ಕಳೆದ ಬುಧವಾರ ನಡೆದ ಅಜರ್‌ಬೈಜಾನ್ ವಿಮಾನ ಪತನ ದುರ್ಘಟನೆ ಸಂಬಂಧ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ಷಮೆ ಯಾಚಿಸಿದ್ದಾರೆ.
ಮಾಸ್ಕೋ: ಕಳೆದ ಬುಧವಾರ ನಡೆದ ಅಜರ್‌ಬೈಜಾನ್ ವಿಮಾನ ಪತನ ದುರ್ಘಟನೆ ಸಂಬಂಧ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ಷಮೆ ಯಾಚಿಸಿದ್ದಾರೆ. ರಷ್ಯಾದ ಕ್ಷಿಪಣಿ ದಾಳಿಗೆ ತುತ್ತಾಗಿ ವಿಮಾನ ಪತನಗೊಂಡಿದೆ ಎಂಬ ವರದಿಗಳ ಬೆನ್ನಲ್ಲೇ ಪುಟಿನ್‌ರಿಂದ ಈ ಕ್ಷಮೆಯಾಚನೆ ವ್ಯಕ್ತವಾಗಿದೆ. ಆದರೆ ಪುಟಿನ್ ನೇರವಾಗಿ ತಮ್ಮ ದೇಶದ ದಾಳಿಯಿಂದಾಗಿ ವಿಮಾನ ಪತನಗೊಂಡಿದೆ ಎಂದು ಹೇಳಿಲ್ಲ.
ಕಳೆದ ಬುಧವಾರ ಅಜರ್‌ಬೈಜಾನ್‌ನಿಂದ ರಷ್ಯಾಕ್ಕೆ ಹೊರಟಿದ್ದ ವಿಮಾನವು ಕಜಕಿಸ್ತಾನದಲ್ಲಿ ಪತನಗೊಂಡು 38 ಜನರು ಸಾವನ್ನಪ್ಪಿದ್ದರು. ಪ್ರಾಥಮಿಕ ತನಿಖೆ ವೇಳೆ ಹಕ್ಕಿಬಡಿತದಿಂದ ದುರಂತ ಸಂಭವಿಸಿತ್ತು ಎಂದು ಹೇಳಲಾಗಿತ್ತು.ಆದರೆ ಘಟನೆ ನಡೆದ ದಿನ ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆದಿತ್ತು. ಈ ವೇಳೆ ಅಜರ್‌ಬೈಜಾನ್ ವಿಮಾನವನ್ನು ಉಕ್ರೇನ್‌ನ ಡ್ರೋನ್ ಎಂದು ಪರಿಗಣಿಸಿ, ರಷ್ಯಾದ ವಾಯುರಕ್ಷಣಾ ಪಡೆಗಳು ಡ್ರೋನ್ ಅಥವಾ ಕ್ಷಿಪಣಿ ಮೂಲಕ ನಡೆಸಿದ ದಾಳಿಗೆ ವಿಮಾನ ಪತನಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ‘ದ ವಾಲ್‌ಸ್ಟ್ರೀಟ್ ಜರ್ನಲ್’ ಪತ್ರಿಕೆ ವರದಿ ಮಾಡಿತ್ತು. ಜೊತೆಗೆ ವಿಮಾನದ ಇಂಧನ ಟ್ಯಾಂಕ್ ಬಳಿ ಮೂಡಿರುವ ಕೆಲ ಗುರುತುಗಳು ಇದಕ್ಕೆ ಪೂರಕವಾಗಿದ ಎಂದು ಹೇಳಿತ್ತು.
ಅದರ ಬೆನ್ನಲ್ಲೇ ಇದೀಗ ಅಜರ್‌ಬೈಜಾನ್ ಅಧ್ಯಕ್ಷರ ಬಳಿ ಪುಟಿನ್ ಕ್ಷಮೆ ಯಾಚಿಸಿದ್ದಾರೆ. ಇದು ಪರೋಕ್ಷವಾಗಿ ಕ್ಷಿಪಣಿ ದಾಳಿಯನ್ನು ಒಪ್ಪಿಕೊಂಡ ಕ್ರಮ ಎಂದು ವಿಶ್ಲೇಷಿಸಲಾಗಿದೆ.
ಪುಟಿನ್ ಹೇಳಿದ್ದೇನು?:
ವಿಮಾನ ಪತನ ಒಂದು ದುರಂತ ಘಟನೆ. ಅಜರ್‌ಬೈಜಾನ್ ವಿಮಾನವು ರಷ್ಯಾದ ಭೂಭಾಗದಲ್ಲಿ ಇಳಿಯಲು ಯತ್ನಿಸುತ್ತಿದ್ದ ಹೊತ್ತಿನಲ್ಲೇ, ಉಕ್ರೇನ್ ಡ್ರೋನ್ ದಾಳಿ ತಡೆಯಲು ರಷ್ಯಾದ ವಾಯುರಕ್ಷಣಾ ವ್ಯವಸ್ಥೆಯು ಗ್ರೋಜ್ನಿ ಪ್ರದೇಶದ ಬಳಿ ಪ್ರತಿದಾಳಿ ನಡೆಸುತ್ತಿತ್ತು. ಘಟನೆ ರಷ್ಯಾದ ನೆಲದಲ್ಲಿ ನಡೆದ ಕಾರಣ ನಾವು ಕ್ಷಮೆಯಾಚಿಸುತ್ತೇವೆ’ ಎಂದು ಪುಟಿನ್ ಘಟನೆ ಕುರಿತು ಕ್ಷಮೆ ಯಾಚಿಸಿದ್ದಾರೆ. ಆದರೆ ಅವರು ಎಲ್ಲೂ ನಮ್ಮ ದಾಳಿಯಿಂದಾಗಿ ವಿಮಾನ ಪತನಗೊಂಡಿತು ಎಂದು ನೇರವಾಗಿ ಹೇಳಿಲ್ಲ.