ್ನು ತಮಗೆ ಹಸ್ತಾಂತರಿಸುವಂತೆ ಮೃತರ ಕುಟುಂಬಸ್ಥರು ಆಗ್ರಹಿಸಿ ಅಸ್ಸಾಂನ ಸಿಲ್ಚಾರ್‌ನಲ್ಲಿ ಪೊಲೀಸರ ಜತೆ ಸಂಘರ್ಷ ನಡೆಸಿದ್ದಾರೆ. ಆಗ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ. ಶವಗಳನ್ನು ಸಿಲ್ಚಾರ್‌ ಆಸ್ಪತ್ರೆಯಲ್ಲಿ ಪೋಸ್ಟ್‌ ಮಾರ್ಟಂ ಮಾಡಿ ಮೃತದೇಹಗಳನ್ನು ಮಣಿಪುರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅದನ್ನು ತಮಗೆ ನೀಡಬೇಕೆಂದು ಕುಟುಂಬಸ್ಥರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಗಲಭೆ ನಿಯಂತ್ರಿಸಿ:ಮಿಲಿಟರಿಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಕಳೆದ ಕೆಲವು ದಿನಗಳಿಂದ ಮತ್ತೆ ಹಿಂಸಾಚಾರಕ್ಕೆ ಸಿಲುಕಿರುವ ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಪುನರ್‌ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಸೇನಾಪಡೆಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ಪೊಲೀಸ್‌ ಠಾಣೆ ಹಾಗೂ ಸಿಆರ್‌ಪಿಎಫ್‌ ಶಿಬಿರದ ಮೇಲೆ ದಾಳಿ ನಡೆಸಲು ಯತ್ನಿಸಿದ 11 ಶಂಕಿತ ಉಗ್ರಗಾಮಿಗಳನ್ನು ಕಳೆದ ಸೋಮವಾರ ಭದ್ರತಾ ಪಡೆಗಳು ಗುಂಡಿಟ್ಟು ಹತ್ಯೆಗೈದಿದ್ದವು.

PREV

Recommended Stories

ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್‌ ಸರ್ವೆ