ಸಾರಾಂಶ
ಚಂಡೀಗಢ: ಉತ್ತರದ ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆಯಿಂದ ಸಟ್ಲೇಜ್, ಬಿಯಾಸ್, ರಾವಿ ನದಿಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ಪಂಜಾಬ್ 4 ದಶಕಗಳಲ್ಲೇ ಭೀಕರ ಪ್ರವಾಹಕ್ಕೆ ತುತ್ತಾಗಿದ್ದು, 11 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಕಂಡುಕೇಳರಿಯದ ಪ್ರವಾಹಕ್ಕೆ ತುತ್ತಾಗಿರುವ ಪಂಜಾಬ್‌ನಲ್ಲಿ ಇದುವರೆಗೆ ಸುಮಾರು 1018 ಹಳ್ಳಿಗಳ 3 ಲಕ್ಷ ಹೆಕ್ಟೇರ್ ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ 11,330ಕ್ಕೂ ಹೆಚ್ಚು ಜನರನ್ನು ಎನ್‌ಡಿ ಆರ್‌ಎಫ್, ಸೇನೆ, ಬಿಎಸ್‌ಎಫ್ ಸ್ಥಳಾಂತರಗೊಳಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ 87 ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿದೆ. ಈ ಪೈಕಿ 77 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು 4729 ಮಂದಿ ಆಶ್ರಯ ಪಡೆದಿದ್ದಾರೆ.
ಈ ನಡುವೆ ಪ್ರವಾಹಕ್ಕ ನಲುಗಿರುವ ರಾಜ್ಯಕ್ಕೆ 60000 ಕೋಟಿ ರು. ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಮನವಿ ಸಲ್ಲಿಸಿದ್ದಾರೆ.
ಈ ತಿಂಗಳು ಮತ್ತಷ್ಟು ಭೂಕುಸಿತ, ದಿಢೀರ್ ಪ್ರವಾಹ
ನವದೆಹಲಿ: ಭೀಕರ ಮಳೆಯಿಂದಾಗಿ ಈಗಾಗಲೇ ದೇಶಾದ್ಯಂತ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿರುವ ನಡುವೆಯೇ, ಸೆಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಲಿದೆ. ಪರಿಣಾಮ ದೇಶದ ಹಲವು ಭಾಗಗಳಲ್ಲಿ ಭೂಕುಸಿತ, ದಿಢೀರ್ ಪ್ರವಾಸ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಜೂ.1ರಿಂದ ಆ.31ರ ಅವಧಿಯಲ್ಲಿ ಭಾರತದಲ್ಲಿ 743.1 ಮಿ.ಮೀ. ಮಳೆಯಾಗಿದೆ. ಸಾಮಾನ್ಯವಾಗಿ 700.7 ಮಿ.ಮೀ. ಸುರಿಯುತ್ತಿದ್ದ ಮಳೆಗಿಂತ ಈ ಪ್ರಮಾಣ ಶೇ.6ರಷ್ಟು ಹೆಚ್ಚಿದೆ. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಇನ್ನೂ ಅಧಿಕ ಮಳೆಯಾಗುವ ಸಾಧ್ಯತೆಯಿದೆ.
ಪ್ರತಿವರ್ಷ ಸೆಪ್ಟೆಂಬರ್‌ನಲ್ಲಿ ದೀರ್ಘಕಾಲೀನ ಸರಾಸರಿಯಾದ 167.9 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ ಈ ವರ್ಷ ಅದಕ್ಕಿಂತ ಶೇ.109ರಷ್ಟು ಹೆಚ್ಚು ಮಳೆಯ ನಿರೀಕ್ಷೆ ಇದೆ. ಹೀಗಾಗಿ ನದಿಗಳು ತುಂಬಿ ಹರಿಯಲಿವೆ. ಉತ್ತರಾಖಂಡದಲ್ಲಿ ಭೂಕುಸಿತ, ದಿಢೀರ್ ಪ್ರವಾಹ ಸಾಧ್ಯತೆ ಇದೆ. ಇನ್ನುಹರ್ಯಾಣ, ದೆಹಲಿ, ರಾಜಸ್ಥಾನದಲ್ಲಿ ಭಾರೀ ಮಳೆಯಿಂದ ಸಾಮಾನ್ಯ ಜನಜೀವನ ವ್ಯತ್ಯಯ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.