ರಾಮ ಮಂದಿರ ಟ್ರಸ್ಟ್‌ ಮುಖ್ಯಸ್ಥ ದಾಸ್‌ ಆರೋಗ್ಯ ಸ್ಥಿತಿ ಗಂಭೀರ

KannadaprabhaNewsNetwork | Published : Sep 10, 2024 1:40 AM

ಸಾರಾಂಶ

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್‌ ದಾಸ್‌ (86) ಅನಾರೋಗ್ಯದಿಂದ ಬಳಲುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಭಾನುವಾರ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಲಖನೌ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್‌ ದಾಸ್‌ (86) ಅನಾರೋಗ್ಯದಿಂದ ಬಳಲುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಭಾನುವಾರ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಾಸ್‌ ಮೂತ್ರದ ಸಮಸ್ಯೆ ಮತ್ತು ಕಡಿಮೆ ಆಹಾರ ಸೇವನೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಗ್ವಾಲಿಯರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರನ್ನು ಮೇದಾಂತ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅವರ ಆಪ್ತರು ಹೇಳಿದ್ದಾರೆ.

===

ಹರ್ಯಾಣ: ಆಪ್-ಕಾಂಗ್ರೆಸ್‌ ಮೈತ್ರಿ ಇಲ್ಲ?

ನವದೆಹಲಿ: ಅಕ್ಟೋಬರ್‌ 5ರ ಹರ್ಯಾಣ ವಿಧಾನಸಭೆ ಚುನಾವಣೆಗೆ ಆಮ್‌ ಆದ್ಮಿ ಪಕ್ಷ 20 ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಈ ಮೂಲಕ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದ ಆಪ್ ಮತ್ತು ಕಾಂಗ್ರೆಸ್‌ ವಿಧಾನಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಬಹುತೇಕ ಕ್ಷೀಣಿಸಿದಂತಾಗಿದೆ.ಕಾಂಗ್ರೆಸ್‌ ಈಗಾಗಲೇ 40ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಆಪ್ ಕೂಡ 20 ಮಂದಿ ಹೆಸರನ್ನು ಪ್ರಕಟಿಸಿದೆ. ನಾಮಪತ್ರ ಸಲ್ಲಿಕೆಗೆ 3 ದಿನಗಳಷ್ಟೇ ಉಳಿದಿದ್ದು, ಎರಡೂ ಪಕ್ಷಗಳು ಪ್ರತ್ಯೇಕ ಪಟ್ಟಿ ಪ್ರಕಟಿಸಿರುವುದರಿಂದ ಕಾಂಗ್ರೆಸ್‌ ಮತ್ತು ಆಪ್ ಮೈತ್ರಿ ನಡೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.ಮೂಲಗಳ ಪ್ರಕಾರ, ಆಪ್ ಮತ್ತು ಕಾಂಗ್ರೆಸ್‌ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆ. ಆಮ್‌ ಆದ್ಮಿ 10 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದರೆ, ಕಾಂಗ್ರೆಸ್‌ 5 ಕ್ಷೇತ್ರಗಳನ್ನು ನೀಡಲು ಮುಂದಾಗಿದೆ ಎನ್ನಲಾಗಿದೆ.

===

ಗಣೇಶ ಮೂರ್ತಿಗೆ ಕಲ್ಲು ತೂರಾಟ: ಸೂರತ್‌ ಉದ್ವಿಗ್ನಸೂರತ್‌: ಗಣೇಶನ ಹಬ್ಬದಂದು ನಗರದಲ್ಲಿ ಕೂರಿಸಿದ್ದ ಗಣೇಶ ವಿಗ್ರಹಕ್ಕೆ ಅಪ್ರಾಪ್ತರ ಗುಂಪೊಂದು ಕಲ್ಲು ತೂರಾಟ ನಡೆಸಿ ವಿಗ್ರಹವನ್ನು ಹಾನಿಗೊಳಿಸಿರುವ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಇದರಿಂದಾಗಿ ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ಪರಸ್ಪರ ಕಲ್ಲು ತೂರಾಟ ನಡೆದಿದ್ದು, ಘಟನೆಯಲ್ಲಿ ಕೆಲ ಸಾರ್ವಜನಿಕರು ಮತ್ತು ಪೊಲೀಸರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 34 ಜನರನ್ನು ಪೊಲೀಸರು ಬಂಧಿಸಿದ್ದಾರೆ.ಗಲಾಟೆಯಲ್ಲಿ ಉದ್ರಿಕ್ತರ ಗುಂಪು ಕೆಲ ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಸಂಗವೂ ತಡೆಯಿತು. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಲಾಠಿ ಚಾರ್ಜ್‌ ಮತ್ತು ಅಶ್ರುವಾಯು ಸಿಡಿಸಬೇಕಾಯಿತು. ಘಟನೆಗೆ ಸಂಬಂಧಿಸಿದಂತೆ, ಪೊಲೀಸರು 3 ಎಫ್‌ಐಆರ್ ದಾಖಲಿಸಿಕೊಂಡು 6 ಅಪ್ರಾಪ್ತರು ಸೇರಿದಂತೆ ಒಟ್ಟು 34 ಜನರನ್ನು ಬಂಧಿಸಿದ್ದಾರೆ.

=====

ದ್ರೌಪದಿಯಂತೆ ವಿನೇಶ್‌ ಪಣಕ್ಕೆ: ಮತ್ತೆ ನಾಲಗೆ ಹರಿಬಿಟ್ಟ ಬ್ರಿಜ್ಗೊಂಡಾ (ಉ.ಪ್ರ): ಹರ್ಯಾಣ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಕುಸ್ತಿಪಟು ವಿನೇಶ್‌ ಪೋಗಟ್‌ ವಿರುದ್ಧ ಮಾತನಾಡಕೂಡದೆಂದು ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ , ಬಿಜೆಪಿ ನಾಯಕ ಬ್ರಿಜ್ ಭೂಷಣ್‌ಗೆ ಬಿಜೆಪಿ ತಾಕೀತು ಮಾಡಿದ್ದರೂ ಅವರು ಸುಮ್ಮನಾಗಿಲ್ಲ. ‘ದ್ರೌಪದಿಯನ್ನು ಪಾಂಡವರು ಪಣಕ್ಕಿಟ್ಟಂತೆ ವಿನೇಶ್‌ಳನ್ನು ಪಣಕ್ಕಿಟ್ಟು ಹರ್ಯಾಣ ಕಾಂಗ್ರಸ್‌ನ ಹೂಡಾ ಕುಟುಂಬ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ’ ಎಂದು ಮತ್ತೆ ನಾಲಗೆ ಹರಿಬಿಟ್ಟಿದ್ದಾರೆ.ಗೊಂಡಾದಲ್ಲಿ ಮಾತನಾಡಿದ ಬ್ರಿಜ್, ‘ ಮಹಾಭಾರತದಲ್ಲಿ ಜೂಜಿನ ಸಂದರ್ಭದಲ್ಲಿ ದ್ರೌಪದಿಯನ್ನು ಪಣಕ್ಕಿಟ್ಟು, ಪಾಂಡವರು ಸೋತಿದ್ದರು. ಅದೇ, ರೀತಿ ಹೂಡಾ ಕುಟುಂಬವು ಪುತ್ರಿಯರು ಮತ್ತು ಸಹೋದರಿಯರ ಗೌರವವನ್ನು ಪಣಕ್ಕಿಟ್ಟಿದೆ. ಮುಂದಿನ ಪೀಳಿಗೆ ಅವರನ್ನು ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ ಮತ್ತು ಅವರು ಈ ವಿಚಾರಕ್ಕೆ ಪಶ್ಚಾತ್ತಾಪ ಪಡುತ್ತಾರೆ’ ಎಂದರು.ಬ್ರಿಜ್ ಹೇಳಿಕೆಯನ್ನು ಕಾಂಗ್ರೆಸ್‌ ವಕ್ತಾರ ಪವನ್ ಖೇರಾ ಖಂಡಿಸಿದ್ದಾರೆ.

=========

ದಿಲ್ಲಿ: ವಾಯುಮಾಲಿನ್ಯ ತಡೆಗೆ ಜ.1ರವರೆಗೆ ಪಟಾಕಿ ನಿಷೇಧನವದೆಹಲಿ: ಮುಂಬರುವ ಚಳಿಗಾಲದಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ರಾಜಧಾನಿ ದೆಹಲಿಯಲ್ಲಿ 2025 ಜ.1ರ ವರೆಗೆ ಪಟಾಕಿಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಪರಿಸರ ಸಚಿವ ಗೋಪಾಲ್ ರಾಯ್‌, ಚಳಿಗಾಲದಲ್ಲಿ ವಾಯುಮಾಲಿನ್ಯ ಹೆಚ್ಚುವ ಅಪಾಯವಿದೆ. ಈ ವೇಳೆ ದೀಪಾವಳಿ ಇದ್ದು, ಪಟಾಕಿ ಸುಡುವುದರಿಂದ ಮಾಲಿನ್ಯ ಇನ್ನಷ್ಟು ಉಲ್ಬಣ ಆಗುತ್ತದೆ. ಆದ್ದರಿಂದ ವಾಯುಮಾಲಿನ್ಯ ತಡೆಯಲು ಪಟಾಕಿಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು 2025ರ ಜ.1ರ ವರೆಗೆ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

==

ಗೋವಾದಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಇಳಿಕೆ, ಮುಸ್ಲಿಂ ಜನಸಂಖ್ಯೆ ಏರಿಕೆ: ಪಿಳ್ಳೈಕೊಚ್ಚಿ: ಗೋವಾದಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಗಣನೀಯವಾಗಿ ಇಳಿಯಾಗಿದ್ದು, ಮುಸ್ಲಿಮರ ಜನಸಂಖ್ಯೆ ಏರಿಕೆಯಾಗಿದೆ ಎಂದು ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೈ ಹೇಳಿದ್ದಾರೆ.ಇಲ್ಲಿನ ಚರ್ಚ್‌ವೊಂದರಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪಿಳ್ಳೈ, ಗೋವಾದಲ್ಲಿ ಕ್ರೈಸ್ತರ ಸಂಖ್ಯೆ ಈ ಮುಂಚಿನ ಶೇ.36 ರಿಂದ ಶೇ.25ಕ್ಕೆ ಇಳಿದಿದೆ. ಆದರೆ ಮುಸ್ಲಿಂ ಸಮುದಾಯದ ಜನಸಂಖ್ಯೆ ಶೇ.3 ರಿಂದ ಶೇ.12ಕ್ಕೆ ಏರಿದೆ ಎಂದರು.‘ಇಳಿಕೆಗೆ ಮುಖ್ಯ ಕಾರಣ ಪ್ರತಿಭಾವಂತರು ಪಲಾಯನ ಮಾಡುತ್ತಿರುವುದು ಎಂಬುದು ನನ್ನ ಅನಿಸಿಕೆ. ಆದ್ದರಿಂದ ಇದಕ್ಕೆ ಸಂಬಂಧಸಿದಂತೆ ಸಮುದಾಯದ ಮುಖಂಡರಿಗೆ ಕೆಲವು ವರದಿಗಳನ್ನು ತೋರಿಸಿದ್ದೇನೆ. ಅದರ ಬಗ್ಗೆ ಅಧ್ಯಯನ ಮಾಡಲು ಹೇಳಿದ್ದೇನೆ’ ಎಂದರು.

Share this article