ಅಯೋಧ್ಯಾ ರಾಮ ಮಂದಿರ: ರಾಮನಿಗೆ ಬಂತು ನಾನಾ ರೀತಿ ಉಡುಗೊರೆ!

KannadaprabhaNewsNetwork | Updated : Jan 11 2024, 10:23 AM IST

ಸಾರಾಂಶ

ರಾಮಮಂದಿರಕ್ಕೆ ದೇಶಾದ್ಯಂತ ವಿವಿಧ ರೀತಿಯ ಉಡುಗೊರೆ ಕಳುಹಿಸುತ್ತಿರುವ ಭಕ್ತಾದಿಗಳು ಶ್ರೀರಾಮನಲ್ಲಿ ತಮ್ಮ ಭಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದಲ್ಲದೆ ದೇಗುಲಗಳು ಪ್ರಾಣಪ್ರತಿಷ್ಠಾಪನೆಯ ದಿನ ಭಕ್ತಾದಿಗಳಿಗೆ ಪ್ರಸಾದ ಸಂತರ್ಪಣೆ ಮಾಡಲಿವೆ. ಜೊತೆಗೆ ವಿದೇಶದಿಂದಲೂ ಹಲವು ಉಡುಗೊರೆಗಳು ಬಂದಿವೆ.

ಅಯೋಧ್ಯೆ: ರಾಮಮಂದಿರದ ಮೊದಲ ಹಂತ ಲೋಕಾರ್ಪಣೆಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ನಡುವೆ ದೇಗುಲಕ್ಕೆ ವಿಶ್ವದಲ್ಲೇ ಬೃಹತ್‌ ಬೀಗದ ಕೈ, ಚಿನ್ನ ಲೇಪಿತ ಪಾದರಕ್ಷೆ, ಶ್ರೀರಾಮನ ಚಿತ್ರವುಳ್ಳ ಸೀರೆ, 8 ರಾಷ್ಟ್ರಗಳ ಸಮಯ ತೋರಿಸಬಲ್ಲ ಗಡಿಯಾರ ಸೇರಿದಂತೆ ಹಲವು ವಿಶಿಷ್ಟ ಉಡುಗೊರೆಗಳನ್ನು ಭಕ್ತಾದಿಗಳು ಸಮರ್ಪಿಸಿ ಭಕ್ತಿ ಮೆರೆಯುತ್ತಿದ್ದಾರೆ. 

ಸೀತೆಯ ಜನ್ಮಸ್ಥಳ ಎನ್ನಲಾದ ನೇಪಾಳದ ಜನಕಪುರಿಯಿಂದಲೇ ಬೆಳ್ಳಿ ಪಾದರಕ್ಷೆ, ಆಭರಣಗಳು, ಬಟ್ಟೆಗಳು ಸೇರಿದಂತೆ 3,000 ರೀತಿಯ ಉಡುಗೊರೆಗಳು ಅಯೋಧ್ಯೆಗೆ ಬಂದು ತಲುಪಿವೆ. ಶ್ರೀಲಂಕಾದ ಅಶೋಕವನದಿಂದ ಬೃಹತ್ ಬಂಡೆಯನ್ನು ಅಯೋಧ್ಯೆಗೆ ಸಮರ್ಪಿಸಲಾಗಿದೆ. 

ಇದರ ಜೊತೆಗೆ ದೇಶದೊಳಗೂ ವಿವಿಧ ರೀತಿಯ ಉಡುಗೊರೆಗಳನ್ನು ಭಕ್ತಾದಿಗಳು ತಯಾರಿಸಿ ಕಳುಹಿಸಿಕೊಡುತ್ತಿದ್ದಾರೆ. ಪ್ರಮುಖವಾಗಿ ವಡೋದರಾದಿಂದ 108 ಅಡಿ ಉದ್ದದ ಅಗರಬತ್ತಿ, ಅಹಮದಾಬಾದ್‌ನಿಂದ 44 ಅಡಿ ಉದ್ದದ ಧ್ವಜಸ್ತಂಭ, 56 ಇಂಚಿನ ದೇಗುಲದ ಡೋಲು ಮತ್ತು ಪಂಚಧಾತುವಿನಿಂದ ತಯಾರಿಸಿದ ಬೃಹತ್‌ ದೀಪ, ಅಲಿಗಢದಿಂದ ವಿಶ್ವದಲ್ಲೇ ಬೃಹತ್‌ ಬೀಗದ ಕೈ, ಉತ್ತರ ಪ್ರದೇಶದ ಜಲೆಸಾರ್‌ನಿಂದ ಅಷ್ಟಧಾತುವಿನಿಂದ ತಯಾರಿಸಿದ ಬೃಹತ್‌ ಘಂಟೆ, ಲಖನ್‌ದಿಂದ 8 ರಾಷ್ಟ್ರದ ಸಮಯ ತೋರಿಸಬಲ್ಲ ಗಡಿಯಾರ, ಸೂರತ್‌ನಿಂದ ಸೀತೆಗೆ ಸೀರೆ ಮತ್ತು ವಜ್ರದ ಕಂಠಾಭರಣ, ಹೈದರಾಬಾದ್‌ನಿಂದ ಚಿನ್ನಲೇಪಿತ ಪಾದರಕ್ಷೆಗಳು ಅಯೋಧ್ಯೆಗೆ ಬಂದು ತಲುಪಿವೆ.

 2000 ಕೆಜಿ ತೂಕದ ವಿಶ್ವದ ಬೃಹತ್‌ ಗಂಟೆ ಸಮರ್ಪಣೆ
ರಾಮಮಂದಿರಕ್ಕೆ ಉತ್ತರ ಪ್ರದೇಶದ ಎತಾಹ್‌ ಜಲೆಸಾರ್‌ ಪಟ್ಟಣದ ವ್ಯಕ್ತಿಯೊಬ್ಬರು ಬರೋಬ್ಬರಿ 25 ಲಕ್ಷ ರು. ಮೌಲ್ಯದ 2100 ಸಾವಿರ ಕೇಜಿ ತೂಕವುಳ್ಳ ಬೃಹತ್‌ ಗಂಟೆ ಸಮರ್ಪಿಸಿದ್ದಾರೆ.

ಈ ಬೃಹತ್‌ ಗಂಟೆಯನ್ನು ಆದಿತ್ಯ ಮಿತ್ತಲ್‌ ಎಂಬ ಧಾತು ವ್ಯಾಪಾರಿ ತನ್ನ ಅಸುನೀಗಿದ ಸಹೋದರನ ಕೊನೆಯಾಸೆ ಪೂರೈಸುವ ಸಲುವಾಗಿ ಚಿನ್ನ, ಬೆಳ್ಳಿಯೂ ಸೇರಿದಂತೆ ಅಷ್ಟಧಾತುಗಳಿಂದ ತಯಾರಿಸಿದ್ದು, ಎಲ್ಲ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಪೂರೈಸಿ ಅಯೋಧ್ಯೆಗೆ ರೈಲಿನ ಮೂಲಕ ಕಳುಹಿಸಿ ಕೊಡಲಾಗಿದೆ.

ಇದನ್ನು 30 ಕುಶಲಕರ್ಮಿಗಳು ಬರೋಬ್ಬರಿ 2 ವರ್ಷಗಳ ಕಾಲ ಕಠಿಣ ಪರಿಶ್ರಮ ಹಾಕಿ ತಯಾರಿಸಿದ್ದಾರೆ. ಇದು ಭಾರತದಲ್ಲೇ ಅತ್ಯಂತ ಬೃಹತ್‌ ಘಂಟೆಯಾಗಿದೆ ಎಂದು ಆದಿತ್ಯ ಮಿತ್ತಲ್‌ ತಿಳಿಸಿದ್ದಾರೆ.

ಅಲ್ಲದೆ ಜ.22ರ ಪ್ರಾಣಪ್ರತಿಷ್ಠಾಪನೆಯ ದಿನ ಭಕ್ತಾದಿಗಳಿಗೆ ಪ್ರಸಾದ ಸಂತರ್ಪಣೆಗೆ ನಾಗಪುರದ ಅಡುಗೆ ಭಟ್ಟರೊಬ್ಬರು ಬರಹತ್‌ ಕಡಾಯಿಯನ್ನು ತಯಾರಿಸಿ ರಾಮಹಲ್ವಾ ತಯಾರಿಸಿ ಹಂಚಲಿದ್ದಾರೆ ಮತ್ತು ತಿರುಪತಿ ದೇಗುಲ ಮಂಡಳಿ ಒಂದು ಲಕ್ಷ ಲಡ್ಡು ವಿತರಿಸಲಿದೆ. ಮಥುರಾ ಕೃಷ್ಣ ದೇಗುಲ ಯಜ್ಞಕ್ಕೆ 200 ಕೆಜಿ ಲಡ್ಡು ದೇಣಿಗೆ ನೀಡಿದೆ.

Share this article