ಧರ್ಮಗ್ರಂಥ ಹಾನಿ ತಡೆವಬಿಲ್‌ ಇಂದು ಪಂಜಾಬಲ್ಲಿ ಮಂಡನೆ : ಗಲ್ಲು ಶಿಕ್ಷೆ?

KannadaprabhaNewsNetwork |  
Published : Jul 11, 2025, 01:49 AM ISTUpdated : Jul 11, 2025, 04:14 AM IST
ಪಂಜಾಬ್ | Kannada Prabha

ಸಾರಾಂಶ

ಧರ್ಮಗ್ರಂಥಗಳಿಗೆ ಹಾನಿ ಮಾಡುವವರ ವಿರುದ್ಧ ಅತ್ಯಂತ ಕಠಿಣ ಶಿಕ್ಷೆಗೆ ಅವಕಾಶ ನೀಡುವ ಮಸೂದೆಯನ್ನು   ವಿಧಾನಸಭೆಯಲ್ಲಿ ಮಂಡಿಸಲು ಪಂಜಾಬ್‌ನ ಆಮ್‌ಆದ್ಮಿ ಸರ್ಕಾರ ನಿರ್ಧರಿಸಿದೆ.

ಚಂಡೀಗಢ: ಧರ್ಮಗ್ರಂಥಗಳಿಗೆ ಹಾನಿ ಮಾಡುವವರ ವಿರುದ್ಧ ಅತ್ಯಂತ ಕಠಿಣ ಶಿಕ್ಷೆಗೆ ಅವಕಾಶ ನೀಡುವ ಮಸೂದೆಯನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಲು ಪಂಜಾಬ್‌ನ ಆಮ್‌ಆದ್ಮಿ ಸರ್ಕಾರ ನಿರ್ಧರಿಸಿದೆ. ಮಸೂದೆ ಮಂಡನೆ ಬಳಿಕ ಈ ಕುರಿತು ಜನರಿಂದ ಅಭಿಪ್ರಾಯ ಆಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಬಗ್ಗೆ ಪ್ರತಿಕ್ರಿಯಿಸಿದ್ದ ಆಪ್‌ ಸರ್ಕಾರ, ಧರ್ಮಗ್ರಂಥಗಳಿಗೆ ಹಾನಿ ಮಾಡುವ ಪ್ರಕರಣದಲ್ಲಿ ಜೀವಾವಧಿ ಅಥವಾ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ನಾವು ಜಾರಿಗೊಳಿಸಲಿದ್ದೇವೆ ಎಂದು ಹೇಳಿತ್ತು. 2015ರ ಬಳಿಕ ಪಂಜಾಬ್‌ನಲ್ಲಿ ಧರ್ಮಗ್ರಂಥಗಳಿಗೆ ಹಾನಿ ಮಾಡಿದ 300ಕ್ಕೂ ಹೆಚ್ಚು ಘಟನೆಗಳು ನಡೆದಿವೆ.

ಮಲೇಷ್ಯಾ ದೇಗುಲದಲ್ಲಿ ಅರ್ಚಕರಿಂದ ಲೈಂಗಿಕ ಕಿರುಕುಳ: ನಟಿ ಲಿಶಾ

ಕೌಲಾಲಂಪುರ: ಸ್ಥಳೀಯ ದೇಗುಲದ ಅರ್ಚಕರೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಲೇಷ್ಯಾದ ತಮಿಳು ನಟಿ ಲಿಶಾಲಿನಿ ಕನರನ್‌ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಚೆನ್ನೈನಲ್ಲಿ ದೂರು ದಾಖಲಾಗಿದೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅನುಭವ ಬರೆದುಕೊಂಡಿರುವ ನಟಿ, ‘ನಾನು ಜೂ.21ರಂದು ಮಲೇಷ್ಯಾದ ಮಾರಿಯಮ್ಮ ಗುಡಿಗೆ ಹೋಗಿದ್ದೆ. ಅಲ್ಲಿ ಪೂಜೆ ಮಾಡಿಸಿದ ಬಳಿಕ ತಾತ್ಕಾಲಿಕವಾಗಿ ಅಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾರತೀಯ ಮೂಲದ ಪುರೋಹಿತರು ನನ್ನನ್ನು ಪ್ರತ್ಯೇಕವಾಗಿ ಕೋಣೆಯೊಂದಕ್ಕೆ ಕರೆದರು. 

ಕೋಣೆಯೊಳಗೆ ಹೋದಾಗ ನನ್ನ ಮೇಲೆ ಅತಿ ಘಾಟು ಇರುವ ದ್ರವ್ಯ ಹಾಕಿ ‘ಇದು ಎಲ್ಲರಿಗೂ ಹಾಕುವುದಲ್ಲ’ ಎಂದು, ನನ್ನ ಅನುಮತಿ ಇಲ್ಲದೇ ನನ್ನ ರವಿಕೆ ಒಳಗೆ ಕೈ ಹಾಕಿ ಅಸಭ್ಯವಾಗಿ ಸ್ಪರ್ಶಿಸಿದರು. ಇದು ತಪ್ಪು ಎಂದು ತಿಳಿದರೂ   ಸ್ತಬ್ಧಳಾದೆ’ ಎಂದು ಹಂಚಿಕೊಂಡಿದ್ದಾರೆ. ಬಳಿಕ ಚೆನ್ನೈಗೆ ಬಂದ ಮೇಲೆ ಪ್ರಕರಣ ದಾಖಲಿಸಿದೆ. ಈ ವಿಷಯ ತಿಳಿದು ನನಗೆ ಕಿರುಕುಳ ನೀಡಿದ್ದ ಆರೋಪಿ ದೇಗುಲದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಎಂದು ನಟಿ ಹೇಳಿದ್ದಾರೆ.

ಯೆಮೆನ್‌ನಲ್ಲಿ ನಿಮಿಷಾಗೆ ಗಲ್ಲು: ತಡೆಗೆ ಕ್ರಮ ಕೋರಿದ್ದ ಅರ್ಜಿ ಜು.14ಕ್ಕೆ ವಿಚಾರಣೆ

ನವದೆಹಲಿ: ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್‌ ನಿಮಿಷಾ ಪ್ರಿಯಾರನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಪಿಐಎಲ್‌ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ.ನಿಮಿಷಾ ಪ್ರಿಯಾಗೆ ಕಾನೂನು ನೆರವು ನೀಡಲು ರಚನೆಯಾಗಿರುವ ‘ಸೇವ್‌ ನಿಮಿಷಾ ಪ್ರಿಯಾ - ಇಂಟರ್‌ನ್ಯಾಷನಲ್‌ ಆಕ್ಷನ್ ಕೌನ್ಸಿಲ್’ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿತ್ತು. ಜು.16ಕ್ಕೆ ಮರಣದಂಡನೆಗೆ ದಿನಾಂಕ ನಿಗದಿಯಾಗಿರುವುದರಿಂದ ಆದಷ್ಟು ಬೇಗ ವಿಚಾರಣೆ ನಡೆಸುವಂತೆ ವಕೀಲ ಸುಭಾಷ್‌ ಚಂದ್ರನ್‌ ಕೆ.ಆರ್‌ ಎನ್ನುವವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆ ಸುಪ್ರೀಂ ದ್ವಿಸದಸ್ಯ ಪೀಠ ಜು.14ಕ್ಕೆ ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡಿದೆ.

ಇದೇ ವೇಳೆ ವಕೀಲರು ಮೃತರ ಕುಟುಂಬಕ್ಕೆ ಬ್ಲಡ್‌ ಮನಿ (ಸಾವಿಗೆ ಪ್ರತಿಯಾಗಿ ಹಣದ ರೂಪದಲ್ಲಿ ನೀಡುವ ಪರಿಹಾರ) ನೀಡಲು ಸಾಧ್ಯವಾದರೆ ನಿಮಿಷಾ ಪ್ರಿಯಾಗೆ ಮೃತರ ಕುಟುಂಬಸ್ಥರಿಂದ ಕ್ಷಮೆಯಾಚನೆ ಸಿಗಬಹುದು ಎನ್ನುವ ವಿಚಾರವನ್ನ ಗಮನಕ್ಕೆ ತಂದರು.

ಮಾರನ್ ಸೋದರರ ಆಸ್ತಿ ವಿವಾದಕ್ಕೆ ಸ್ಟಾಲಿನ್‌ ಬ್ರೇಕ್‌

ಚೆನ್ನೈ: ಸನ್‌ ಟಿವಿ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ಕಿತ್ತಾಡುತ್ತಿರುವ ಮಾರನ್‌ ಸಹೋದರರಿಗೆ, ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಸಲಹೆ ನೀಡಿದ್ದಾರೆ.2003 ರಲ್ಲಿ ನಡೆದ ಸನ್ ಟಿವಿ ನೆಟ್‌ವರ್ಕ್‌ನ ಷೇರು ವಹಿವಾಟುಗಳನ್ನು ಆಕ್ಷೇಪಿಸಿ, ಡಿಎಂಕೆ ಸಂಸದರಾಗಿರುವ ದಯಾನಿಧಿ ಮಾರನ್‌ ಅವರು ತಮ್ಮ ಹಿರಿಯ ಸಹೋದರ ಕಲಾನಿಧಿ ಮಾರನ್‌ ಹಾಗೂ ಇನ್ನೂ 7 ಜನಕ್ಕೆ ಕೆಲ ತಿಂಗಳ ಹಿಂದೆ ನೋಟಿಸ್‌ ನೀಡಿದ್ದರು. ಇದೀಗ ಸಹೋದರರ ನಡುವೆ ನಡುವೆ ಸಂಧಾನ ಮಾಡಿಸಲು, ಅವರ ಸಂಬಂಧಿ ಸ್ಟಾಲಿನ್‌ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ, ದಯಾನಿಧಿ ಅವರು ನೋಟಿಸ್‌ ಹಿಂಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಪಿಲ್ ಶರ್ಮಾ ಕೆನಡಾ ಕೆಫೆ ಮೇಲೆ ಖಲಿಸ್ತಾನಿ ಉಗ್ರರ ಗುಂಡಿನ ದಾಳಿ

ಒಟ್ಟಾವಾ: ಕಾಮಿಡಿಯನ್ ಕಪಿಲ್ ಶರ್ಮಾ ಬ್ರಿಟಿಷ್ ಕೊಲಂಬಿಯಾದಲ್ಲಿ ಸರ್ರೆಯಲ್ಲಿ 2 ದಿನಗಳ ಹಿಂದಷ್ಟೇ ಆರಂಭಿಸಿದ್ದ ‘ಕ್ಯಾಪ್ಸ್‌ ಕೆಫೆ’ ರೆಸ್ಟೋರೆಂಟ್‌ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ.ಖಲಿಸ್ತಾನಿ ಬೆಂಬಲಿತ ಜರ್ಮನಿ ಮೂಲದ ಬಿಕೆಐ ಸಂಘಟನೆಗೆ ಸೇರಿದ ಹರ್ಜಿತ್‌ ಸಿಂಗ್ ಅಲಿಯಾಸ್‌ ಲಡ್ಡಿ ಗುಂಡಿನ ದಾಳಿ ನಡೆಸಿದ್ದಾನೆ. ಕೆಫೆ ಮೇಲೆ 9 ಗುಂಡು ಹಾರಿಸಲಾಗಿದೆ. ಅದೃಷ್ಟವಶಾತ್‌ ಯಾರಿಗೂ ಗಾಯಗಳಾಗಿಲ್ಲ. ಆದರೆ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎನ್ನಲಾಗಿದೆ. ಲಡ್ಡಿ ಭಾರತಕ್ಕೆ ಬೇಕಾದ ಮೋಸ್ಟ್‌ ವಾಂಟೆಡ್‌ ಉಗ್ರ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದ ಆರೋಪವಿದೆ. ಈತನ ಮಾಹಿತಿಗೆ ಎನ್‌ಐಎ 10 ಲಕ್ಷ ರು.ಬಹುಮಾನ ಘೋಷಿಸಿದೆ.

PREV
Read more Articles on