ಪುರಿ ಜಗನ್ನಾಥ ಮಂದಿರದ ರತ್ನ ಭಂಡಾರ ಓಪನ್‌

Published : Jul 15, 2024, 07:53 AM IST
Puri Jagannath temple

ಸಾರಾಂಶ

: ಒಡಿಶಾದ ಪುರಿಯಲ್ಲಿರುವ 12ನೇ ಶತಮಾನದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇಗುಲದ ಅಪಾರ ಚಿನ್ನಾಭರಣಗಳನ್ನು ಸಂಗ್ರಹಿಸಿ ಇಡಲಾಗಿರುವ, ‘ರತ್ನ ಭಂಡಾರ’ ಎಂದು ಕರೆಯಲಾಗುವ ಕೋಣೆಯನ್ನು 46 ವರ್ಷಗಳ ಬಳಿಕ ಭಾನುವಾರ ತೆರೆಯಲಾಯಿತು.

ಪುರಿ: ಒಡಿಶಾದ ಪುರಿಯಲ್ಲಿರುವ 12ನೇ ಶತಮಾನದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇಗುಲದ ಅಪಾರ ಚಿನ್ನಾಭರಣಗಳನ್ನು ಸಂಗ್ರಹಿಸಿ ಇಡಲಾಗಿರುವ, ‘ರತ್ನ ಭಂಡಾರ’ ಎಂದು ಕರೆಯಲಾಗುವ ಕೋಣೆಯನ್ನು 46 ವರ್ಷಗಳ ಬಳಿಕ ಭಾನುವಾರ ತೆರೆಯಲಾಯಿತು.

ರತ್ನ ಭಂಡಾರದ ದುರಸ್ತಿ ಮತ್ತು ಆಭರಣಗಳ ಮೌಲ್ಯಮಾಪನದ ಉದ್ದೇಶದಿಂದ ಈ ಪ್ರಕ್ರಿಯೆ ಆರಂಭಿಸಲಾಗಿದೆ. ಭಾನುವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಅಧಿಕಾರಿಗಳು ಮತ್ತು ದೇಗುಲದ ಮುಖ್ಯಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ನಡೆಸಿ ಬಳಿಕ ಮಧ್ಯಾಹ್ನ 1.28ಕ್ಕೆ ಭೀತರ್ ಭಂಡಾರ (ಒಳ ಕೋಣೆ) ಮತ್ತು ಬಾಹರ್‌ ಭಂಡಾರ್‌ (ಹೊರ ಕೋಣೆ) ಎರಡನ್ನೂ ತೆರೆಯಲಾಯಿತು.

ಹೊರ ಕೋಣೆಯಲ್ಲಿ ಪುರಿ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವರಿಗೆ ವಿಶೇಷ ದಿನಗಳಂದು ಪೂಜೆಗೆ ಬಳಸುವ ಚಿನ್ನಾಭರಣ ಇಡಲಾಗಿದ್ದು, ಅದರ ದ್ವಾರವನ್ನು ಕಾಲಕಾಲಕ್ಕೆ ತೆರೆಯಲಾಗುತ್ತದೆ. ಆದರೆ ಒಳ ಕೋಣೆಯ ದ್ವಾರವನ್ನು 1978ರ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಯಿತು. ಈ ಒಳಕೋಣೆಯಲ್ಲಿ ಪುರಿ ದೇಗುಲಕ್ಕೆ ಭಕ್ತರು ಮತ್ತು ಹಿಂದಿನ ರಾಜಮನೆತನದವರು ನೀಡಿದ ಕಾಣಿಕೆಗಳನ್ನು ಸಂಗ್ರಹಿಸಿ ಇಡಲಾಗಿದೆ. ಇವುಗಳ ಮೌಲ್ಯ ಸಾವಿರಾರು ಕೋಟಿ ರು. ಇರಬಹುದು ಎಂದು ಊಹಿಸಲಾಗಿದೆ. ಈ ಹಿಂದೆ 1978ರಲ್ಲಿ ಭಂಡಾರ ತೆರೆಯಲಾಗಿತ್ತಾದರೂ ಅದರಲ್ಲಿನ ವಸ್ತುಗಳನ್ನು ನಿಖರವಾಗಿ ಲೆಕ್ಕ ಹಾಕಿರಲಿಲ್ಲ.

ಈ ಎರಡೂ ಕೋಣೆಯಲ್ಲಿ ಸಂಗ್ರಹಿಸಲಾದ ಚಿನ್ನಾಭರಣಗಳನ್ನು ಹೊರತೆಗೆದು ಸಾಗಿಸಲು ವಿಶೇಷ 4.5 ಅಡಿ ಉದ್ದ, 2.5 ಅಡಿ ಎತ್ತರ ಮತ್ತು 2.5 ಅಡಿ ಅಗಲದ ಮರದ ಬಾಕ್ಸ್‌ ಸಿದ್ಧಪಡಿಸಲಾಗಿದ್ದು, ಅದರಲ್ಲಿ ತುಂಬಿ ನಂತರ ವಿಶೇಷ ತಾತ್ಕಾಲಿಕ ಭಧ್ರತಾ ಕೋಣೆಯೊಂದರಲ್ಲಿ ಇಡಲಾಗುವುದು. ನಂತರ ಸರ್ಕಾರದ ಅನುಮೋದನೆ ಬಳಿಕ ಈ ಚಿನ್ನಾಭರಣಗಳ ಮೌಲ್ಯಮಾಪನ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಗುಲದ ರತ್ನ ಭಂಡಾರ ತೆರೆಯುವ ವಿಷಯ ಇತ್ತೀಚೆಗೆ ನಡೆದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ವಿಷಯವಾಗಿ ಹೊರಹೊಮ್ಮಿತ್ತು. ತಾನು ಅಧಿಕಾರಕ್ಕೆ ಬಂದರೆ ಕೋವಿಡ್‌ ವೇಳೆ ಮುಚ್ಚಲಾಗಿದ್ದ ಪುರಿ ದೇಗುಲದ 3 ಬಾಗಿಲು ಭಕ್ತರಿಗೆ ಮುಕ್ತಗೊಳಿಸುವ ಮತ್ತು ರತ್ನ ಭಂಡಾರ ತೆರೆಯುವುದಾಗಿ ಬಿಜೆಪಿ ಭರವಸೆ ನೀಡಿತ್ತು.

ಅದರಂತೆ ಬಿಜೆಪಿ ಸರ್ಕಾರ ರಚನೆಯಾದ ದಿನವೇ ದೇಗುಲದ ಎಲ್ಲಾ 4 ಬಾಗಿಲು ತೆಗೆದು ಭಕ್ತರಿಗೆ ಮುಕ್ತಗೊಳಿಸಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಭಾನುವಾರ ರತ್ನ ಭಂಡಾರದ ಬಾಗಿಲು ತೆರೆಯಲಾಗಿದೆ.

ಏನಿದು ರತ್ನಭಂಡಾರ?

ರತ್ನಭಂಡಾರದ ಒಳಕೋಣೆಯಲ್ಲಿ ಪುರಿ ದೇಗುಲಕ್ಕೆ ಭಕ್ತರು ಮತ್ತು ಹಿಂದಿನ ರಾಜಮನೆತನದವರು ನೀಡಿದ ಕಾಣಿಕೆಗಳನ್ನು ಸಂಗ್ರಹಿಸಿ ಇಡಲಾಗಿದೆ. ಇವುಗಳಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳು, ಪಾತ್ರೆಗಳು ಇವೆ ಎನ್ನಲಾಗಿದೆ.

ಒಳಗೆ ಎಷ್ಟು ನಿಧಿ ಇರಬಹುದು?

2018 ರಲ್ಲಿ ಅಂದಿನ ಕಾನೂನು ಸಚಿವ ಪ್ರತಾಪ್ ಜೇನಾ ಒಡಿಶಾ ವಿಧಾನಸಭೆಗೆ ಹೇಳಿಕೆ ನೀಡಿ, ‘ರತ್ನ ಭಂಡಾರವನ್ನು ಕೊನೆಯ ಬಾರಿಗೆ ಅಂದರೆ 1978ರಲ್ಲಿ ತೆರೆದಾಗ ಸುಮಾರು 12,500 ಭರಿ (ಒಂದು ಭರಿ ಎಂದರೆ 11.66 ಗ್ರಾಂಗೆ ಸಮಾನ) ಚಿನ್ನಾಭರಣಗಳಿದ್ದವು ಎಂದು ಹೇಳಿದ್ದರು. ಅಲ್ಲದೇ 22 ಸಾವಿರ ಭರಿಗೂ ಅಧಿಕ ತೂಕದ ಬೆಳ್ಳಿಯ ಪಾತ್ರೆಗಳು ಇದ್ದವು ಎಂದಿದ್ದರು.

ಹಾವು ಇವೆ ಎಂಬ ಭೀತಿ

ಈ ನಡುವೆ ರತ್ನ ಭಂಡಾರ ಕಾಯಲು ಹಾವುಗಳು ಇದೆ ಎಂಬ ನಂಬಿಕೆ ಇದೆ. ಹೀಗಾಗಿ ಭಾನುವಾರದ ಪ್ರಕ್ರಿಯೆ ವೇಳೆ 2 ಹಾವು ಹಿಡಿಯುವ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ
ಭೀಕರ ಬಿರುಗಾಳಿ : ಬ್ರೆಜಿಲ್‌ನ ಸ್ಟ್ಯಾಚು ಆಫ್‌ ಲಿಬರ್ಟಿ ಧರೆಗೆ