- ವಿಶ್ವ ಸಮುದಾಯಕ್ಕೆ ಎಫ್‌ಟಿಎಎಫ್ ಸಂಸ್ಥೆ ಎಚ್ಚರಿಕೆ
- ಟೆರರ್ ಫಂಡ್ ಕುರಿತ ವರದಿ ಬಿಡುಗಡೆ ಮಾಡಿದ ಸಂಸ್ಥೆ- ಪುಲ್ವಾಮಾ, ಗೋರಖ್‌ನಾಥ್ ದಾಳಿ ವಿಚಾರ ಪ್ರಸ್ತಾಪ
- ಪುಲ್ವಾಮಾ ಸ್ಫೋಟಕ್ಕೆ ಆನ್‌ಲೈನ್‌ನಿಂದ ವಸ್ತು ಖರೀದಿ- ಅಲ್ಯುಮಿನಿಯಂ ಪೌಡರ್ ಖರೀದಿಸಿ ಬಳಸಿದ್ದ ಉಗ್ರರು=
ನವದೆಹಲಿ: ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವು ನೀಡಲು ಉಗ್ರ ಸಂಘಟನೆಗಳು ಬಳಸುತ್ತಿರುವ ವಿಧಾನ ಬದಲಾಗುತ್ತಿದೆ. 2019ರ ಪುಲ್ವಾಮಾ ದಾಳಿ, 2022ರ ಗೋರಖ್‌ನಾಥ್ ದೇವಸ್ಥಾನ ಮೇಲಿನ ದಾಳಿ ವೇಳೆ ಉಗ್ರ ಸಂಘಟನೆಗಳು ಇ-ಕಾಮರ್ಸ್ ಮತ್ತು ಆನ್‌ಲೈನ್ ಪೇಮೆಂಟ್ ಸೇವೆಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಅಂತಾರಾಷ್ಟ್ರೀಯ ಭಯೋತ್ಪಾದನಾ ಹಣಕಾಸು ಮೇಲಿನ ನಿಗಾ ಸಂಸ್ಥೆಯಾದ ಎಫ್‌ಎಟಿಎಫ್ ಎಚ್ಚರಿಸಿದೆ.ಎಫ್‌ಟಿಎಎಫ್ ಬಿಡುಗಡೆ ಮಾಡಿದ ಹೊಸ ವರದಿಯಲ್ಲಿ ಬದಲಾದ ಕಾಲಘಟ್ಟದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವ ರೀತಿ ಯಾವ ರೀತಿ ಬದಲಾಗಿದೆ ಎಂಬುದನ್ನು ಪಾಕಿಸ್ತಾನ ಮೂಲದ ಉಗ್ರರು ಭಾರತದಲ್ಲಿ ನಡೆಸಿದ ಹಿಂದಿನ ಎರಡು ದಾಳಿಗಳನ್ನು ಉಲ್ಲೇಖಿಸಿ ವಿವರಿಸಲಾಗಿದೆ.
ಭಾರತದಲ್ಲಿನ ದಾಳಿ ಉದಾಹರಣೆ:2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಐಇಡಿ ಬಳಸಲಾಗಿತ್ತು. ಇದಕ್ಕೆ ಬಳಸಲಾಗುವ ಅಲ್ಯುಮಿನಿಯಂ ಪೌಡರ್ ಅನ್ನು ಇಪಿಒಎಂ ಅಮೆಜಾನ್ ಮೂಲಕ ಖರೀದಿಸಲಾಗಿತ್ತು. ಈ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಯೋಧರು ಮೃತಪಟ್ಟಿದ್ದರು. ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ದಾಳಿ ಹೊಣೆ ಹೊತ್ತುಕೊಂಡಿತ್ತು.
ಇನ್ನು 2022, ಏಪ್ರಿಲ್ 4ರಂದು ಗೋರಖ್‌ನಾಥ್ ದೇವಸ್ಥಾನದ ಮೇಲಿನ ದಾಳಿಯ ರೂವಾರಿ ಆನ್‌ಲೈನ್ ಪೇಮೆಂಟ್ ಸಿಸ್ಟಮ್ ಮತ್ತು ವಿಪಿಎನ್ ಬಳಸಿದ್ದು ಬೆಳಕಿಗೆ ಬಂದಿತ್ತು. ಎಫ್‌ಟಿಎಫ್ ಪ್ರಕಾರ, ತನಿಖೆ ವೇಳೆ ಆರೋಪಿ ಪೇಪಾಲ್ ಮೂಲಕ 6.7 ಲಕ್ಷ ರು. ಅನ್ನು ಐಎಸ್‌ಐಎಲ್ ಉಗ್ರ ಸಂಘಟನೆ ಪರ ವರ್ಗಾಯಿಸಿದ್ದ. ಇದಕ್ಕಾಗಿ ಆತ ಅಂತಾರಾಷ್ಟ್ರೀಯ ಮೂರನೇ ವ್ಯಕ್ತಿಯ ವರ್ಗಾವಣೆ ಮತ್ತು ವಿಪಿಎನ್ ಸೇವೆಗಳನ್ನು ಬಳಸಿದ್ದ. ಈ ಮೂಲಕ ಐಪಿ ಗುರುತನ್ನು ಮರೆಮಾಚಿದ್ದ.