ನವದೆಹಲಿ: ಕಳೆದ ಲೋಕಸಭಾ ಚುನಾವಣೆಯ ವೇಳೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ಮಹದೇವಪುರದಲ್ಲಿ ಮತಗಳ್ಳತನ ನಡೆದಿದೆ. ಈ ಕುರಿತು ಶೀಘ್ರವೇ ನಾನು ಆಟಂ ಬಾಂಬ್ ಸ್ಫೋಟಿಸಲಿದ್ದೇನೆ ಎಂದು ಇತ್ತೀಚೆಗೆ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಆರೋಪಗಳಿಗೆ ಪೂರಕವಾದ ಅಂಕಿ ಅಂಶಗಳನ್ನು ಗುರುವಾರ ಬಹಿರಂಗಪಡಿಸಿದ್ದಾರೆ.
‘ಮಹದೇವಪುರ ಕ್ಷೇತ್ರದಲ್ಲಿ 5 ಮಾದರಿಯ ಅಕ್ರಮಗಳ ಮೂಲಕ 1 ಲಕ್ಷ ಮತಗಳ್ಳತನ ನಡೆದಿದೆ. ಚುನಾವಣಾ ಫಲಿತಾಂಶ ತಿರುಚಲು ಚುನಾವಣಾ ಆಯೋಗವೂ ಬಿಜೆಪಿ ಜತೆ ಸೇರಿಕೊಂಡಿದೆ. ಇದು ಸಂವಿಧಾನದ ವಿರುದ್ಧದ ಅಪರಾಧ’ ಎಂದು ರಾಹಲ್ ಗಂಭೀರ ಆರೋಪ ಮಾಡಿದ್ದಾರೆ. ನಾವು ಬಹುವಾಗಿ ಪ್ರೀತಿಸುವ ಪ್ರಜಾಪ್ರಭುತ್ವವೇ ಇದೀಗ ಅಸ್ತಿತ್ವದಲ್ಲೇ ಇಲ್ಲದ ಕಾರಣ ಈ ಪ್ರಕರಣದಲ್ಲಿ ನ್ಯಾಯಾಂಗದ ಮಧ್ಯಪ್ರವೇಶದ ಅಗತ್ಯವಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಆಗ್ರಹಿಸಿದ್ದಾರೆ.
ಈ ನಡುವೆ ರಾಹುಲ್ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ, ‘ರಾಹುಲ್ ಇಂತಹ ಹೇಳಿಕೆಗಳಿಂದ ಮತದಾರರನ್ನು ಅವಮಾನಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದೆ.
ಮಹದೇವಪುರದಲ್ಲಿ ಮತಚೋರಿ: ದೆಹಲಿಯಲ್ಲಿ ಎಐಸಿಸಿ ಇಂದಿರಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ನಮ್ಮ ಆಂತರಿಕ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ನಾವು 16 ಲೋಕಸಭಾ ಕ್ಷೇತ್ರ ಗೆಲ್ಲಬೇಕಿತ್ತು. ಆದರೆ ಗೆದ್ದಿದ್ದು 8ರಲ್ಲಿ ಮಾತ್ರ. ಹೀಗಾಗಿ ಅನಿರೀಕ್ಷಿತವಾಗಿ ಸೋತ 7 ಕ್ಷೇತ್ರಗಳ ಬಗ್ಗೆ ನಾವು ಗಮನ ಹರಿಸಿ, ಈ ಪೈಕಿ ಮಹಾದೇವಪುರ ವಿಧಾನಸಭಾ ಕ್ಷೇತ್ರದ ಅಂಕಿ ಅಂಶಗಳನ್ನು ಪರಿಶೀ ಲಿಸಲು ನಿರ್ಧರಿಸಿದೆವು. ಪರಿಶೀಲನೆ ವೇಳೆ ಅಲ್ಲಿ 5 ಮಾದರಿಯ ಅಕ್ರಮಗಳ ಮೂಲಕ 1 ಲಕ್ಷಕ್ಕೂ ಹೆಚ್ಚು ಮತಗಳ್ಳತನ ನಡೆದಿರುವುದು ಕಂಡುಬಂತು’ ಎಂದು ರಾಹುಲ್ ಆರೋಪಿಸಿದರು. ಜೊತೆಗೆ, ಇಂತಹ ಅಕ್ರಮ ದೇಶಾದ್ಯಂತ ನಡೆಯುತ್ತಿರುವ ಶಂಕೆ ವ್ಯಕ್ತಪಡಿಸಿದ ಅವರು, ‘ಇದು ದೇಶದ ಸಂವಿಧಾನ ಮತ್ತು ಧ್ವಜಕ್ಕೆ ಮಾಡಿದ ಅವಮಾನ’ ಎಂದರು.
5 ಮಾದರಿ ಅಕ್ರಮ ಏನೇನು?: ನಕಲಿ ಮತದಾರರು, ಡೂಪ್ಲಿಕೇಟ್ ಮತದಾರರು, ಸಾಮೂಹಿಕ ಮತದಾರರು, ತಪ್ಪಾದ ವಿಳಾಸದಲ್ಲಿದ್ದ ಮತದಾರರು ಮತ್ತು ಫಾರ್ಮ್ 6 ದುರ್ಬಳಕೆ.ರಾಹುಲ್ ಆರೋಪ ಏನು?ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ 6,26,208 ಮತ ಪಡೆದರೆ, ಬಿಜೆಪಿ 6,58,915 ಮತ ಪಡೆದಿತ್ತು. ಇಲ್ಲಿ ಬಿಜೆಪಿ 32,707 ಮತಗಳ ಅಂತರದಿಂದ ಗೆದ್ದಿತ್ತು. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚು ಮತಪಡೆದಿದ್ದರೆ, ಮಹದೇವಪುರದಲ್ಲಿ ಮಾತ್ರ ಬಿಜೆಪಿ ಮುನ್ನಡೆ ಪಡೆದಿತ್ತು. ಇಲ್ಲಿ ಕಾಂಗ್ರೆಸ್ ಪರ 1.15586 ಮತ ಚಲಾವಣೆಯಾಗಿದ್ದರೆ, ಬಿಜೆಪಿಗೆ 2,29,632 ಮತ ಬಿದ್ದಿತ್ತು. ಅಂದರೆ ಬಿಜೆಪಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತ 1,14,046 ಮತಗಳನ್ನು ಹೆಚ್ಚುವರಿಯಾಗಿ ಪಡೆದಿತ್ತು, ಈ ಪೈಕಿ 1,00,250 ಮತಗಳು ಅಕ್ರಮ ಎಂದು ರಾಹುಲ್ ಆರೋಪ.
ಅಕ್ರಮ ಹೇಗೆ? ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 11,965 ನಕಲಿ ಮತದಾರರು, ನಕಲಿ ಮತ್ತು ಅಮಾನ್ಯ ವಿಳಾಸಗಳನ್ನು ಹೊಂದಿರುವ 40,009 ಜನ, ಒಂದೇ ವಿಳಾಸವುಳ್ಳ 10,452 ಮತದಾರರು, ಅಮಾನ್ಯ ಫೋಟೋಗಳನ್ನು ಹೊಂದಿರುವ 4,132 ಮಂದಿ ಮತ್ತು ಹೊಸ ಮತದಾರರ ಫಾರ್ಮ್ 6ನ್ನು ದುರುಪಯೋಗಪಡಿಸಿಕೊಂಡ 33,692 ಮತದಾರರು ಪತ್ತೆಯಾಗಿದ್ದಾರೆ’ ಎಂದು ಆರೋಪಿಸಿದರು.
ಆಯೋಗದ ವಿರುದ್ಧ ಆಪಾದನೆ: ಚುನಾವಣಾ ಆಯೋಗದ ವಿರುದ್ಧವೂ ಗಂಭೀರ ಆರೋಪ ಮಾಡಿದ ರಾಹುಲ್, ‘ಕಳೆದ 6 ತಿಂಗಳಿಂದ ಕಾಂಗ್ರೆಸ್‌ನ ತಂಡ ಮತಗಳ್ಳತನದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲೂ ಇದೇ ರೀತಿ ಅಕ್ರಮ ಆಗಿದೆ. ಚುನಾವಣಾ ಆಯೋಗವು ಕಳೆದ 10-15 ವರ್ಷಗಳ ದತ್ತಾಂಶ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ನಮಗೆ ನೀಡದಿದ್ದರೆ, ಅವರು ಅಪರಾಧದಲ್ಲಿ ಭಾಗಿಯಾಗಿದ್ದಾರೆಂದು ಅರ್ಥ. ನಾವು ಅಧಿಕಾರಕ್ಕೆ ಬಂದ ಮೇಲೆ ಚುನಾವಣಾ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ’ ಎಂದರು.
ಮೋದಿ ವಿರುದ್ಧ ಟೀಕೆ:‘ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಪ ಬಹುಮತದಿಂದ ಪ್ರಧಾನಿಯಾಗಿರುವ ಕಾರಣ, ಅವರಿಗೆ ಅಧಿಕಾರದಲ್ಲಿ ಉಳಿಯಲು ಕೇವಲ 25 ಸ್ಥಾನಗಳನ್ನು ಕದಿಯುವ ಅಗತ್ಯವಿತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 33,000ಕ್ಕಿಂತ ಕಡಿಮೆ ಮತಗಳೊಂದಿಗೆ 25 ಸ್ಥಾನಗಳನ್ನು ಗೆದ್ದಿತು. ಆಡಳಿತ ವಿರೋಧಿ ಅಲೆಯ ಪ್ರಭಾವ ಎಲ್ಲಾ ಸರ್ಕಾರಗಳನ್ನು ತಟ್ಟುತ್ತದೆ. ಆದರೆ ಈವರೆಗೆ ಬಿಜೆಪಿಯೊಂದೇ ಎಂದೂ ಇದನ್ನು ಅನುಭವಿಸಿಲ್ಲ’ ಎಂದೂ ರಾಹುಲ್ ಆಪಾದನೆ ಮಾಡಿದ್ದಾರೆ.
- 11695 ನಕಲಿ ಮತದಾರರ ಸೇರ್ಪಡೆ । ನಕಲಿ ವಿಳಾಸ ಇರುವ 40,009 ಜನಕ್ಕೆ ಮತದಾನ ಹಕ್ಕು
- ಒಂದೇ ವಿಳಾಸವುಳ್ಳ 10452 ಜನ, ಅಮಾನ್ಯ ಫೋಟೋ ಇದ್ದ 4132 ಜನರು ಮತದಾರ ಪಟ್ಟಿಗೆ
- ಫಾರಂ 6 ಅಡಿ ಜೀವನದಲ್ಲೇ ಮೊದ ಸಲ ವೃದ್ಧರಿಂದ ಮತ । ಬಿಜೆಪಿ ಜತೆ ಸೇರಿ ಆಯೋಗ ಅಕ್ರಮ
- ಬಿಜೆಪಿ ಪಡೆದ ಹೆಚ್ಚುವರಿ 1.14 ಲಕ್ಷ ಮತದಲ್ಲಿ 1 ಲಕ್ಷ ಮತಗಳು ಅಕ್ರಮ: ರಾಹುಲ್ ಆರೋಪ