ರೈಲಿನ ಲೋಕೋ ಪೈಲಟ್‌ ಹಾಗೂ ಗಾರ್ಡ್‌ಗಳಿಗೆ ಭಾರದ ಟ್ರಂಕ್‌ನಿಂದ ಮುಕ್ತಿ! ಇನ್ಮುಂದೆ ಟ್ರಾಲಿ ಬ್ಯಾಗ್‌

KannadaprabhaNewsNetwork |  
Published : Jul 26, 2024, 01:35 AM ISTUpdated : Jul 26, 2024, 04:52 AM IST
ಟ್ರಂಕ್ | Kannada Prabha

ಸಾರಾಂಶ

ರೈಲಿನ ಲೋಕೋ ಪೈಲಟ್‌ (ಚಾಲಕರು) ಹಾಗೂ ಗಾರ್ಡ್‌ಗಳಿಗೆ ಇನ್ನುಮುಂದೆ ಕಬ್ಬಿಣದ ಟ್ರಂಕ್‌ಗಳ ಬದಲು ಕೊಂಡೊಯ್ಯಲು ಸುಲಭವಾಗುವ ಟ್ರಾಲಿ ಬ್ಯಾಗ್‌ಗಳನ್ನು ಕೊಡಲುಸೂಚಿಸಲಾಗಿದೆ.

ನವದೆಹಲಿ: ರೈಲಿನ ಲೋಕೋ ಪೈಲಟ್‌ (ಚಾಲಕರು) ಹಾಗೂ ಗಾರ್ಡ್‌ಗಳಿಗೆ ಇನ್ನುಮುಂದೆ ಕಬ್ಬಿಣದ ಟ್ರಂಕ್‌ಗಳ ಬದಲು ಕೊಂಡೊಯ್ಯಲು ಸುಲಭವಾಗುವ ಟ್ರಾಲಿ ಬ್ಯಾಗ್‌ಗಳನ್ನು ಕೊಡಲುಸೂಚಿಸಲಾಗಿದೆ.

ರೈಲ್ವೆ ಮಂಡಳಿ ಇದಕ್ಕೆ ಸಂಬಂಧಿಸಿದ ಪತ್ರವನ್ನು ಎಲ್ಲಾ ವಲಯಗಳಿಗೆ ಜು.19ರಂದು ಕಳುಹಿಸಿದೆ. ಇದರ ಪ್ರಕಾರ ರೈಲು ಚಾಲಕರು ಮತ್ತು ಗಾರ್ಡ್‌ಗಳಿಗೆ ರೈಲ್ವೆ ಉಪಕರಣಗಳು ಮತ್ತು ತಮ್ಮ ವೈಯಕ್ತಿಕ ವಸ್ತುಗಳನ್ನು ಇರಿಸಿಕೊಳ್ಳಲು ಕಬ್ಬಿಣ ಟ್ರಂಕ್‌ ಬದಲು ಟ್ರಾಲಿ ಬ್ಯಾಗ್‌ಗಳನ್ನು ಒದಗಿಸಬೇಕು. ಅವುಗಳನ್ನು ಖುದ್ದಾಗಿ ಕೊಡುವ ಅಥವಅ ಹಣ ನೀಡಿ ಅವರಿಗೇ ಖರೀದಿಸಲು ಸೂಚಿಸುವ ನಿರ್ಧಾರವನ್ನು ವಲಯಗಳಿಗೆ ಬಿಡಲಾಗಿದೆ. ಪ್ರತಿ 3 ವರ್ಷಕ್ಕೆ 5000 ರು. ಭತ್ಯೆಯನ್ನು ನಿಗದಿಪಡಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಅನೇಕ ವರ್ಷಗಳಿಂದ ವಿಫಲ ಪ್ರಯತ್ನಗಳು ನಡೆದಿದ್ದವು.

ಚಿನ್ನದ ಬೆಲೆ ಮತ್ತೆ 1000 ರು. ಇಳಿಕೆ: 3 ದಿನದಲ್ಲಿ 5000 ರು. ಕುಸಿತ

ನವದೆಹಲಿ: ಚಿನ್ನ-ಬೆಳ್ಳಿ ಮೇಲಿನ ಸುಂಕದ ದರ ಕಡಿತ ಮಾಡುವ ಕೇಂದ್ರ ಬಜೆಟ್ ಘೋಷಣೆ ಬೆನ್ನಲ್ಲೇ ಮೂರನೇ ದಿನವೂ ಅವುಗಳ ಬೆಲೆ ಇಳಿಕೆಯಾಗಿದ್ದು, ಒಟ್ಟಾರೆ 3 ದಿನದಲ್ಲಿ 5 ಸಾವಿರ ರು.ನಷ್ಟು ಕುಸಿದಿದೆ. ಈ ಪೈಕಿ ಗುರುವಾರ ಒಂದೇ ದಿನ ಚಿನ್ನದ ಬೆಲೆ 1000 ರು.ನಷ್ಟು ಹಾಗೂ ಬೆಳ್ಳಿ ಬೆಲೆ 3700 ರು.ನಷ್ಟು ಇಳಿದಿದೆ.ಬುಧವಾರ ದೆಹಲಿಯಲ್ಲಿ 71,650 ರು ಇದ್ದ 10 ಗ್ರಾಂ ಚಿನ್ನದ ಬೆಲೆ ಗುರುವಾರ 1,000 ರು. ಇಳಿಕೆಯಾಗುವ ಮೂಲಕ 70,650 ರು. ಆಗಿದೆ. ಮುಂಬೈನಲ್ಲಿ 70,860 ರು. ಇದ್ದ ಚಿನ್ನದ ಬೆಲೆ 68,227 ರು. ಆಗಿದೆ. ಇದೇ ವೇಳೆ, ಬೆಂಗಳೂರಿನಲ್ಲಿ 10 ಗ್ರಾಂಗೆ 66,050 ರು. ಇದ್ದ ಚಿನ್ನದ ದರ ಗುರುವಾರ 65120 ರು.ಗೆ ಇಳಿದಿದ್ದು ಒಟ್ಟು 950 ರು. ಇಳಿಕೆ ಆಗಿದೆ. ಬೆಳ್ಳಿ ಬೆಲೆ 1 ಕೇಜಿಗೆ 3700 ರು. ಇಳಿದು 83,600 ರು.ಗೆ ಸ್ಥಿರವಾಗಿದೆ.

ರಾಜಸ್ಥಾನದಲ್ಲಿ ‘ಬಿಡಾಡಿ ದನ’ ಪದ ನಿಷಿದ್ಧ

ಜೈಪುರ: ‘ಇನ್ನುಮುಂದೆ ಬೀದಿ ದನ ಅಥವಾ ಬೀದಿ ಹಸುಗಳ ಬಗ್ಗೆ ಮಾತನಾಡುವಾಗ ಅವುಗಳನ್ನು ಬಿಡಾಡಿ ದನ ಅಥವಾ ಬಿಡಾಡಿ ಹಸು ಎನ್ನುವ ಬದಲು ನಿರಾಶ್ರಿತ ಹಸು/ದನ ಎನ್ನಬೇಕು’ ಎಂದು ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ.

ವಿಧಾನಸಭೆಯಲ್ಲಿ ಮಾತನಾಡಿದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಜೋರಾರಾಮ್ ಕುಮಾವತ್ ಈ ಘೋಷಣೆ ಮಾಡಿ, ಗೋವುಗಳ ಬಗ್ಗೆ ಗೌರವಪೂರ್ವಕ ಪದ ಬಳಸಬೇಕು ಎಂದು ಕರೆ ನೀಡಿದರು.

‘ಪ್ರಾಣಿ ಸಂಪತ್ತನ್ನು ಅಭಿವೃದ್ಧಿಪಡಿಸಿ ಜಾನುವಾರು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಅವುಗಳನ್ನು ಸಾಕುವವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಸರ್ಕಾರ ಬದ್ಧವಾಗಿದೆ. ಹಸು ಮತ್ತು ಎತ್ತುಗಳ ಸಂರಕ್ಷಣೆಯತ್ತ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ’ ಎಂದರು.ಅಂತೆಯೇ, ಮುಖ್ಯಮಂತ್ರಿ ಮಂಗಳ ಪಶು ಬಿಮಾ ಯೋಜನೆಯಡಿ ಅನ್ಯ ಪ್ರಾಣಿಗಳನ್ನೂ ಸೇರಿಸಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು. ಧ್ವನಿ ಮತದ ಮೂಲಕ ವಿಧಾನಸಭೆಯಲ್ಲಿ ಬೇಡಿಕೆಗಳಿಗೆ ಅನುಮೋದನೆ ನಿಡಲಾಯಿತು.

ಪಕ್ಷಾಂತರ ನಿಗ್ರಹ ಕಾಯ್ದೆ ಅಡಿ 2 ಜಾರ್ಖಂಡ್‌ ಶಾಸಕರು ಅನರ್ಹ

ರಾಂಚಿ: ಪಕ್ಷಾಂತರ ನಿಗ್ರಹ ಕಾನೂನಿನಡಿಯಲ್ಲಿ ಜಾರ್ಖಂಡ್‌ನ ಇಬ್ಬರು ಶಾಸಕರನ್ನು ಸ್ಪೀಕರ್‌ ಅನರ್ಹ ಮಾಡಿದ್ದಾರೆ. ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಶಾಸಕ ಲಾಬಿನ್ ಹೆಂಬ್ರೋಮ್ ಮತ್ತು ಕಾಂಗ್ರೆಸ್‌ ಶಾಸಕ ಜಯಪ್ರಕಾಶ್‌ ಪಟೇಲ್ ಅನರ್ಹತೆಗೆ ಒಳಗಾದವರು.ಜೆಎಂಎಂ ಶಾಸಕ ಹೆಂಬ್ರೋಮ್ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಸಿಡಿದೆದ್ದು, ಪಕ್ಷೇತರವಾಗಿ ರಾಜಮಹಲ್‌ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಬಿಜೆಪಿಯಲ್ಲಿದ್ದ ಪಟೇಲ್ ಲೋಕಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್‌ ಸೇರಿ ಹಜರೀಬಾಗ್‌ನಿಂದ ಸ್ಪರ್ಧಿಸಿ ಸೋತಿಸಿದ್ದರು. ಈ ಇಬ್ಬರು ಶಾಸಕರ ವಿರುದ್ಧ ಪಕ್ಷಾಂತರ ವಿರೋಧಿ ಕಾನೂನಿನಡಿ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮತ್ತು ಜೆಎಂಎಂ ದೂರು ನೀಡಿದ್ದವು.

ಎನ್‌ಸಿಸಿ ತರಬೇತಿ ಹೆಸರಲ್ಲಿ ಆಂಧ್ರ ಕಾಲೇಜಲ್ಲಿ ರ್‍ಯಾಗಿಂಗ್‌: ಕಿರಿಯರಿಗೆ ದೊಣ್ಣೆ ಏಟು!

ನರಸರಾವ್‌ಪೇಟ್‌ (ಆಂ.ಪ್ರ): ಇಲ್ಲಿನ ಖಾಸಗಿ ಕಾಲೇಜಿನಲ್ಲಿ ಕೆಲ ಕಿರಿಯ ವಿದ್ಯಾರ್ಥಿಗಳು, ಕಿರಿಯ ವಿದ್ಯಾರ್ಥಿಗಳ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಜಾಲತಾಣದಲ್ಲಿ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಎನ್‌ಸಿಸಿ ತರಬೇತಿ ನೆಪದಲ್ಲಿ ವಿದ್ಯಾರ್ಥಿಗಳನ್ನು ವಸತಿಗೃಹಕ್ಕೆ ಕರೆಸಿಕೊಳ್ಳಲಾಗಿತ್ತು. ಅವರನ್ನು ಒಬ್ಬೊಬ್ಬರಾಗಿ ಒಳಗೆಕಳುಹಿಸಿ ಥಳಿಸುತ್ತ ಹಿರಿಯ ವಿದ್ಯಾರ್ಥಿಗಳು ಆನಂದಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ ಶ್ರೀ ಸುಬ್ಬರಾಯ ಮತ್ತು ನಾರಾಯಣ ಕಾಲೇಜಿನಲ್ಲಿ ಫೆ.2ರಂದು ನಡೆದ ಘಟನೆಯ ಕುರಿತು ತನಿಖೆ ನಡೆಸುವುದಾಗಿ ಹೇಳಿರುವ ಪೊಲೀಸರು ರ್‍ಯಾಗಿಂಗ್ ನಿಷೇಧ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !