ಹೈದರಾಬಾದ್: ಸೂರ್ಯೋದಯದೊಳಗೆ ಚಂದಾದಾರರ ಮನೆಬಾಗಿಲಿಗೆ ದಿನಪತ್ರಿಕೆಯನ್ನು ತಲುಪಿಸುವ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ‘ಈನಾಡು’ ಪತ್ರಿಕೆಯ ನಿರ್ಮಾತೃ ಹಾಗೂ ಪ್ರಪಂಚದ ಅತಿದೊಡ್ಡ ಸಿನಿಮಾ ಶೂಟಿಂಗ್ ಸ್ಥಳವಾದ ರಾಮೋಜಿ ಫಿಲ್ಮ್ ಸಿಟಿಯ ಉದಯಕ್ಕೆ ಕಾರಣಕರ್ತರಾಗಿರುವ ರಾಮೋಜಿ ರಾವ್ ನಮ್ಮೆಲ್ಲರನ್ನು ಅಗಲಿದ್ದಾರೆ.
ಒಂದು ಅವಧಿಗೆ ಇವರು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು.
ವಿಶೇಷವೆಂದರೆ ಜನಪ್ರಿಯ ‘ಪ್ರಿಯಾ ಉಪ್ಪಿನಕಾಯಿ’ ಬ್ರಾಂಡ್ ಸಂಸ್ಥಾಪಕರೂ ರಾಮೋಜಿರಾವ್.ಹಾಲಿವುಡ್‌ಗೆ ಸಡ್ಡು- ಫಿಲ್ಮ್ ಸಿಟಿ ನಿರ್ಮಾಣ:
ಚಿತ್ರಗಳ ಶೂಟಿಂಗ್ ಎಂದರೆ ಬಾಲಿವುಡ್ ಹಾಗೂ ಹಾಲಿವುಡ್‌ನ ಫಿಲ್ಮ್ ಸಿಟಿಗಳತ್ತ ನೋಡುವ ಕಾಲ ಒಂದಿತ್ತು. ಆದರೆ ರಾಮೋಜಿರಾವ್ ಅವರು, ಬಾಹುಬಲಿಯೂ ಸೇರಿದಂತೆ ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ರಾಮೋಜಿ ಫಿಲ್ಮ್ ಸಿಟಿಯ ನಿರ್ಮಾಣ ಮಾಡಿ ಐತಿಹಾಸಿಕ ಚಿತ್ರಗಳ ದೃಶ್ಯೀಕರಣಕ್ಕೆ ಕಾರಣಕರ್ತರಾಗಿದ್ದಾರೆ. ಚಿತ್ರೋದ್ಯಮದಲ್ಲಿ ಉಷಾಕಿರಣ್ ನಿರ್ಮಾಣ ಸಂಸ್ಥೆಯ ಮೂಲಕ ಹಲವಾರು ಚಿತ್ರಗಳನ್ನು ನಿರ್ಮಿಸಿ ಮೇರು ನಟ, ಸಂಗೀತ ನಿರ್ದೇಶಕರನ್ನು ಪರಿಚಯಿಸಿದ ಹೆಗ್ಗಳಿಕೆ ರಾಮೋಜಿಗಿದೆ. ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಕಂಪನಿಯನ್ನೂ ಅವರು ನಡೆಸುತ್ತಿದ್ದರು.ಪದ್ಮ ಸೇರಿ ಅನೇಕ ಗೌರವ:
ಇವರ ಅಪ್ರತಿಮ ಸೇವೆಗೆ ಸರ್ಕಾರದಿಂದ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ.ಮನರಂಜನಾ ಕ್ಷೇತ್ರದ ಜೊತೆಗೆ ಹೋಟೆಲ್ ಉದ್ಯಮವನ್ನೂ ಪ್ರವೇಶಿಸಿ ಡಾಲ್ಫಿನ್ ಗ್ರೂಪ್ ಆಫ್ ಹೊಟೆಲ್ಸ್‌ನಡಿ ಹಲವು ಹೊಟೆಲ್‌ಗಳನ್ನು ಸ್ಥಾಪಿಸಿದ್ದಾರೆ. ಜೊತೆಗೆ ಪ್ರಿಯಾ ಫುಡ್ಸ್ ಬ್ರಾಂಡ್ ಸ್ಥಾಪಿಸಿದ್ದು, ಅದರ ಉಪ್ಪಿನಕಾಯಿಗಳು ಇಂದಿಗೂ ಅಮೆರಿಕದಲ್ಲಿ ಜನಪ್ರಿಯವಾಗಿದೆ.