ಅಯೋಧ್ಯೆ: ಇಲ್ಲಿನ ಪ್ರಸಿದ್ಧ ರಾಮಮಂದಿರದ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯವಾಗಿದ್ದು, ನ.25ಕ್ಕೆ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿದೆ. ಈ ನಡುವೆ, ದೇಗುಲದ ಮೊದಲ ಅಂತಸ್ತಿನ ವಿಹಂಗಮ ಚಿತ್ರಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಬಿಡುಗಡೆ ಮಾಡಿದೆ.
ಮೊದಲ ಮಹಡಿಯಲ್ಲಿ ನೃತ್ಯಮಂಟಪ, ರಂಗಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನಾ ಮಂಟಪ ಎಂಬ 5 ಸಭಾಂಗಣಗಳನ್ನು ರೂಪಿಸಲಾಗಿದೆ. ಇವುಗಳ ಹೃದಯಭಾಗದಲ್ಲಿ ಶ್ರೀರಾಮನ ಅದ್ಧೂರಿ ಆಸ್ಥಾನವನ್ನು ನಿರ್ಮಿಸಲಾಗಿದ್ದು, ರಾಮ, ಸೀತೆ, ಹನುಮಂತ, ಭರತ, ಲಕ್ಷ್ಮಣ, ಶತ್ರುಘ್ನರ ಅಮೃತಶಿಲೆಯ ವಿಗ್ರಹಗಳನ್ನು ಕೆತ್ತಲಾಗಿದೆ. ರಾಮ ಮತ್ತು ಸೀತೆ ಚಿನ್ನಲೇಪಿತ ಸಿಂಹಾಸನದ ಮೇಲೆ ಕುಳಿತಿದ್ದರೆ, ಹನುಮಂತ ಮತ್ತು ಭರತ ಪಾದದ ಬಳಿ ಕುಳಿತಿದ್ದಾರೆ. ಲಕ್ಷ್ಮಣ ಮತ್ತು ಶತ್ರುಘ್ನ ಹಿಂದೆ ವಿಧೇಯರಾಗಿ ನಿಂತಂತೆ ನಿರ್ಮಿಸಲಾಗಿದೆ.
ಇದೊಂದೇ ಮಹಡಿಯಲ್ಲಿ, ಅದ್ಭುತ ಕಲಾವಂತಿಕೆಯಿಂದ ಕೂಡಿದ ಸುಮಾರು 140 ಕಂಬಗಳನ್ನು ಕೆತ್ತಲಾಗಿದೆ. ಇಡೀ ದೇಗುಲದಲ್ಲಿ ಇಂಥ ಒಟ್ಟು 392 ಕಂಬಗಳಿವೆ. ಇವುಗಳ ಮೇಲೆ ರಾಮಾಯಣ ಹಾಗೂ ಹಿಂದೂ ಪುರಾಣಗಳ ಚಿತ್ರಗಳನ್ನು ಕೆತ್ತಲಾಗಿದೆ. ಇಡೀ ಅಂತಸ್ತಿನಲ್ಲಿ ಅಮೂಲ್ಯವಾದ ಶಿಲೆಗಳನ್ನು ಬಳಸಿ ಭಾರತೀಯ ಸಂಸ್ಕೃತಿ, ಕಲೆ, ಇತಿಹಾಸಗಳನ್ನು ಬಿಂಬಿಸುವ ಅಪರೂಪದ ವಿನ್ಯಾಸಗಳ ಕೆತ್ತನೆ ಮಾಡಲಾಗಿದೆ. ಆದರೆ ಇಲ್ಲಿನ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ಈ ಅಂತಸ್ತಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.