4ನೇ ದಿನದಲ್ಲಿ ವಿಶ್ವದಾದ್ಯಂತ 800 ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದ ಪುಷ್ಪ- 2 ಸಿನಿಮಾ

KannadaprabhaNewsNetwork | Updated : Dec 10 2024, 07:51 AM IST

ಸಾರಾಂಶ

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿಯನದ ಪುಷ್ಪ- 2 ಸಿನಿಮಾ 4ನೇ ದಿನದಲ್ಲಿ ವಿಶ್ವದಾದ್ಯಂತ 800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ.

ಹೈದರಾಬಾದ್: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿಯನದ ಪುಷ್ಪ- 2 ಸಿನಿಮಾ 4ನೇ ದಿನದಲ್ಲಿ ವಿಶ್ವದಾದ್ಯಂತ 800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ.ಪುಷ್ಪ-2 ಸಿನಿಮಾ ವಾರಂತ್ಯದಲ್ಲಿ 829 ಕೋಟಿ.ರು ಗಳಿಸಿದೆ ಎಂದು ಅಂದಾಜಿಸಲಾಗಿದ್ದು, ಇಷ್ಟು ವೇಗದಲ್ಲಿ 800 ಕೋಟಿ ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಿಡುಗಡೆಯಾದ ಮೊದಲ ಮೂರು ದಿನದಲ್ಲಿ ಈ ಸಿನಿಮಾ ಭಾರತದಲ್ಲಿ 389.95 ಕೋಟಿ ರೂ.ಗಳಿಸಿದ್ದು, 4ನೇ ದಿನ 141.50 ಕೋಟಿ ರೂ.ಗಳಿಗೆ ಮಾಡಿದೆ. ಒಟ್ಟಾರೆಯಾಗಿ ಭಾರತದಲ್ಲಿ 529.45 ಕೋಟಿ ರು. ಹಣವನ್ನು ಪುಷ್ಟ-2 ಕಲೆಕ್ಷನ್‌ ಮಾಡಿದೆ. ಉಳಿದ ಗಳಿಕೆ ವಿದೇಶದಲ್ಲಾಗಿದೆ.

ಆರ್‌ಬಿಐಗೆ ಸಂಜಯ್‌ ಮಲ್ಹೋತ್ರಾ ನೂತನ ಗೌರ್ನರ್‌

ನವದೆಹಲಿ: ಕಂದಾಯ ಇಲಾಖೆಯ ಕಾರ್ಯದರ್ಶಿ ಸಂಜಯ್‌ ಮಲ್ಹೋತ್ರಾ ಅವರು ಭಾರತೀಯ ರಿಸರ್ವ್‌ ಬ್ಯಾಂಕ್‌ನ ನೂತನ ಗವರ್ನರ್‌ ಆಗಿ ನೇಮಕಗೊಂಡಿದ್ದಾರೆ.ಹಾಲಿ ಅಧ್ಯಕ್ಷ ಶಕ್ತಿಕಾಂತ್‌ ದಾಸ್‌ ಅವರ ಅಧಿಕಾರವು ಮಂಗಳವಾರ ಮುಕ್ತಾಯಗೊಳ್ಳಲಿದ್ದು, ಬುಧವಾರದಿಂದ ಮುಂದಿನ 3 ವರ್ಷಗಳವರೆಗೆ ಮಲ್ಹೋತ್ರಾ ಆರ್‌ಬಿಐ ಮುನ್ನಡೆಸಲಿದ್ದಾರೆ.

ಮಲ್ಹೋತ್ರಾ 1990ರ ರಾಜಸ್ಥಾನ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದು, ಹಣಕಾಸು, ಇಂಧನ, ತೆರಿಗೆ ಸೇರಿ ಹಲವು ವಿಭಾಗಗಳಲ್ಲಿ 33 ವರ್ಷಗಳ ಅನುಭವ ಹೊಂದಿದ್ದಾರೆ. ಸಂಪುಟದ ನೇಮಕಾತಿ ಸಮಿತಿಯು ಮಲ್ಹೋತ್ರಾ ಅವರ ಹೆಸರನ್ನು ಅಂತಿಮಗೊಳಿಸಿದೆ.ನಿರ್ಗಮಿತ ಗೌರ್ನರ್‌ ದಾಸ್‌ ಅವರು 2018ರ ಡಿ.12ರಂದು ಅಧಿಕಾರ ವಹಿಸಿಕೊಂಡಿದ್ದರು. ಬಳಿಕ 1 ಸಲ ಅಧಿಕಾರ ವಿಸ್ತರಣೆ ಪಡೆದಿದ್ದರು.

40 ದಿಲ್ಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆಪಿಟಿಐ ನವದೆಹಲಿ

ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದು ಆತಂಕ ಸೃಷ್ಟಿಯಾದ ರೀತಿಯಲ್ಲೇ ಸೋಮವಾರ ಬೆಳಗ್ಗೆ ದೆಹಲಿಯ ಸುಮಾರು 40 ಶಾಲೆಗಳಲ್ಲಿ ಬಾಂಬ್‌ ಇಡಲಾಗಿದೆ ಎಂಬ ಇ-ಮೇಲ್‌ ಸಂದೇಶ ರವಾನಿಸಲಾಗಿದೆ. ಬಾಂಬ್‌ ಸ್ಫೋಟಿಸಬಾರದು ಎಂದರೆ 30,000 ಡಾಲರ್‌ ನೀಡಿ’ ಎಂಬ ಬೇಡಿಕೆ ಇಡಲಾಗಿದೆ.ಈ ಹಿನ್ನೆಲೆಯಲ್ಲಿ ಆ ಎಲ್ಲಾ ಶಾಲೆ ಬಂದ್ ಮಾಡಿ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿ ಶೋಧ ನಡೆಸಲಾಗಿದೆ. ಬಾಂಬ್‌ ಪತ್ತೆ ದಳ, ಅಗ್ನಿ ಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸರು ಹಾಗೂ ಶ್ವಾನ ದಳ ಜಂಟಿಯಾಗಿ ಶೋಧ ಕಾರ್ಯ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ 11.38ರ ಸುಮಾರಿಗೆ ಶಾಲೆಗಳಿಗೆ ಬೆದರಿಕೆ ಮೇಲ್‌ ಕಳಿಸಲಾಗಿತ್ತು. ಅದರಲ್ಲಿ, ‘ನಾನು ಶಾಲೆಯೊಳಗೆ ಹಲವು ಬಾಂಬ್‌ಗಳನ್ನು ಇಟ್ಟಿದ್ದೇನೆ. ಅವು ಸಣ್ಣ ಗಾತ್ರದವುಗಳಾಗಿದ್ದು, ಅಡಗಿಸಿಡಲಾಗಿದೆ. ಅವುಗಳಿಂದ ಕಟ್ಟಡಕ್ಕೆ ಅಧಿಕ ಹಾನಿಯಾಗದಿದ್ದರೂ ಹಲವರು ಕೈ ಕಾಲು ಕಳೆದುಕೊಳ್ಳುವ, ಗಾಯಗೊಳ್ಳುವ ಸಾಧ್ಯತೆ ಇದೆ. ಇದರಿಂದ ತಪ್ಪಿಸಿಕೊಳ್ಳಲು 30,000 ಡಾಲರ್‌ (25 ಲಕ್ಷ ರು.) ನೀಡಿ’ಎಂದು ಬರೆಯಲಾಗಿದೆ.

ಘಟನೆಯ ಕುರಿತು ವಿದ್ಯಾರ್ಥಿಗಳ ಪೋಷಕರು ಕಳವಳ ವ್ಯಕ್ತಪಡಿಸಿದ್ದು, ಇಂತಹ ಬೆದರಿಕೆಗಳು ಆಗಾಗ ಬರುತ್ತಿರುವುದು ಸರ್ಕಾರದ ವೈಫಲ್ಯ ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.ಮೇ ತಿಂಗಳಲ್ಲೂ ನಗರದ ಸುಮಾರು 200 ಶಾಲೆಗಳು, ಆಸ್ಪತ್ರೆಗಳು ಹಾಗೂ ಪ್ರಮುಖ ಕಟ್ಟಡಗಳಿಗೆ ಇಂತಹ ಬೆದರಿಕೆ ಬಂದಿತ್ತು. ಅವು ವಿಪಿಎನ್‌ ಬಳಸಿ ಕಳಿಸಲಾಗಿದ್ದ ಸಂದೇಶಗಳಾದ್ದರಿಂದ ಅವುಗಳ ಮೂಲದ ಪತ್ತೆ ಸಾಧ್ಯವಾಗಿಲ್ಲ.

ಹಿಂದುತ್ವ ಎಂಬುದು ರೋಗ: ಮೆಹಬೂಬಾ ಪುತ್ರಿ ವಿವಾದ

ಶ್ರೀನಗರ: ‘ಹಿಂದುತ್ವ ಎಂಬುದು ರೋಗ’ ಎಂದು ಹೇಳಿ ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ ಇಲ್ತಿಜಾ ಮುಫ್ತಿ ವಿವಾದ ಸೃಷ್ಟಿಸಿದ್ದಾರೆ.ಮಧ್ಯಪ್ರದೇಶದಲ್ಲಿ ಒಂದು ಕೋಮಿನ 3 ಅಪ್ರಾಪ್ತರಿಗೆ ಜೈ ಶ್ರೀರಾಂ ಎಂದು ಕೂಗಲು ಬಲವಂತ ಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಲ್ತಿಜಾ, ‘ತನ್ನ ಹೆಸರನ್ನು ಜಪಿಸಲು ನಿರಾಕರಿಸಿದ ಬಾಲಕರನ್ನು ಚಪ್ಪಲಿಗಳಿಂದ ಹೊಡೆಯುತ್ತಿದ್ದಾರೆ ಎಂಬುದನ್ನು ನೋಡುತ್ತ ಅಸಹಾಯಕ ಆಗಿರುವ ಶ್ರೀರಾಮನೇ ನಾಚಿಕೆಯಿಂದ ತಲೆ ತಗ್ಗಿಸಬೇಕು. ಹಿಂದುತ್ವವು ಲಕ್ಷಾಂತರ ಭಾರತೀಯರನ್ನು ಬಾಧಿಸುತ್ತಿರುವ ಮತ್ತು ದೇವರ ಹೆಸರನ್ನು ಕೆಡಿಸುವ ರೋಗವಾಗಿದೆ’ ಎಂದಿದ್ದಾರೆ.

ಇದಕ್ಕೆ ಬಿಜೆಪಿ ಮುಖಂಡ ಮುಖ್ತರ್‌ ಅಬ್ಬಾಸ್‌ ನಖ್ವಿ ತಿರುಗೇಟು ನೀಡಿದ್ದು, ‘ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ತಿಳಿದಿಲ್ಲದವರಿಗೆ ಮತ್ತೊಮ್ಮೆ ಸನಾತನ ಸಂಸ್ಕೃತಿಯ ಬಗ್ಗೆ ಸಂದೇಶವನ್ನು ನೀಡಬೇಕಾಗಿದೆ. ಹಿಂದುತ್ವವು ಸಮಾಜದ ಎಲ್ಲಾ ವರ್ಗಗಳನ್ನು ಒಟ್ಟಿಗೆ ತೆಗೆದುಕೊಂಡು ಒಳಗೊಳ್ಳುವ ಚಿಂತನೆಯೊಂದಿಗೆ ಮುನ್ನಡೆಯುವ ಸಂದೇಶ ನೀಡುತ್ತದೆ’ ಎಂದಿದ್ದಾರೆ.

ನೌಕಾಪಡೆಗೆ ರಷ್ಯಾ ನಿರ್ಮಿತ ಐಎನ್‌ಎಸ್‌ ತುಶೀಲ್‌ ಸೇರ್ಪಡೆ

ನವದೆಹಲಿ: ರಷ್ಯಾ ನಿರ್ಮಿತ ನಿರ್ದೇಶಿತ ಕ್ಷಿಪಣಿಯುಳ್ಳ ಐಎನ್‌ಎಸ್‌ ತುಶೀಲ್‌ ನೌಕೆಯು ಅಲ್ಲಿನ ಕಲಿನಿನ್ಗ್ರಾಡ್‌ನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ.

ಚೀನಾದ ಉಪಟಳ ಅಧಿಕವಿರುವ ಹಿಂದೂ ಮಹಾಸಾಗರದಲ್ಲಿ ನಿಯೋಜನೆಗೊಳ್ಳುವ ಸಾಧ್ಯತೆ ಇರುವ ಈ ನೌಕೆಯ ಸೇರ್ಪಡೆ ಸಮಾರಂಭ, ರಕ್ಷಣಾ ಸಚಿವ ರಾಜನಾಥ ಸಿಂಗ್‌, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ದಿನೇಶ್‌ ತ್ರಿಪಾಠಿ ಹಾಗೂ ಅನ್ಯ ಭಾರತೀಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.ಈ ವೇಳೆ ಮಾತನಾಡಿದ ಸಿಂಗ್‌, ‘ಈ ಸೇರ್ಪಡೆಯು ಭಾರತೀಯ ನೌಕಾಪಡೆಯ ಶಕ್ತಿ ವೃದ್ಧಿಸುತ್ತಿರುವ ಹಾಗೂ ಉಭಯ ದೇಶಗಳ ನಡುವಿನ ಸುದೀರ್ಘ ಒಪ್ಪಂಧಗಳ ಸಂಕೇತ. ಕೃತಕ ಬುದ್ಧಮತ್ತೆ, ಸೈಬರ್‌ ಭದ್ರತೆ, ಅಂತರಿಕ್ಷ ಅನ್ವೇಷಣೆ, ಭಯೋತ್ಪಾದನೆ ನಿಗ್ರಹ ಕ್ಷೇತ್ರಗಳಲ್ಲಿ ಉಭಯ ದೇಶಗಳ ಅನುಭವದ ಆಧಾರದಲ್ಲಿ ರಷ್ಯಾದೊಂದಿಗಿನ ಸಹಕಾರ ಹೊಸ ಹಂತ ತಲುಪಿದೆ’ ಎಂದರು.

2.5 ಬಿಲಿಯನ್‌ ಡಾಲರ್‌ ವೆಚ್ಚದಲ್ಲಿ ಭಾರತೀಯ ನೌಕಾಪಡೆಗೆ 4 ಹಡಗುಗಳನ್ನು ತಯಾರಿಸುವ ಬಗ್ಗೆ 2016ರಲ್ಲಿ ರಷ್ಯಾದೊಂದಿಗೆ ಆದ ಒಪ್ಪಂಧದ ಭಾಗವಾದ ತುಶೀಲ್‌ 125 ಮೀ. ಉದ್ದವಿದ್ದು, ರಷ್ಯಾ- ಭಾರತ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇದರ ಹೊಸ ವಿನ್ಯಾಸವು ವೈಶಿಷ್ಟ್ಯಗಳು ಮತ್ತು ಉತ್ತಮ ಸ್ಥಿರತೆ ಒದಗಿಸುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.ಇನ್ನೊಂದು ನೌಕೆಯೂ ರಷ್ಯಾದಲ್ಲಿ ನಿರ್ಮಾಣವಾಗಿದ್ದು, ಇನ್ನೆರಡು ಹಡಗುಗಳು ಭಾರತದಲ್ಲೇ ತಯಾರಾಗಲಿವೆ.

==

ಮುಘಲ್‌ ಕಾಲದ ಎಲ್ಲ ಮಸೀದಿಗಳು ದೇಗುಲ ಮೇಲೆ ನಿರ್ಮಾಣ: ತೊಗಾಡಿಯಾ

ಬದಾಯೂಂ (ಉ.ಪ್ರ.): ಮುಘಲರ ಅವಧಿಯಲ್ಲಿ ನಿರ್ಮಿಸಲಾದ ಎಲ್ಲ ಮಸೀದಿಗಳನ್ನು ದೇವಸ್ಥಾನಗಳನ್ನು ಕೆಡವಿ ನಿರ್ಮಿಸಲಾಗಿದೆ ಎಂದು ಬಜರಂಗ ದಳ ರಾಷ್ಟ್ರೀಯ ಅಧ್ಯಕ್ಷ ಪ್ರವೀಣ್‌ ತೊಗಾಡಿಯಾ ಆರೋಪಿಸಿದ್ದಾರೆ.ಉತ್ತರ ಪ್ರದೇಶದಲ್ಲಿ ನಡೆಯುವ ಮಹಾಕುಂಭ ಮೇಳ ಸಂಬಂಧೀ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಸೀದಿಗಳನ್ನು ನಿರ್ಮಿಸಲು 12,000 ದೇವಸ್ಥಾನಗಳ ಕೆಡವಲಾಗಿದೆ ಎಂದರು.

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿದ ಅವರು, ಹೋರಾಟ ಬಾಂಗ್ಲಾ ಸರ್ಕಾರದ ವಿರುದ್ಧವಿದ್ದರೂ ಹಿಂದೂಗಳನ್ನು ಏಕೆ ಕೊಲ್ಲಲಾಗುತ್ತಿದೆ. ಹಿಂದೂಗಳ ರಕ್ಷಣೆ ಮಾಡುವ ಹಾಗೂ ಸರಿಯಾದ ಉತ್ತರ ನೀಡುವ ಸರ್ಕಾರ ಬರಬೇಕು ಎಂದು ಅವರು ಹೇಳಿದರು.

Share this article