ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ನಿಧಿ ಸಂಗ್ರಹಿಸಲು ಕಾಂಗ್ರೆಸ್ ಇತ್ತೀಚೆಗೆ ಕ್ರೌಡ್‌ಫಂಡಿಂಗ್ ಅಭಿಯಾನ ಆರಂಭಿಸಿತ್ತು. ವಿಶೇಷವೆಂದರೆ ಗುರುವಾರ ನಾಗಪುರದಲ್ಲಿ ನಡೆದ ಪಕ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮಕ್ಕೆ ಸಭಿಕರಿಗೆ ಹಾಕಲಾಗಿದ್ದ ಎಲ್ಲಾ ಕುರ್ಚಿಗಳ ಹಿಂದೆಯೂ ದೇಣಿಗೆ ನೀಡುವ ಸಲುವಾಗಿ ಬಾರ್ ಕೋಡ್ ಹಾಕಲಾಗಿತ್ತು. ಜೊತೆಗೆ ಎಲ್ಲೆಡೆ ಪೋಸ್ಟರ್‌ಗಳನ್ನು ಕೂಡಾ ಅಂಟಿಸಲಾಗಿತ್ತು. ಅದರಲ್ಲಿ ‘ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿ 138 ವರ್ಷಗಳಲ್ಲಿ ದೇಶಕ್ಕಾಗಿ ದುಡಿದಿದೆ. ಮುಂದೂ ದುಡಿಯುತ್ತದೆ. ಇದಕ್ಕಾಗಿ ನಿಮ್ಮ ಬೆಂಬಲ ಸದಾ ಬೇಕಾಗಿದೆ. ಪಕ್ಷಕ್ಕೆ ಪಾವತಿ ಮಾಡಿದ ಐದು ಅದೃಷ್ಟಶಾಲಿಗಳಿಗೆ ನಾಯಕ ರಾಹುಲ್ ಗಾಂಧಿ ಅವರಿಂದ ಸರ್ಟಿಫಿಕೇಟ್ ಕೊಡಿಸಲಾಗುತ್ತದೆ’ ಎಂದು ಮುದ್ರಿಸಿತ್ತು. ಈ ಹಿಂದೆ ಕೇಂದ್ರ ಸರ್ಕಾರ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜಾರಿ ಮಾಡಿದಾಗ ಇದೇ ಪಕ್ಷದ ಪಿ.ಚಿದಂಬರಂ ‘ಈ ರೀತಿ ಪಾವತಿಗಳೆಲ್ಲ ಭಾರತದಲ್ಲಿ ಯಶಸ್ಸು ಗಳಿಸುವುದಿಲ್ಲ’ ಎಂದಿದ್ದರು.
ರಾಹುಲ್ ಯಾತ್ರೆಗೆ ಸಿದ್ಧತೆ: ಜ.4ರಂದು 14 ರಾಜ್ಯಗಳ ರಾಜ್ಯಾಧ್ಯಕ್ಷರ ಜೊತೆ ಕೈ ಸಭೆಭಾರತ್ ಜೋಡೋ ಯಾತ್ರೆ ರೀತಿಯ ಮತ್ತೊಂದು ಯಾತ್ರೆ ‘ಭಾರತ್ ನ್ಯಾಯ್ ಯಾತ್ರೆ’ ಹಮ್ಮಿಕೊಂಡಿರುವ ಕಾಂಗ್ರೆಸ್ ಪಕ್ಷ ಇದರ ಪೂರ್ವಭಾವಿಯಾಗಿ ಯಾತ್ರೆ ಸಾಗುವ 14 ರಾಜ್ಯಗಳ ಪಕ್ಷದ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕ ಜೊತೆ ಸಭೆ ನಡೆಸಲು ನಿರ್ಧರಿಸಿದೆ. ಈ ಸಭೆಯನ್ನು ಜ.4ರ ಗುರುವಾರದಂದು ನಡೆಸಲು ಪಕ್ಷ ನಿರ್ಧರಿಸಿದೆ. ಭಾರತ್ ನ್ಯಾಯ್ ಯಾತ್ರೆ ಪೂರ್ವದ ಮಣಿಪುರದಿಂದ ಪಶ್ಚಿಮದ ಮುಂಬೈವರೆಗೆ 67 ದಿನಗಳಲ್ಲಿ ಸಾಗುತ್ತದೆ. ಈ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು ಪಕ್ಷದ ನಾಯಕರೊಂದಿಗೆ ನಡೆದುಕೊಂಡು ಹಾಗೂ ಇನ್ನು ಕೆಲ ಮಾರ್ಗಗಳನ್ನು ಬಸ್ಸಿನಲ್ಲಿ ಕ್ರಮಿಸಲಿದ್ದಾರೆ. ಇದರ ಅಂತಿಮ ಮಾರ್ಗ ಜ.8., ಯಾತ್ರೆಯ ಹಾಡು ಜ.12ರಂದು ಬಿಡುಗಡೆ ಮಾಡುವುದಾಗಿ ಪಕ್ಷ ತಿಳಿಸಿದೆ.