ಮುಂಬೈ: ರಾಜಕೀಯ ಭಿನ್ನಮತದಿಂದ ದೂರಾಗಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಹಾಗೂ ಅವರ ಸೋದರ ಸಂಬಂಧಿಯಾದ ಶಿವಸೇನೆ ನಾಯಕ ಉದ್ಧವ್ ಠಾಕ್ರೆ, ಸರ್ಕಾರಿ ಅಧಿಕಾರಿಯೊಬ್ಬರ ಮಗನ ಮದುವೆ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದಾರೆ. ಇದರಿಂದ ಮತ್ತೆ ಇಬ್ಬರೂ ಒಂದಾಗಲಿದ್ದಾರೆ ಎಂಬ ಗುಲ್ಲು ಹರಡಿದೆ.
2005ರಲ್ಲಿ ಅವಿಭಜಿತ ಶಿವಸೇನೆಯನ್ನು ತೊರೆದ ರಾಜ್ ಠಾಕ್ರೆ, ಒಂದೇ ವರ್ಷದಲ್ಲಿ ಹೊಸ ಪಕ್ಷ ಕಟ್ಟಿಕೊಂಡಿದ್ದರು. ಈಗ ಇಬ್ಬರೂ ಭಿನ್ನಾಭಿಪ್ರಾಯ ಮರೆತು, ಬೃಹನ್‌ಮುಂಬೈ ಮಹಾನಗರ ಪಾಲಿಕೆ ಚುನಾವನೆಯಲ್ಲಿ ಒಂದಾಗಿ ಸ್ಪರ್ಧಿಸಲು ಇಚ್ಛಿಸಿದ್ದಾರೆ ಎಂದು ವಿಮರ್ಶಿಸಲಾಗುತ್ತಿದೆ.
ಈ ಊಹೆಗೆ ಪುಷ್ಟಿ ಕೊಡುವಂತೆ ಕಳೆದೆರಡು ತಿಂಗಳಲ್ಲಿ ಇವರಿಬ್ಬರು 3ನೇ ಬಾರಿ ಭೇಟಿಯಾಗಿದ್ದಾರೆ.
ಸೆನ್ಸೆಕ್ಸ್ 75 ಸಾವಿರಕ್ಕಿಂತ ಕೆಳಕ್ಕೆ: 4 ಲಕ್ಷ ಕೋಟಿ ರು. ನಷ್ಟ
ಮುಂಬೈ: ಬಾಂಬೆ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ 5 ನೇ ದಿನವೂ ಕುಸಿತ ಕಂಡಿದ್ದು, ಸೆನ್ಸೆಕ್ಸ್ ಸೋಮವಾರ 856.6 ಅಂಕ ಕುಸಿತ ಕಂಡು 75 ಸಾವಿರಕ್ಕಿಂತ ಕೆಳಗಿಳಿದರೆ, ನಿಫ್ಟಿ 242.55 ಅಂಕ ಕುಸಿತ ಕಂಡಿದೆ. ಇದರಿಂದಾಗಿ ಹೂಡಿಕೆದಾರರಿಗೆ 4.22 ಲಕ್ಷ ಕೋಟಿ ರು. ನಷ್ಟವಾಗಿದೆ.ಸೆನ್ಸೆಕ್ಸ್ 856.5 ಅಂಕ ಕುಸಿತ ಕಂಡು 74,454.4 ರಲ್ಲಿ ಮುಕ್ತಾಯವಾಗಿದ್ದರೆ, ನಿಫ್ಟಿ 242.55 ಅಂಕ ಕುಸಿತದೊಂದಿಗೆ 22, 553. 3ರಲ್ಲಿ ಅಂತ್ಯಗೊಂಡಿದೆ. ಅಮೆರಿಕ ಮಾರುಕಟ್ಟೆಯ ವಿದ್ಯಮಾನಗಳು, ಅಮೆರಿಕದ ಸುಂಕ ನೀತಿಯ ಆತಂಕ, ವಿದೇಶಿ ನಿಧಿಯ ಹೊರ ಹರಿವು ಕುಸಿತ- ಇತ್ಯಾದಿ ಕಾರಣದಿಂದ ಪೇಟೆ ಪತನಗೊಂಡಿತು ಎಂದು ವಿಶ್ಲೇಷಿಸಲಾಗಿದೆ.
ಹಿಂದೂ ಧರ್ಮ ಅವಹೇಳನ: ಮುನಾವರ್ ಫಾರೂಖಿ ವಿರುದ್ಧ ದೂರು
ಮುಂಬೈ: ಯುಟ್ಯೂಬರ್ ರಣವೀರ್ ಅಲಹಾಬಾದಿಯಾ ವಿವಾದದ ಬೆನ್ನಲ್ಲೇ ಬಿಗ್ ಬಾಸ್ 17 ವಿನ್ನರ್ ಮುನಾವರ್ ಫಾರೂಖಿ ಅವರ ಹಫ್ತಾ ವಸೂಲಿ’ ಒಟಿಟಿ ಶೋ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಕೇಳಿ ಬಂದಿದ್ದು, ಪ್ರಕರಣ ದಾಖಲಾಗಿದೆ.ಸುಪ್ರೀಂ ಕೋರ್ಟ್ ವಕೀಲೆ ಅಮಿತಾ ಸಚ್‌ದೇವ್ ಎನ್ನುವವರು ದೂರು ನೀಡಿ, ‘ಫಾರೂಖಿ ಅವರ ಕಾರ್ಯಕ್ರಮ ಅಶ್ಲೀಲತೆ ಉತ್ತೇಜಿಸುತ್ತದೆ. ಬಹು ಧರ್ಮಗಳನ್ನು ಅವಮಾನಿಸುತ್ತಿದೆ. ಸಾಂಸ್ಕೃತಿಕ ಮೌಲ್ಯ ಉಲ್ಲಂಘಿಸುತ್ತಿದೆ. ಯುವ ಮನಸುಗಳು ಮತ್ತು ಸಮಾಜವನ್ನು ಕಲುಷಿತಗೊಳಿಸುತ್ತದೆ’ ಎಂದಿದ್ದಾರೆ.ಹಿಂದೂ ಜನಜಾಗೃತಿ ಸಮಿತಿ ಕೂಡ ಆಕ್ಷೇಪ ವ್ಯಕ್ತಪಡಿಸಿ, ‘ಕಾರ್ಯಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು. ಈ ಕಾರ್ಯಕ್ರಮ ನೈತಿಕ ಮೌಲ್ಯವನ್ನು ಕೆಡಿಸುತ್ತದೆ . ಸ್ಟ್ರೀಮಿಂಗ್ ವೇದಿಕೆಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು’ ಎಂದಿದೆ.
ಆಪ್‌ನಿಂದ ದಿಲ್ಲಿ ಬೊಕ್ಕಸ ಖಾಲಿ: ಸಿಎಂ ರೇಖಾ ಗುಪ್ತಾ ಕಿಡಿ
ನವದೆಹಲಿ: ಹಿಂದಿನ ಆಪ್ ಸರ್ಕಾರ ದೆಹಲಿ ಬೊಕ್ಕಸವನ್ನು ಬರಿದಾಗಿಸಿದೆ ಎಂದು ಸಿಎಂ ರೇಖಾ ಗುಪ್ತಾ ಆರೋಪಿಸಿದ್ದಾರೆ ಆದರೂ ಮಹಿಳೆಯರಿಗೆ ಮಾಸಿಕ 2500 ರು. ಧನ ಸಹಾಯ ಮಾಡುವ ನಮ್ಮ ಭರವಸೆ ಈಡೇರಿಸುತ್ತೇವೆ ಎಂದಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅಧಿಕಾರಿಗಳೊಂದಿಗೆ ಸೇರಿ ಪ್ರಸ್ತುತ ಸರ್ಕಾರದ ಆರ್ಥಿಕ ಸ್ಥಿತಿಗತಿಯನ್ನು ಪರಿಶೀಲಿಸಿದಾಗ ಸರ್ಕಾರದ ಬೊಕ್ಕಸ ಖಾಲಿ ಆಗಿರುವುದು ನಮ್ಮ ಗಮನಕ್ಕೆ ಬಂತು’ ಎಂದರು.
ಆತಿಶಿ ಧರಣಿ:ಈ ನಡುವೆ ದೆಹಲಿಯ ಮಹಿಳೆಯರಿಗೆ ಮಾಸಿಕ 2,500 ರು. ನೀಡುವ ಭರವಸೆ ಈಡೇರಿಕೆಗೆ ಆಗ್ರಹಿಸಿ ವಿಪಕ್ಷ ನಾಯಕಿ ಆತಿಶಿ ಸಿಎಂ ಕಚೇರಿ ಮುಂದೆ ಸೋಮವಾರ ಪ್ರತಿಭಟಿಸಿದರು.
ಹಿಂದಿ ಪದ್ಯ ಹೇಳದ್ದಕ್ಕೆ ವಿದ್ಯಾರ್ಥಿಗೆ ಹೊಡೆದ ಶಿಕ್ಷಕಿ ಸಸ್ಪೆಂಡ್
ಚೆನ್ನೈ: 3ನೇ ತರಗತಿ ವಿದ್ಯಾರ್ಥಿ ಹಿಂದಿ ಪಂದ್ಯವನ್ನು ಹೇಳಲಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗೆ ತಮಿಳುನಾಡಿನ ಪ್ರತಿಷ್ಠಿತ ಶಾಲೆಯ ಶಿಕ್ಷಕಿ ಹೊಡೆದಿದ್ದು, ಆಕೆಯನ್ನು ಕೆಲಸದಿಂದ ಅಮಾನತು ಮಾಡಿರುವ ಘಟನೆ ನಡೆದಿದೆ.ಫೆ.21ರಂದು ಇಲ್ಲಿನ ಭವನದ ರಾಜಾಜಿ ವಿದ್ಯಾಶ್ರಮ ಶಾಲೆಯಲ್ಲಿ ಘಟನೆ ನಡೆದಿದೆ. ವಿಚಾರ ಬೆಳಕಿಗೆ ಬರುತ್ತಿದ್ದಂತೆ ಶಾಲಾ ಆಡಳಿತ ಮಂಡಳಿಯು ಶಿಕ್ಷಕಿಯ ವಿಚಾರಣೆ ನಡೆಸಿದ್ದು, ಶಾಲಾ ಮಾರ್ಗಸೂಚಿ ವಿರುದ್ಧವಾಗಿ ದೈಹಿಕ ಶಿಕ್ಷೆ ಮತ್ತು ನಿಂದಿಸಿರುವುದರಿಂದ ಕೆಲಸದಿಂದ ಅಮಾನತು ಮಾಡಿದೆ.ತಮಿಳುನಾಡಿನಲ್ಲಿ ಇತ್ತೀಚೆಗೆ ಹಿಂದಿ ಹೇರಿಕೆ ಅಭಿಯಾನ ತೀವ್ರಗೊಂಡಿದ್ದು, ಆ ವೇಳೆಯೇ ಈ ಪ್ರಸಂಗ ನಡೆದಿದೆ.