ಪಾಕ್‌, ಚೀನಾಕ್ಕೆ ಚಳ್ಳೆಹಣ್ಣು ತಿನ್ನಿಸಿದ್ದು ರಫೇಲ್‌ನ ಬಾಲ!

KannadaprabhaNewsNetwork |  
Published : Jul 10, 2025, 01:46 AM IST
ರಫೇಲ್‌ | Kannada Prabha

ಸಾರಾಂಶ

ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಭಾರತದ ಹಲವು ರಫೇಲ್ ಯುದ್ಧವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳುತ್ತಿರುವುದು ಕೇವಲ ಬಡಾಯಿ ಅಷ್ಟೆ.

- ರಫೇಲ್‌ಗೆ ಇರುತ್ತೆ ‘ಡಿಯಾಯ್‌ ಸಿಸ್ಟಂ’ ಬಾಲ । ‘ಆಪರೇಷನ್‌ ಸಿಂದೂರ’ ವೇಳೆ ಪಾಕ್‌ ಹೊಡೆದಿದ್ದು ರಫೇಲ್‌ಗಲ್ಲ, ಎಐ ಆಧರಿತ ಬಾಲಕ್ಕೆ

- ವಿಮಾನದ ರಕ್ಷಣೆಗೇ ಇರುವ ವ್ಯವಸ್ಥೆ ಇದು । ಬಾಲಕ್ಕೆ ಕ್ಷಿಪಣಿ ಹೊಡೆದು ರಫೇಲ್‌ಗೆ ಹೊಡೆದೆವು ಎಂದು ನಂಬಿ ಬೇಸ್ತುಬಿದ್ದ ಪಾಕಿಸ್ತಾನ

--

* ಏನಿದು ಡಿಕಾಯ್‌ ಸಿಸ್ಟಂ?

- ರಫೇಲ್‌ಗೆ ಎಕ್ಸ್‌-ಗಾರ್ಡ್‌ ಒಂದು ಅತ್ಯಾಧುನಿಕ ಎಐ ಆಧಾರಿತ ಪೈಬರ್‌ ಆಪ್ಟಿಕ್‌ ಬಾಲದ ರೀತಿಯ ವ್ಯವಸ್ಥೆ

- ಈ ಬಾಲಕ್ಕೆ ಡಿಕಾಯ್‌ ಸಿಸ್ಟಂ ಎಂದು ಹೆಸರು. ರಫೇಲ್‌ ಹಿಂದೆ ಆಪ್ಟಿಕ್‌ ವೈರ್‌ ಮೂಲಕ ಚಾಚಿಕೊಂಡಿರುತ್ತೆ

- ಇದು ನೈಜ ಯುದ್ಧವಿಮಾನ ರೀತಿ ವರ್ತಿಸಿ ಶತ್ರುಗಳ ವಾಯುರಕ್ಷಣೆ ವ್ಯವಸ್ಥೆ, ಕ್ಷಿಪಣಿಯ ದಿಕ್ಕು ತಪ್ಪಿಸುತ್ತೆ

- ಡಿಕಾಯ್‌ ಸಿಸ್ಟಂ (ಬಾಲ) ಮೇಲೆ ದಾಳಿ ಮಾಡಿ ರಫೇಲ್‌ ಮೇಲೇ ದಾಳಿ ಮಾಡಿದೆವೆಂದು ಬೇಸ್ತುಬಿದ್ದ ಪಾಕ್‌

---

ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಭಾರತದ ಹಲವು ರಫೇಲ್ ಯುದ್ಧವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳುತ್ತಿರುವುದು ಕೇವಲ ಬಡಾಯಿ ಅಷ್ಟೆ. ಅಸಲಿಗೆ ಪಾಕಿಸ್ತಾನವು ಒಂದೇ ಒಂದು ರಫೇಲ್‌ ಯುದ್ಧವಿಮಾನವನ್ನೂ ಹೊಡೆದುರುಳಿಸಿಲ್ಲ. ಪಾಕ್‌ ಕ್ಷಿಪಣಿಗಳು ಹೊಡೆದುರುಳಿಸಿದ್ದು ರಫೇಲ್‌ನ ಎಐ ಆಧಾರಿತ ಎಕ್ಸ್‌-ಗಾರ್ಡ್‌ (ಡಿಕಾಯ್‌ ಸಿಸ್ಟಂ) ಎಂಬ ವಿಮಾನದ ಬಾಲವನ್ನು. ರಫೇಲ್‌ ಎಲೆಕ್ಟ್ರಾನಿಕ್‌ ವಾರ್‌ಫೇರ್‌ನ ಈ ತಂತ್ರದ ಅರಿವಿಲ್ಲದೆ ಪಾಕಿಸ್ತಾನದ ಸ್ಥಿತಿ ಇದೀಗ ಇಂಗು ತಿಂದ ಮಂಗನಂತಾಗಿದೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನಕ್ಕೆ ರಫೇಲ್‌ ಯುದ್ಧವಿಮಾನವು ಚಳ್ಳೆಹಣ್ಣು ತಿನ್ನಿಸಿರುವ ವಿಚಾರವನ್ನು ಇದೀಗ ಡಸಾಲ್ಟ್‌ ಏವಿಯೇಷನ್‌ನ ಮುಖ್ಯಸ್ಥ ಮತ್ತು ಸಿಇಒ ಎರಿಕ್‌ ಟ್ರಾಪ್ಪಿಯರ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಹೆಸರಾಂತ ಜನೇಸ್‌ ಡಿಫೆನ್ಸ್‌ ವೀಕ್ಲಿ ವರದಿಯಲ್ಲೂ ಹಲವು ರಫೇಲ್‌ ಯುದ್ಧವಿಮಾನಗಳನ್ನು ಹೊಡೆದುಹಾಕಲಾಗಿದೆ ಎಂಬ ಪಾಕ್‌ ವಾದ ಈ ಎಕ್ಸ್‌-ಗಾರ್ಡ್‌ ಮೇಲಿನ ದಾಳಿಯನ್ನು ಆಧರಿಸಿದೆಯೇ ಹೊರತು ಬೇರೇನೂ ಅಲ್ಲ ಎಂದು ಹೇಳಲಾಗಿದೆ.

ಏನಿದು ರಫೇಲ್‌ನ ಎಕ್ಸ್‌ಗಾರ್ಡ್‌?:

ರಫೇಲ್‌ ಯುದ್ಧವಿಮಾನದ ಎಕ್ಸ್‌-ಗಾರ್ಡ್‌ ಒಂದು ಅತ್ಯಾಧುನಿಕ ಎಐ ಆಧಾರಿತ ಪೈಬರ್‌ ಆಪ್ಟಿಕ್‌ ಬಾಲದ ರೀತಿಯ ವ್ಯವಸ್ಥೆ (ಡಿಕಾಯ್‌ ಸಿಸ್ಟಂ)ಯಾಗಿದ್ದು, ಇದು ಯುದ್ಧವಿಮಾನದ ಎಲೆಕ್ಟ್ರಾನಿಕ್‌ ಯುದ್ಧತಂತ್ರದ ಭಾಗವಾಗಿದೆ. ಎಕ್ಸ್‌-ಗಾರ್ಡ್ ಅನ್ನು ಮೋನೋ ಪಲ್ಸ್‌ ಮತ್ತು ಲೋಬ್‌-ಆನ್‌-ರಿಸೀವ್‌-ಓನ್ಲೀ(ಲಾರ್ಡ್‌) ಟ್ರ್ಯಾಕಿಂಗ್‌ ಸಿಸ್ಟಂ ಸೇರಿ ಶತ್ರುಗಳ ಅತ್ಯಾಧುನಿಕ ರೆಡಾರ್‌ ಮತ್ತು ಕ್ಷಿಪಣಿಗಳನ್ನು ವಂಚಿಸಲೆಂದೇ ಅಭಿವೃದ್ಧಿಪಡಿಸಲಾಗಿದೆ.

ಎಕ್ಸ್‌ಗಾರ್ಡ್‌ ಒಂದು ಕಡಿಮೆ ತೂಕದ, ಮರುಬಳಕೆಯ ಮತ್ತು ಯಾವಾಗ ಬೇಕಿದ್ದರೂ ಹಿಂತೆಗೆದುಕೊಳ್ಳಬಹುದಾದ ಬಾಲದ ರೀತಿಯ ವ್ಯವಸ್ಥೆಯಾಗಿದೆ. ಸುಮಾರು 30 ಕೆ.ಜಿ. ತೂಕದ, ಎಐನಿಂದ ನಿರ್ವಹಿಸಲ್ಪಡುವ ಈ ವ್ಯವಸ್ಥೆಯು 100 ಮೀಟರ್‌ ಉದ್ದದ ಫೈಬರ್‌ ಆಪ್ಟಿಕ್‌ ವಯರ್ ಮೂಲಕ ವಿಮಾನದ ಹಿಂದೆ ಚಾಚಿಕೊಂಡಿರುತ್ತದೆ. ಇದು 500 ವಾಟ್‌ನ 360 ಡಿಗ್ರಿ ಜಾಮಿಂಗ್‌ ಸಿಗ್ನಲ್‌ ಅನ್ನು ಸೃಷ್ಟಿಸುತ್ತದೆ.

ಇದು ನೈಜವಾದ ಯುದ್ಧವಿಮಾನದ ರೀತಿ ವರ್ತಿಸಿ ಶತ್ರುಗಳ ವಾಯುರಕ್ಷಣೆ ಮತ್ತು ಕ್ಷಿಪಣಿ ನಿರ್ದೇಶಿತ ವ್ಯವಸ್ಥೆಗೆ ಚಳ್ಳೆಹಣ್ಣು ತಿನ್ನಿಸುತ್ತದೆ. ಈ ಡಿಕಾಯ್‌ ವ್ಯವಸ್ಥೆಯು ಮಾನವನ ಕಣ್ಣಿಗೆ ಕಾಣುವುದಿಲ್ಲ. ಆದರೆ, ಶತ್ರುಗಳ ಕ್ಷಿಪಣಿಗಳು ದಾಳಿ ನಡೆಸುವ ಅನಿವಾರ್ಯತೆ ಸೃಷ್ಟಿಸುತ್ತದೆ.

ಆಪರೇಷನ್‌ ಸಿಂದೂರ ಕಾರ್ಯಾಚರಣೆ ವೇಳೆ ಈ ಡಿಕಾಯ್‌ ಸಿಸ್ಟಂ ಪಾಕಿಸ್ತಾನದ ಚೀನಾ ನಿರ್ಮಿತ ಪಿಎಲ್‌-15ಇ ಆಕಾಶದಿಂದ ಆಕಾಶಕ್ಕೆ ಹಾರಿಸುವ ಮತ್ತು ಜೆ-10ಸಿ ಯುದ್ಧವಿಮಾನಗಳನ್ನು ವಂಚಿಸಿತು. ಈ ಮೂಲಕ ಪಾಕಿಸ್ತಾನಕ್ಕೆ ತಾನು ರಫೇಲ್ ಯುದ್ಧವಿಮಾನ ಹೊಡೆದುರುಳಿಸಿದ ನಂಬಿಕೆ ಮೂಡುವಂತೆ ಮಾಡಿತು ಎಂದು ಅಮೆರಿಕ ಏರ್‌ಫೋರ್ಸ್‌ನ ಮಾಜಿ ಪೈಲಟ್‌ ರಿಯಾನ್ ಬೊಡ್‌ಹೈಮರ್‌ ಅವರು ಐಡಿಆರ್‌ಡಬ್ಲ್ಯು.ಒಆರ್‌ಜಿ ವೆಟ್‌ಸೈಟ್‌ಗೆ ತಿಳಿಸಿದ್ದಾರೆ.

2 ಸೆಕೆಂಡ್‌ ಸಾಕು:

ಈ ರೀತಿಯ ಡಿಕಾಯ್‌ ಸಿಸ್ಟಂ ಅನ್ನು ಕೇವಲ ಎರಡೇ ಸೆಕೆಂಡುಗಳಲ್ಲಿ ನಿಯೋಜಿಸಬಹುದು ಮತ್ತು ಅದನ್ನು ಮರುಬಳಕೆಗೆ ಹಿಂತೆಗೆದುಕೊಳ್ಳಬಹುದು. ಶತ್ರುಗಳ ಕ್ಷಿಪಣಿಗಳು ವಿಮಾನದ ಬದಲು ಈ ಡಿಕಾಯ್‌ ಸಿಸ್ಟಂ ಮೇಲೆ ಹೊಡೆಯುವುದರಿಂದ ಯುದ್ಧವಿಮಾನವು ಯಾವುದೇ ತೊಂದರೆಯಿಲ್ಲದೆ ಪಾರಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!