ಉದ್ಯಮದಲ್ಲಷ್ಟೇ ಅಲ್ಲ ದಾನ, ಧರ್ಮದಲ್ಲೂ ರತ್ನ ಈ ರತನ್‌

KannadaprabhaNewsNetwork |  
Published : Oct 11, 2024, 11:46 PM IST
ಟಾಟಾ | Kannada Prabha

ಸಾರಾಂಶ

ಲಾಭಗಳಿಸುವ ಉದ್ದೇಶದೊಂದಿಗೆ ಉದ್ಯಮಗಳು ಆರಂಭವಾಗುತ್ತವಾದರೂ, ಅವು ಒಂದು ಹಂತ ತಲುಪಿದ ಬಳಿಕ ಉದ್ಯಮಿಗಳು ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡುತ್ತಾರೆ. ಇಂತಹವರಲ್ಲಿ ರತನ್‌ ಟಾಟಾ ಪ್ರಮುಖ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತಾರೆ.

ಲಾಭಗಳಿಸುವ ಉದ್ದೇಶದೊಂದಿಗೆ ಉದ್ಯಮಗಳು ಆರಂಭವಾಗುತ್ತವಾದರೂ, ಅವು ಒಂದು ಹಂತ ತಲುಪಿದ ಬಳಿಕ ಉದ್ಯಮಿಗಳು ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡುತ್ತಾರೆ. ಇಂತಹವರಲ್ಲಿ ರತನ್‌ ಟಾಟಾ ಪ್ರಮುಖ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತಾರೆ. ರತನ್‌ ಟಾಟಾ, ಟಾಟಾ ಸನ್ಸ್‌ ಮೂಲಕ ಶಿಕ್ಷಣ, ಔಷಧ, ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಕಳೆದ ಕೆಲ ದಶಕಗಳಿಂದ ಸಾವಿರಾರು ಕೋಟಿ ರು ದೇಣಿಗೆ ನೀಡಿದ್ದಾರೆ.ಕ್ಯಾಲಿಫೋರ್ನಿಯಾ ವಿವಿಯಲ್ಲಿ ಟಾಟಾ ಹಾಲ್‌:

ರತನ್‌ ಟಾಟಾ ಅವರು ಸ್ಯಾನ್ ಡಿಯಾಗೋದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ ಸೊಸೈಟಿ (ಟಿಐಜಿಎಸ್‌) ನಿರ್ಮಾಣಕ್ಕಾಗಿ 2016ರಲ್ಲಿ 70 ಮಿಲಿಯನ್‌ ಡಾಲರ್‌ ದೇಣಿಗೆ ನೀಡಿದ್ದರು.

ಜೈವಿಕ ಮತ್ತು ಭೌತಿಕ ವಿಜ್ಞಾನಗಳ ಸಂಶೋಧನೆಗಾಗಿ ಮೀಸಲಿಡಲಾಗಿರುವ ಇದು 128,000 ಚದರ ಅಡಿ ವಿಸ್ತೀರ್ಣದ 4 ಅಂತಸ್ತಿನ ಕಟ್ಟಡವಾಗಿದೆ. ಪರಿಸರ ಸ್ನೇಹಿ ಹಾಗೂ ಶಕ್ತಿ ಸ್ನೇಹಿಯಾಗಿರುವ ಈ ಕಟ್ಟಡವು ಅತ್ಯಾಧುನಿಕ ಪ್ರಯೋಗಾಲಯಗಳು, ಕಚೇರಿಗಳು ಮತ್ತು ಸಭಾಂಗಣಗಳನ್ನು ಹೊಂದಿದೆ. ಇಲ್ಲಿ ಜೆನೆಟಿಕ್ಸ್ ಮತ್ತು ರೋಗ ನಿಯಂತ್ರಣದ ಬಗ್ಗೆ ಸಂಶೋಧನೆ ನಡೆಸಲಾಗುತ್ತದೆ. ಅಂತೆಯೇ, ಜಗತ್ತನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗಗಳು ಮತ್ತು ಸುಸ್ಥಿರ ಆಹಾರ ಮೂಲಗಳ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಭಾರತೀಯ ವಿದ್ಯಾರ್ಥಿಗಳಿಗೆ ನೆರವು:

ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಸಲುವಾಗಿ ಟಾಟಾ ಸಮೂಹದ ಅಂಗಸಂಸ್ಥೆಯಾಗಿರುವ ಟಾಟಾ ಎಜುಕೇಶನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ 28 ಮಿಲಿಯನ್‌ ಡಾಲರ್‌ ಸ್ಕಾಲರ್‌ಶಿಪ್ ನಿಧಿಯನ್ನು ನೀಡಿದೆ.

ಇದರಿಂದಾಗಿ ಆರ್ಥಿಕ ಸಂಕಷ್ಟದ ಹೊರತಾಗಿಯೂ ಭಾರತೀಯ ವಿದ್ಯಾರ್ಥಿಗಳು ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮಾಡುವ ಕನಸು ಕಾಣಲು ಸಾಧ್ಯವಾಗಿದೆ. ಪ್ರತಿ ವರ್ಷ ನೀಡಲಾಗುವ ಈ ದತ್ತಿನಿಧಿಯನ್ನು ವಿದ್ಯಾರ್ಥಿಗಳ ವ್ಯಾಸಂಗ ಮುಗಿಯುವ ತನಕ ಮುಂದುವರೆಸಲಾಗುವುದು.

ಕಾರ್ನೆಲ್ ಟೆಕ್‌ನಲ್ಲಿರುವ ಟಾಟಾ ಇನ್ನೋವೇಶನ್ ಸಂಸ್ಥೆಗೂ ಉದ್ಯಮಿ ರತನ್ ಟಾಟಾ ಅವರ ಹೆಸರಿಡಲಾಗಿದೆ. ಇದನ್ನು ಪ್ರಮುಖವಾಗಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗೆ ಮೀಸಲಿಡಲಾಗಿದೆ.

ಹಾರ್ವರ್ಡ್‌ ಕೇಂದ್ರ ನಿರ್ಮಾಣ:

ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ 100 ಮಿಲಿಯನ್‌ ಡಾಲರ್‌ ವೆಚ್ಚದಲ್ಲಿ ನಿರ್ಮಾಣವಾದ ಕಾರ್ಯನಿರ್ವಾಹಕ ಕೇಂದ್ರಕ್ಕೆ ರತನ್‌ ಟಾಟಾ 50 ಮಿಲಿಯನ್‌ ಡಾಲರ್‌ ಕೊಡುಗೆ ನೀಡಿದ್ದರು. ಇದರ ಸ್ಮರಣಾರ್ಥ 155,000 ಒಟ್ಟು ಚದರ ಅಡಿ ವಿಸ್ತೀರ್ಣದ 7 ಅಂತಸ್ತಿನ ಕಟ್ಟಡಕ್ಕೆ ಟಾಟಾರ ಹೆಸರನ್ನೇ ಇಡಲಾಗಿದೆ.

ಸೀಮಿತ ಸಂಪನ್ಮೂಲಗಳೊಂದಿಗೆ ಜನರು ಅಗತ್ಯತೆಗಳಿಗೆ ಪೂರಕವಾದ ವಿನ್ಯಾಸ ಮತ್ತು ಎಂಜಿನಿಯರಿಂಗ್ ತತ್ವಗಳನ್ನು ಅಭಿವೃದ್ಧಿಪಡಿಸಲು 2014ರಲ್ಲಿ ಟಾಟಾ ಸೆಂಟರ್ ಫಾರ್ ಟೆಕ್ನಾಲಜಿ ಅಂಡ್ ಡಿಸೈನ್ (ಟಿಸಿಟಿಡಿ) ಸ್ಥಾಪಿಸಲಾಯಿತು. ಇದಕ್ಕೆ ನೀಡಿದ 950 ಮಿಲಿಯನ್‌ ರು. ದಾನ ಐತಿಹಾಸಿಕ.

ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ:

ಆಲ್‌ಝೈಮರ್‌ನ ಕಾಯಿಲೆಗೆ ಕಾರಣವೇನು ಎಂಬುದನ್ನು ಅಧ್ಯಯನ ಮಾಡಲು ಮತ್ತು ಅದನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡುವ ವಿಧಾನಗಳನ್ನು ಅಭಿವೃದ್ಧಿಪಡಿಸಲು ಸೆಂಟರ್ ಫಾರ್ ನ್ಯೂರೋಸೈನ್ಸ್‌ಗೆ ಟಾಟಾ 750 ಮಿಲಿಯನ್‌ ರು. ದಾನ ನೀಡಿದರು.

ಸಮಾಜದ ಬಗ್ಗೆ ಕಳಕಳಿ:

ಸಂಪನ್ಮೂಲ ನಿರ್ಬಂಧಿತ ಸಮುದಾಯಗಳು ಎದುರಿಸುವ ಸವಾಲುಗಳಿಗೆ ಸಮಾಧಾನ ಹುಡುಕುವ ಸಲುವಾಗಿ ಎಂಐಟಿ ಟಾಟಾ ಸೆಂಟರ್ ಆಫ್ ಟೆಕ್ನಾಲಜಿ ಅಂಡ್ ಡಿಸೈನನ್ನು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ಥಾಪಿಸಲಾಯಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ