ಹಾಸ್ಟೆಲ್‌ ಗೆಳೆಯನಿಗೆ ₹500 ಕೋಟಿ ಆಸ್ತಿ ಬರೆದಿಟ್ಟ ರತನ್‌ ಟಾಟಾ ! ಎಲ್ಲರಿಗೂ ಅಚ್ಚರಿ

ಸಾರಾಂಶ

ಇತ್ತೀಚೆಗಷ್ಟೇ ನಿಧನರಾದ ದೇಶ ಕಂಡ ಅಪ್ರತಿಮ ಉದ್ಯಮಿ ರತನ್‌ ಟಾಟಾ ಅವರು ತಮ್ಮ ಆಸ್ತಿಯ ಮೂರನೇ ಒಂದು ಪಾಲು ಅಂದರೆ ಭರ್ಜರಿ 500 ಕೋಟಿ ರು. ಸಂಪತ್ತನ್ನು ದಶಕಗಳ ಹಿಂದಿನ ತಮ್ಮ ಹಾಸ್ಟೆಲ್ ರೂಂ ಮೇಟ್‌ ಹೆಸರಿಟ್ಟಿಗೆ ಬರೆದಿಟ್ಟಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಮುಂಬೈ: ಇತ್ತೀಚೆಗಷ್ಟೇ ನಿಧನರಾದ ದೇಶ ಕಂಡ ಅಪ್ರತಿಮ ಉದ್ಯಮಿ ರತನ್‌ ಟಾಟಾ ಅವರು ತಮ್ಮ ಆಸ್ತಿಯ ಮೂರನೇ ಒಂದು ಪಾಲು ಅಂದರೆ ಭರ್ಜರಿ 500 ಕೋಟಿ ರು. ಸಂಪತ್ತನ್ನು ದಶಕಗಳ ಹಿಂದಿನ ತಮ್ಮ ಹಾಸ್ಟೆಲ್ ರೂಂ ಮೇಟ್‌ ಹೆಸರಿಟ್ಟಿಗೆ ಬರೆದಿಟ್ಟಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಕಳೆದ ವರ್ಷ ಅ.9ರಂದು ರತನ್‌ ಟಾಟಾ ನಿಧನರಾದ 2 ವಾರಗಳ ಬಳಿಕ ಬಹಿರಂಗಪಡಿಸಲಾದ ಉಯಿಲಿನಲ್ಲಿ ಮೋಹಿನಿ ಮೋಹನ್‌ ದತ್ತಾ (74) ಅವರಿಗೆ ನೀಡಬೇಕಾದ ಪಾಲನ್ನು ಉಲ್ಲೇಖಿಸಲಾಗಿದೆ. ಅದು ಈಗ ಬೆಳಕಿಗೆ ಬಂದಿದೆ. ದತ್ತಾರ ಬಗ್ಗೆ ಟಾಟಾ ಅವರ ಪರಿವಾರಕ್ಕೆ ಬಿಟ್ಟರೆ ಬೇರಾರಿಗೂ ಹೆಚ್ಚು ತಿಳಿದಿಲ್ಲ. ಹಾಗಾಗಿ ಅವರಿಗೆ ಮೀಸಲಿರುವ ಆಸ್ತಿಯ ಪಾಲನ್ನು ಪರಿಶೀಲಿಸಿ, ಹೈಕೋರ್ಟಿನಿಂದ ಪ್ರಮಾಣೀಕರಿಸಲ್ಪಟ್ಟ ಬಳಿಕವಷ್ಟೇ ನೀಡಲಾಗುವುದು.

ಉಳಿದಂತೆ, ತಮ್ಮ ಸಹೋದರ, ಮಲ ಸಹೋದರಿ, ಮನೆ ಕೆಲಸದವರು, ಕಾರ್ಯನಿರ್ವಾಹಕ ಸಹಾಯಕ ಶಾಂತನು ನಾಯ್ಡು, ಸಾಕು ನಾಯಿ ಟೀಟೋಗೆ ಟಾಟಾ ತಮ್ಮ ಆಸ್ತಿಯನ್ನು ಹಂಚಿಕೆ ಮಾಡಿದ್ದಾರೆ.

ಯಾರು ಈ ದತ್ತಾ?:

1961ರಲ್ಲಿ ರತನ್‌ ಟಾಟಾ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಜಾರ್ಖಂಡ್‌ನ ಜಮ್ಷೆಡ್‌ಪುರದಲ್ಲಿರುವ ಟಾಟಾ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಈ ವೇಳೆ ಅವರಿಗೆ ಉಳಿದುಕೊಳ್ಳಲು ನೀಡಿದ್ದ ಟಾಟಾ ಸಮೂಹದ ಸಿಬ್ಬಂದಿ ಹಾಸ್ಟೆಲ್‌ನಲ್ಲಿ ರತನ್‌ಗೆ ದತ್ತಾ ಪರಿಚಯವಾಗಿದ್ದರು. ಅಲ್ಲಿಂದ ಆರಂಭವಾದ ಸ್ನೇಹ ಬಳಿಕ ವ್ಯಾಪಾರದಲ್ಲಿ ಪಾಲುದಾರಿಕೆಯಲ್ಲೂ ಮುಂದುವರೆದಿತ್ತು.

ನಂತರದ ವರ್ಷಗಳಲ್ಲಿ ರತನ್‌, ಟಾಟಾ ಸಮೂಹದಲ್ಲಿ ಒಂದೊಂದೇ ಹೆಜ್ಜೆ ಮೇಲೇರುತ್ತಾ ಬಂದಿದ್ದರು. ಇನ್ನೊಂದೆಡೆ ಜಮ್ಷೆಡ್‌ಪುರದವರೇ ಆಗಿದ್ದ ಮೋಹಿನಿ ಮೋಹನ್‌ ದತ್ತಾ ತಮ್ಮದೇ ಆದ ಸ್ಟಾಲಿಯನ್‌ ಎಂಬ ಟ್ರಾವೆಲ್‌ ಏಜೆನ್ಸಿ ಸೇರಿದಂತೆ ಹಲವು ಸಣ್ಣ ಉದ್ಯಮ ಕಟ್ಟಿಕೊಂಡಿದ್ದರು. ಬಳಿಕ ಈ ಟ್ರಾವೆಲ್ಸ್‌ ಏಜೆನ್ಸಿ ತಾಜ್‌ ಗ್ರೂಪ್‌ ಹೋಟೆಲ್ಸ್‌ನಲ್ಲಿ ವಿಲೀನವಾಯಿತು. ವಿಲೀನಕ್ಕೂ ಮೊದಲು ಸ್ಟಾಲಿಯನ್‌ನಲ್ಲಿ ದತ್ತಾ ಶೇ.80 ಮತ್ತು ರತನ್‌ ಟಾಟಾ ಶೇ.20ರಷ್ಟು ಪಾಲು ಹೊಂದಿದ್ದರು.ತಾವು ದೊಡ್ಡ ವ್ಯಕ್ತಿಯಾಗಿ ಬೆಳೆದರೂ ದತ್ತಾ ಜೊತೆಗೆ ರತನ್‌ ಉತ್ತಮ ಒಡನಾಟ ಹೊಂದಿದ್ದರು. 2024ರ ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ, ಕೇವಲ ಆಪ್ತರನ್ನಷ್ಟೇ ಆಹ್ವಾನಿಸಲಾಗಿದ್ದ, ರತನ್‌ರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ದತ್ತಾರನ್ನು ಆಹ್ವಾನಿಸಲಾಗಿತ್ತು. ಇನ್ನು ದತ್ತಾರ ಪುತ್ರಿ 2015ರವರೆಗೆ ಟಾಟಾ ಒಡೆತನದ ತಾಜ್‌ ಹೋಟೆಲ್‌ ಹಾಗೂ 2024ರ ವರೆಗೆ ಟಾಟಾ ಟ್ರಸ್ಟ್‌ನಲ್ಲಿ ಕೆಲಸ ಮಾಡಿದ್ದರು.

- ಕೆಲಸಕ್ಕೆ ಸೇರಿದಾಗ ಜತೆಯಲ್ಲಿದ್ದ ಮಿತ್ರಗೆ ಆಸ್ತಿಯಲ್ಲಿ 3ನೇ 1 ಭಾಗ ಕೊಟ್ಟ ಉದ್ಯಮಿ । ಉಯಿಲಿನಲ್ಲಿ ಮೋಹಿನಿ ಮೋಹನ್‌ ದತ್ತಾ ಹೆಸರು ಕಂಡು ಎಲ್ಲರಿಗೂ ಅಚ್ಚರಿ

- ಕಳೆದ ವರ್ಷ ಅ.9ರಂದು ನಿಧನರಾದ ದೇಶದ ಪ್ರಸಿದ್ಧ ಉದ್ಯಮಿ ರತನ್‌ ಟಾಟಾ

- ಅವರ ಮರಣದ 2 ವಾರಗಳ ನಂತರ ರತನ್‌ ಅವರು ಬರೆದಿಟ್ಟಿದ್ದ ವಿಲ್‌ ಬಹಿರಂಗ

- ಮೋಹಿನಿ ಮೋಹನ್‌ ದತ್ತಾ (74) ಹೆಸರಿಗೆ 500 ಕೋಟಿ ಆಸ್ತಿ ಬರೆದಿದ್ದ ರತನ್‌

- ಟಾಟಾ ಪರಿವಾರಕ್ಕೆ ಮೋಹಿನಿ ಮೋಹನ್‌ ದತ್ತಾ ಯಾರೆಂದೇ ಗೊತ್ತಾಗಿರಲಿಲ್ಲ

- ಅವರಿಗೆ ಮೀಸಲಾಗಿರುವ ಆಸ್ತಿಯ ಪಾಲನ್ನು ಹಂಚಿಕೆ ಮಾಡಲು ಮುಂದಾದ ಪರಿವಾರ

ಯಾರು ಈ ದತ್ತಾ?

-1961ರಲ್ಲಿ ರತನ್‌ ಟಾಟಾ ವಿದೇಶದಲ್ಲಿ ವ್ಯಾಸಂಗ ಮುಗಿಸಿ ಜೆಮ್‌ಶೆಡ್‌ಪುರಕ್ಕೆ ಬಂದಿದ್ದರು

- ಟಾಟಾ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ ಅವರು ಕಂಪನಿಯ ಹಾಸ್ಟೆಲ್‌ನಲ್ಲಿ ಉಳಿದಿದ್ದರು

- ಅದೇ ಹಾಸ್ಟೆಲ್‌ನಲ್ಲಿ ಮೋಹಿನಿ ಮೋಹನ್‌ ದತ್ತಾ ಅವರು ರತನ್‌ ಟಾಟಾಗೆ ಪರಿಚಯವಾಗಿದ್ದರು

- ಅಲ್ಲಿಂದ ಆರಂಭವಾದ ಸ್ನೇಹ ದಶಕಗಳ ಕಾಲ ಮುಂದುವರಿದಿತ್ತು. ವ್ಯವಹಾರಿಕ ಹಂತಕ್ಕೂ ಹೋಗಿತ್ತು

- ದತ್ತಾ ಅವರು ತಮ್ಮದೇ ಆದ ಕಂಪನಿ ಸ್ಥಾಪಿಸಿದ್ದರು. ಆ ಕಂಪನಿ ಟಾಟಾದ ತಾಜ್‌ನಲ್ಲಿ ವಿಲೀನವಾಯಿತು

- ರತನ್‌ ಟಾಟಾ ಎಷ್ಟೇ ಎತ್ತರಕ್ಕೆ ಏರಿದರೂ ಮೋಹನ್‌ ದತ್ತಾ ಅವರ ಜತೆ ಒಡನಾಟ ಉಳಿಸಿಕೊಂಡಿದ್ದರು

Share this article