4 ಬಾರಿ ಮದುವೆ ಚಾನ್ಸ್‌ ಮಿಸ್‌ ಮಾಡಿಕೊಂಡಿದ್ದ ರತನ್‌ /ಮಿಡಲ್‌ ಕ್ಲಾಸ್‌ ಭಾರತೀಯರ ಕನಸು ನನಸು

ಸಾರಾಂಶ

ಗುಣಮಟ್ಟದ, ಅಗ್ಗದ ದರದ ಸ್ವದೇಶಿ ಕಾರು ನ್ಯಾನೋ ರೂಪದಲ್ಲಿ ಅನಾವರಣ ಮಧ್ಯಮ ವರ್ಗದವರೇ ಹೆಚ್ಚಿರುವ ಭಾರತದಲ್ಲಿ, ಅವರಿಗೆ ಕೈಗೆಟುಕುವ ದರದಲ್ಲಿ ಕಾರ್‌ ತಯಾರಿಸುವ ಕನಸು ಕಂಡವರು ಉದ್ಯಮಿ ರತನ್‌ ಟಾಟಾ.

1 ಲಕ್ಷಕ್ಕೆ ಕಾರು ಕೊಡುವ ಭರವಸೆ ನೀಡಿ ಅದರಂತೆ ನಡೆದುಕೊಂಡಿದ್ದ ರತನ್‌

ಗುಣಮಟ್ಟದ, ಅಗ್ಗದ ದರದ ಸ್ವದೇಶಿ ಕಾರು ನ್ಯಾನೋ ರೂಪದಲ್ಲಿ ಅನಾವರಣ ಮಧ್ಯಮ ವರ್ಗದವರೇ ಹೆಚ್ಚಿರುವ ಭಾರತದಲ್ಲಿ, ಅವರಿಗೆ ಕೈಗೆಟುಕುವ ದರದಲ್ಲಿ ಕಾರ್‌ ತಯಾರಿಸುವ ಕನಸು ಕಂಡವರು ಉದ್ಯಮಿ ರತನ್‌ ಟಾಟಾ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ 2003ರಲ್ಲಿ ಅವರಿಟ್ಟ ಮೊದಲ ಹೆಜ್ಜೆಯ ಹೆಸರೇ ‘ಟಾಟಾ ನ್ಯಾನೋ’. 

ಮೊದಲ ಹೆಜ್ಜೆಯಲ್ಲೇ ಸೋಲು: ಆರಂಭದಲ್ಲಿ ನ್ಯಾನೋ ಕಾರ್‌ಗಳನ್ನು ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಪ್ರಾರಂಭಿಸುವ ಯೋಜನೆ ಹಾಕಲಾಗಿತ್ತು. ಇದರಿಂದ ಅಲ್ಲಿನ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಿ, ಆರ್ಥಿಕ ಅಭಿವೃದ್ಧಿಗೆ ವೇಗ ದೊರಕುತ್ತಿತ್ತು. ಇದಕ್ಕಾಗಿ ಅಲ್ಲಿ ಸಾಕಷ್ಟು ಕೃಷಿ ಭೂಮಿ ಖರೀದಿಸಿ ತಯಾರಿಕಾ ಘಟಕ ಆರಂಭಿಸಿತು. ಆದರೆ ಅಂದು ತಲೆಯೆತ್ತಿದ ಭೂ ಸ್ವಾಧೀನ ವಿರೋಧಿ ಆಂದೋಲನ ಇದಕ್ಕೆ ಮುಳುವಾಗಿ ಪರಿಣಮಿಸಿತು. ರಾಜ್ಯದಲ್ಲಿ ವಿಪಕ್ಷ ನಾಯಕಿಯಾಗಿದ್ದ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಕಾರ್ಖಾನೆಗಾಗಿ ರೈತರ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿದ್ದರು. ಘಟಕದ ವಿರುದ್ಧ ದೊಡ್ಡಮಟ್ಟದ ಹೋರಾಟ ನಡೆಯಿತು. ಹೋರಾಟ ಹಿಂಸಾರೂಪ ಪಡೆದು ಸಾವು ನೋವಿಗೂ ಕಾರಣವಾಯ್ತು. ಹೀಗಾಗಿ ಅಲ್ಲಿ ಕಾರುಗಳ ಉತ್ಪಾದನೆ ಸಾಧ್ಯವಾಗಲಿಲ್ಲ.

ಸತತ ಕಾನೂನು ಹೋರಾಟದ ಬಳಿಕ 2023ರಲ್ಲಿ ಸಿಂಗೂರು ಕಾರ್ಖಾನೆಯನ್ನು ಕೈಬಿಟ್ಟದ್ದಕ್ಕೆ ಟಾಟಾ ಮೋಟಾರ್ಸ್‌ಗೆ ಪರಿಹಾರ ದೊರೆಯಿತಾದರೂ, ಇದರಿಂದ ಆರ್ಥಿಕ ಅಭಿವೃದ್ಧಿಯ ಒಂದು ಅವಕಾಶ ಪಶ್ಚಿಮ ಬಂಗಾಳದ ಕೈತಪ್ಪಿತು. ನ್ಯಾನೋಗೆ ಹೊಸ ನೆಲೆ: ಅತ್ತ ನರೇಂದ್ರ ಮೋದಿಯವರು ಗುಜರಾತ್‌ನ ಸಿಎಂ ಆಗಿದ್ದ ಸಂದರ್ಭದಲ್ಲಿ ಟಾಟಾ ಮೋಟಾರ್ಸ್‌ಗೆ ಹೊಸ ನೆಲೆ ಲಭಿಸಿತು. ಅಲ್ಲಿನ ಸಾಣಂದ್‌ ಎಂಬಲ್ಲಿ ಸರ್ಕಾರದಿಂದ ದೊರೆತ ೧,೧೦೦ ಎಕರೆ ಭೂಮಿಯಲ್ಲಿ 2 ಸಾವಿರ ಕೋಟಿ ಹೂಡಿಕೆಯೊಂದಿಗೆ ತಲೆಯೆತ್ತಿದ ನ್ಯಾನೋ ಯೋಜನೆ ಬೆಳವಣಿಗೆ ಕಂಡು, ರಾಜ್ಯದ ಆರ್ಥಿಕತೆಗೂ ವೇಗ ಕಲ್ಪಿಸಿತು. ಹೀಗೆ ಪ.ಬಂಗಾಳದಲ್ಲಿ ಮುದುರಿದ ‘ನ್ಯಾನೋ’ ಕನಸು ಗುಜರಾತ್‌ನಲ್ಲಿ ಚಿಗುರಿತು, ಬೆಳೆಯಿತು.

  ಕನಸಿನ ಕಾರು ಮಾರುಕಟ್ಟೆಗೆ ಬಿಡುಗಡೆ

ಸತತ ಸಂಘರ್ಷ ಹಾಗೂ ಛಲದ ಫಲವಾಗಿ 2009ರ ಮಾರ್ಚ್‌ 23ರಂದು ಮೊದಲ ಟಾಟಾ ನ್ಯಾನೋ ಕಾರು ಮಾರುಕಟ್ಟೆಗೆ ಪ್ರವೇಶಿಸಿತು. ತನ್ನ ನಾವೀನ್ಯತೆ ಹಾಗೂ ಕೈಗೆಟುಕುವ ದರದಿಂದಲೇ ಅದು ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಮೊದಮೊದಲು ನ್ಯಾನೋಗೆ ನಿರೀಕ್ಷಿಸಿದ್ದ ಸಫಲತೆ ದೊರಕಲಿಲ್ಲ. ಕಾರಣ, ಕಾರುಗಳನ್ನು ಅಗತ್ಯತೆ ಎಂದು ಪರಿಗಣಿಸಿದ್ದ ಟಾಟಾ ಅದನ್ನು ಅನ್ಯ ಕಾರುಗಳಂತೆ ಐಷಾರಾಮಿಯಾಗಿ ನಿರ್ಮಿಸಲಿಲ್ಲ. ನ್ಯಾನೋವನ್ನು ಕಡಿಮೆ ಬೆಲೆಯ ಕಾರೆಂದು ಬಿಂಬಿಸುವ ಮೂಲಕ ಅದರ ಖರೀದಿಯನ್ನು ಉತ್ತೇಜಿಸುವುದು ಟಾಟಾದ ತಂತ್ರವಾಗಿತ್ತಾದರೂ, ಜನ ಅಗ್ಗದ ವಸ್ತುವೆಂಬ ಹಣೆಪಟ್ಟಿ ಹೊತ್ತ ಕಾರನ್ನು ಹೊಂದಲು ಬಯಸಲಿಲ್ಲ.

ಈ ಎಲ್ಲಾ ಕಾರಣಗಳಿಂದ ನ್ಯಾನೋ ಕಾರುಗಳ ಮಾರಾಟ ಕುಸಿತ ಕಂಡಿತು. ಆದರೂ 2018ರ ವೇಳೆಗೆ 2.75 ಲಕ್ಷ ಕಾರುಗಳು ಮಾರಾಟವಾಗಿದ್ದವು. ಈ ಮೂಲಕ ಟಾಟಾ ನ್ಯಾನೋ ಸಂಘರ್ಷದ ಹಾದಿಯ ಮೂಲಕ ಸಫಲತೆಯನ್ನು ತಲುಪಿತು.

ದುರಾದೃಷ್ಟವಶಾತ್‌ ವರ್ಷ ಕಳೆದಂತೆ ನ್ಯಾನೋ ಕಾರುಗಳ ಮಾರಾಟ ಕುಂಠಿತವಾದ ಕಾರಣ 2020ರಲ್ಲಿ ಅದರ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು.

21 ವರ್ಷ ಟಾಟಾ ಸಮೂಹದ ಸಾರಥ್ಯ ವಹಿಸಿದ್ದ ರತನ್‌ - 1991ರಲ್ಲಿ ಟಾಟಾ ಗ್ರೂಪ್ಸ್‌ ಅಧ್ಯಕ್ಷರಾಗಿ ನೇಮಕ । 2012ರಲ್ಲಿ ಪದತ್ಯಾಗ

- ನ್ಯಾನೋ, ಇಂಡಿಕಾ ಕಾರು ಪರಿಕಲ್ಪನೆಯಲ್ಲಿ ರತನ್‌ರದ್ದೇ ಪ್ರಮುಖ ಪಾತ್ರ ರತನ್‌ ಟಾಟಾ ಅವರು 1962ರಲ್ಲಿ ಟಾಟಾ ಸ್ಟೀಲ್‌ ಡಿವಿಜನ್‌ನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅವರ ದುಡಿಮೆಯನ್ನು ಗುರುತಿಸಿ 9 ವರ್ಷಗಳ ನಂತರ ಅವರನ್ನು ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿ ಲಿಮಿಟೆಡ್‌ (ಎನ್‌ಇಎಲ್‌ಸಿಒ) ಗೆ ನಿರ್ದೇಶಕರನ್ನಾಗಿ ನೇಮಿಸಲಾಯಿತು. ನಂತರ 1977ರಲ್ಲಿ ಅಳಿವಿನಂಚಿನಲ್ಲಿದ್ದ ಟಾಟಾ ಗ್ರೂಪ್‌ನ ಜವಳಿ ಕಾರ್ಖಾನೆಯಾದ ‘ಎಂಪ್ರೆಸ್‌ ಮಿಲ್ಸ್‌’ಗೆ ಸ್ಥಳಾಂತರ ಗೊಳಿಸಲಾಯಿತು. ಕಾರ್ಖಾನೆಯನ್ನು ಮೇಲೆತ್ತಲು ಅವರು ರೂಪಿಸಿದ್ದ ಯೋಜನೆ ಟಾಟಾ ಅಧಿಕಾರಿಗಳಿಗೆ ಇಷ್ಟವಾಗದ ಕಾರಣ ಅದನ್ನು ತಿರಸ್ಕರಿಸಿ ಮಿಲ್ಸ್‌ಅನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿದ್ದರು. 1991ರಲ್ಲಿ ಜಹಂಗೀರ್‌ ರತನ್‌ ಜೀ ದಾದಾಭಾಯ್‌ (ಜೆಆರ್‌ಡಿ) ಟಾಟಾ ಅವರು ಟಾಟಾ ಸನ್ಸ್‌ನ ಅಧ್ಯಕ್ಷ ಸ್ಥಾನವನ್ನು ತೊರೆದು, ರತನ್‌ ಟಾಟಾ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು. ಅಲ್ಲಿಂದ 2012ರ ವರೆಗೆ ಅಂದರೆ 21 ವರ್ಷಗಳ ಕಾಲ ಟಾಟಾ ಸನ್ಸ್‌ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದರು.

ನ್ಯಾನೋ, ಇಂಡಿಕಾ ಕಾರು: ಇವರ ಅಧಿಕಾರವಧಿಯಲ್ಲಿ ಪ್ರಮುಖವಾಗಿ ಟಾಟಾ ನ್ಯಾನೋ ಹಾಗೂ ಟಾಟಾ ಇಂಡಿಕಾ ಕಾರುಗಳ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಅವುಗಳನ್ನು ನಿರ್ಮಾಣ ಮಾಡುವ ಹಂತದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

ರತನ್‌ ಟಾಟಾ ಅವರ 75ನೇ ಹುಟ್ಟುಹಬ್ಬದಂದು ಅಂದರೆ 2012 ಡಿ.28 ರಂದ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇವರ ನಂತರ ಶಾಪೂರ್ಜಿ ಪಲ್ಲೋಂಜಿ ಸಮೂಹದ ನಿರ್ದೇಶಕರಾದ ಸೈರಸ್‌ ಮಿಸ್ತ್ರಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. 2016ರ ಅ.24ರಂದು ಸೈರಸ್‌ ಮಿಸ್ತ್ರಿಯನ್ನು ಟಾಟಾ ಗ್ರೂಪ್ಸ್‌ನ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಮತ್ತೆ ರತನ್‌ ಟಾಟಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 2017 ಜ.12 ರಂದು ನಟರಾಜನ್ ಚಂದ್ರಶೇಖರನ್ ಅವರನ್ನು ಟಾಟಾ ಗ್ರೂಪ್ಸ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ಸೃಷ್ಟಿ: 21 ವರ್ಷಗಳ ಕಾಲ ಟಾಟಾ ಗ್ರೂಪ್ಸ್‌ ಅನ್ನು ಮುನ್ನಡೆಸಿದ ರತನ್‌ ಟಾಟಾ ಅವರು ಕಂಪನಿಯ ಆದಾಯವನ್ನು 40 ಪಟ್ಟು ಹಾಗೂ ಲಾಭವನ್ನು 50 ಪಟ್ಟು ಹೆಚ್ಚಳ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಟಾ ಕಂಪನಿಯ ಬ್ರಾಂಡ್ ಸೃಷ್ಟಿ ಮಾಡಿದ್ದರು. ಟಾಟಾ ಟೀ ಕಂಪನಿ ಬ್ರಿಟನ್‌ನ ಹೆಸರಾಂತ ಟೀ ಪೌಡರ್‌ ಉತ್ಪಾದಕ ಕಂಪನಿಯಾದ ಟೆಟ್ಲಿ, ಟಾಟಾ ಮೋಟರ್ಸ್‌ ಜಾಗ್ವಾರ್‌, ಲ್ಯಾಂಡ್‌ ರೋವರ್‌ ಕಂಪನಿಗಳ ಹಾಗೂ ಟಾಟಾ ಸ್ಟೀಲ್‌ ಕಂಪನಿ ಕೋರಸ್‌ ಸ್ಟೀಲ್‌ ಕಂಪನಿಯನ್ನು ಖರೀದಿ ಮಾಡಿತ್ತು. ಪ್ರಮುಖವಾಗಿ ಬ್ರಾಂಡ್‌ ಮೂಲಕ ತನ್ನ ಉತ್ಪನ್ನಗಳನ್ನು ಮಾರಾಟ ಆಗುವಂತೆ ಮಾಡಿದ್ದ ರತನ್‌ ಟಾಟಾ ಅವರು, ಶೇ.65 ರಷ್ಟು ಆದಾಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪಾದಿಸುತ್ತಿದ್ದರು.

 ಮೊದಲ ಉದ್ಯಮದಲ್ಲಿ ಜಯಭೇರಿ

ರತನ್‌ ಟಾಟಾ ಅವರು ಕೈ ಹಾಕಿದ್ದ ಮೊದಲ ಉದ್ಯಮದಲ್ಲಿ ಜಯಭೇರಿ ಬಾರಿಸಿದ್ದರು. ಟಾಟಾ ಸಮೂಹದ ದಿ ನ್ಯಾಷನಲ್‌ ರೇಡಿಯೋ ಮತ್ತು ಎಲೆಕ್ಟ್ರಾನಿಕ್‌ ಕಂಪನಿ ಲಿಮಿಟೆಡ್‌ ಅಳಿವಿನಂಚಿನಲ್ಲಿತ್ತು. ಆಗಿನ ಟಾಟಾ ಗ್ರೂಪ್‌ ಅಧ್ಯಕ್ಷರಾಗಿದ್ದ ಜೆಆರ್‌ಡಿ ಟಾಟಾ ಅವರು ಕಂಪನಿಯ ಪುನಶ್ಚೇತನದ ಆಸೆಯನ್ನು ಬಿಟ್ಟಿದ್ದರು. ಅಂತಹ ಸಂದರ್ಭದಲ್ಲಿ ಅಂದರೆ 1971ರಲ್ಲಿ ರತನ್‌ ಟಾಟಾ ಅವರು ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿ ಲಿಮಿಟೆಡ್‌ (ಎನ್‌ಇಎಲ್‌ಸಿಒ) ಗೆ ನಿರ್ದೇಶಕರಾಗಿ ನೇಮಕಗೊಂಡರು.

ಕಂಪನಿಯ ಸಾಂಪ್ರದಾಯಿಕ ಪದ್ಧತಿಗಳಿಗೆ ಅಂಟಿಕೊಂಡು ಕುಳಿತುಕೊಳ್ಳದ ಅವರು ಆಧುನಿಕ ಹಾಗೂ ಉನ್ನತ ತಂತ್ರಜ್ಞಾನ ಹೊಂದಿದ ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ತಯಾರಿಸಲು ಕೈ ಹಾಕಿದರು. ಇದರಿಂದ ಎನ್‌ಇಎಲ್‌ಸಿಒ ಕ್ರಮೇಣವಾಗಿ ಚೇತರಿಕೆ ಕಂಡಿತು. ರತನ್ ಟಾಟಾ ಅವರು ಬರುವ ಮುನ್ನ ಶೇ.2ರಷ್ಟಿದ್ದ ಕಂಪೆನಿಯ ಮಾರುಕಟ್ಟೆ ಶೇರು ಶೇ.30ಕ್ಕೇರಿತು. ಕಂಪೆನಿ ನಷ್ಟದ ಭಯದಿಂದ ಆಚೆ ಬಂದಿತ್ತು. ಬಳಿಕ 1975ರ ತುರ್ತು ಪರಿಸ್ಥಿತಿಯಿಂದಾಗಿ ಕಂಪೆನಿ ವಹಿವಾಟಿನಲ್ಲಿ ಆರ್ಥಿಕ ಹಿನ್ನಡೆ ಕಂಡುಬಂದಿತು. ಸಮಸ್ಯೆ ಅರ್ಥ ಮಾಡಿಕೊಳ್ಳದ ಕಾರ್ಮಿಕ ಒಕ್ಕೂಟ ಧರಣಿಯಲ್ಲಿ ನಿರತವಾಯಿತು. ಉತ್ಪಾದನೆ ಸ್ಥಗಿತವಾಯಿತು. ಬಳಿಕ ವಿಧಿಯಿಲ್ಲದೇ ಕಂಪನಿಯನ್ನು ಮುಚ್ಚಬೇಕಾಯಿತು.

4 ಬಾರಿ ಮದುವೆ ಚಾನ್ಸ್‌ ಮಿಸ್‌ ಮಾಡಿಕೊಂಡಿದ್ದ ರತನ್‌ ಸಾವಿರಾರು ಕೋಟಿ ಉದ್ಯಮ ಕಟ್ಟಿದ್ದರೂ ವಿವಾಹ ಭಾಗ್ಯ ಸಿಗಲಿಲ್ಲ

ಬಾಲಿವುಡ್‌ ನಟಿ ಜೊತೆಗಿನ ವಿವಾಹವೂ ಕಡೇ ಹಂತದಲ್ಲಿ ರದ್ದು! ರತನ್‌ ಟಾಟಾ ದೇಶ ಕಂಡ ಅದ್ಭುತ, ಅಪ್ರತಿಮ ಉದ್ಯಮಿ. ಟಾಟಾ ಸಮೂಹವನ್ನು ಸಾವಿರಾರು ಕೋಟಿ ಉದ್ಯಮವಾಗಿ, ಅದನ್ನು ಜಾಗತಿಕ ಬ್ರ್ಯಾಂಡ್‌ ಆಗಿ ಪರಿವರ್ತಿಸುವಲ್ಲಿ ರತನ್‌ ಪರಿಶ್ರಮ ಅಪರಿಮಿತ. ಆದರೆ ಅವರಿಗೆ ಅದ್ಯಾಕೋ ವಿವಾಹ ಭಾಗ್ಯ ಒದಗಿ ಬರಲೇ ಇಲ್ಲ.

ಮಾಧ್ಯಮಗಳಿಂದ ಸದಾ ದೂರವೇ ಇರುತ್ತಿದ್ದ ರತನ್‌ ಟಾಟಾ, ತಮ್ಮ ಆಪ್ತ ಸಂಗತಿಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದು ಬಹುಕಡಿಮೆ. ಅಪರೂಪಕ್ಕೆ ಒಂದೆರೆಡು ಬಾರಿ ತಮ್ಮ ವಿವಾಹದ ವಿಷಯದ ಕುರಿತು ಅವರು ಬಹಿರಂಗವಾಗಿ ಮಾತನಾಡಿದ್ದರು. ಕನಿಷ್ಠ 4 ಬಾರಿ ವಿವಾಹದ ಸಮೀಪಕ್ಕೆ ಹೋಗಿದ್ದೆ. ಆದರೆ ಪ್ರತಿ ಬಾರಿಯೂ ನಾನೇ ಹೆದರಿಕೊಂಡು ವಿವಾಹದಿಂದ ಹಿಂದೆ ಸರಿದೆ. ಹೀಗಾಗಿ ಮದುವೆ ಅವಕಾಶ ತಪ್ಪಿಹೋಯ್ತು ಎಂದು ನಗುನಗುತ್ತಲೇ ಉತ್ತರಿಸಿದ್ದರು ರತನ್‌.

ನಟಿ ಜೊತೆ ಪ್ರೇಮ:

ಬಾಲಿವುಡ್‌ ನಟಿ, ಮಾಡೆಲ್‌ ಸಿಮಿ ಗರೇವಾಲ್‌ ಮತ್ತು ರತನ್‌ ಟಾಟಾ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ 70-80ರ ದಶಕದಲ್ಲಿ ದೊಡ್ಡದಾಗಿ ಹಬ್ಬಿತ್ತು. ಆದರೆ ಇಬ್ಬರೂ ಎಲ್ಲಿಯೂ ಈ ವಿಷಯವನ್ನು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ ಮತ್ತು ಪ್ರತಿಕ್ರಿಯೆಯನ್ನೂ ನೀಡಲಿರಲಿಲ್ಲ. ಆದರೆ ಸಂದರ್ಶನವೊಂದರಲ್ಲಿ ಸ್ವತಃ ಸಿಮಿ ರತನ್‌ ಟಾಟಾ ಅವರನ್ನು ಬಹುವಾಗಿ ಹೊಗಳಿದ್ದರು. ‘ನಮ್ಮಿಬ್ಬರದ್ದು ಸುದೀರ್ಘ ಇತಿಹಾಸವಿದೆ. ಅವರೊಬ್ಬ ಪರಿಪೂರ್ಣ ವ್ಯಕ್ತಿ. ಅವರೆಂದೂ ದುಡ್ಡಿನ ಹಿಂದೆ ಬಿದ್ದಿರಲಿಲ್ಲ’ ಎಂದು ಹೇಳಿದ್ದರು.

ಸಾಧಕನ ಹುಡುಕಿ ಬಂದಿದ್ದ ಅಗಣಿತ ಪ್ರಶಸ್ತಿಗಳು ರತನ್‌ ಟಾಟಾಗೆ ಪದ್ಮವಿಭೂಷಣ ಸೇರಿ ಹಲವು ಗೌರವ

ರತನ್ ಟಾಟಾರವರು ಪ್ರಧಾನಮಂತ್ರಿ ನೇತೃತ್ವದ ವಾಣಿಜ್ಯ ಮತ್ತು ಕೈಗಾರಿಕಾ ಸಮಿತಿಯ ಸದಸ್ಯರಾಗಿದ್ದರು. ಉದ್ಯಮ ವಲಯದಲ್ಲಿನ ಅಮೋಘ ಸೇವೆ ಗುರುತಿಸಿ ರತನ್‌ರಿಗೆ ದೇಶ ವಿದೇಶಗಳಿಂದ ಅನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.

-2000ರ ಜನವರಿ 26ರ ಗಣರಾಜ್ಯೋತ್ಸವದಂದು ಭಾರತದ 3ನೇ ಉನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಪ್ರದಾನ

-2008ರಲ್ಲಿ ಭಾರತ ಸರ್ಕಾರದಿಂದ 2ನೇ ದೊಡ್ಡ ನಾಗರಿಕ ಪ್ರಶಸ್ತಿ ಪದ್ಮವಿಭೂಷಣಕ್ಕೆ ಭಾಜನ

-2004ರಲ್ಲಿ ಚೀನಾ ದೇಶದಿಂದ ಗೌರವಾನ್ವಿತ ಆರ್ಥಿಕ ಸಲಹೆಗಾರ ಪ್ರಶಸ್ತಿ.

-2004ರಲ್ಲಿ ಬಂಡವಾಳ ಕ್ಷೇತ್ರದಲ್ಲಿ ನಿರ್ವಹಿಸುವ ಜವಾಬ್ದಾರಿಯುತ ಸೇವೆಗಾಗಿ ನೀಡುವ ಲಂಡನ್‌ನ ‘ಫಸ್ಟ್‌’ ಪ್ರಶಸ್ತಿ.

-2006ರಲ್ಲಿ ಅಮೆರಿಕದ ಕಾರ್ನೆಲ್ ವಿವಿ ಸಹಕಾರ ಕ್ಷೇತ್ರದಲ್ಲಿ ನೀಡುವ ರಾಬರ್ಟ್ ಹಾಟ್‌ಫೀಲ್ಡ್‌ ಫೆಲೋಶಿಪ್ ಗೌರವ.

-2007ರ ನವೆಂಬರ್‌ನ ಫಾರ್ಚೂನ್ ಮ್ಯಾಗಝೀನ್‌ನಲ್ಲಿ ವಿಶ್ವದ 25 ಅತಿ ಬಲಾಢ್ಯ ವಾಣಿಜ್ಯೋದ್ಯಮಿಗಳ ಪಟ್ಟಿಯಲ್ಲಿ ಸ್ಥಾನ.

-2008ರ ಮೇನಲ್ಲಿ ಇನ್ನೊಂದು ವಿಶ್ವ ಪತ್ರಿಕೆ ಟೈಂ ಮ್ಯಾಗಝೀನ್‌ನಲ್ಲಿ ಆ ವರ್ಷದ ವಿಶ್ವದ 100 ಹೆಚ್ಚು ಪ್ರಭಾವಿ ಜನರ ಪಟ್ಟಿಯಲ್ಲಿ ಸ್ಥಾನ (ನ್ಯಾನೋ ಕಾರು ಉತ್ಪಾದನೆಗಾಗಿ ಪರಿಗಣನೆ)

-2008ರಲ್ಲಿ ಹೈಟೆಕ್ ವಲಯದ ಸೇವೆಗಾಗಿ ಸಿಂಗಪುರ ಸರ್ಕಾರದಿಂದ ಗೌರವಾನ್ವಿತ ಪೌರತ್ವ ಸ್ಥಾನ. (ಈ ಪ್ರಶಸ್ತಿ ಸ್ವೀಕರಿಸಿದ ಮೊದಲ ಭಾರತೀಯ)

-2009ರಲ್ಲಿ ಬ್ರಿಟನ್‌ನಿಂದ ಪ್ರತಿಷ್ಠಿತ ‘ನೈಟ್ ಕಮಾಂಡರ್ ಆಫ್‌ ದ ಬ್ರಿಟಿಷ್ ಎಂಪೈರ್’ ಪ್ರಶಸ್ತಿ. (ಈ ಪ್ರಶಸ್ತಿ ಪಡೆದವರ ಹೆಸರಿನ ಹಿಂದೆ ಗೌರವವಾಗಿ ‘ಸರ್’ ಎಂಬ ಪದವನ್ನು ಪ್ರಯೋಗಿಸಲಾಗುತ್ತದೆ.)

-ಇದಲ್ಲದೇ ಓಹಿಯೋ ದೇಶದ ಸಂಶೋಧನಾ ವಿವಿ, ಬ್ಯಾಂಕಾಕ್‌ನ ಏಷಿಯನ್ ಇನ್ಸ್‌ಟಿಟ್ಯೂಟ್ ಆಫ್‌ ಟೆಕ್ನಾಲಜಿ ಹಾಗೂ ಇಂಗ್ಲೆಂಡ್‌ನ ವಾರ್‌ವಿಕ್ ವಿವಿಗಳಿಂದ ಡಾಕ್ಟರೇಟ್ ಗೌರವಕ್ಕೆ ಭಾಜನರಾಗಿದ್ದಾಾರೆ.

- ರತನ್ ಟಾಟಾ ಜಗತ್ತಿನ 30 ಅತ್ಯಂತ ಪ್ರಭಾವಿ ವಾಣಿಜ್ಯೋದ್ಯಮಿಗಳಲ್ಲಿ ಒಬ್ಬರೆಂದು ಇಂಗ್ಲೆಂಡ್ ಮೂಲದ ಇ-ಮ್ಯಾಗಝೀನ್ ಕಾಂಟ್ರಾಕ್ಟ್‌ ಜನರಲ್ ಮಾಡಿದ ಸರ್ವೆಯಿಂದ ತಿಳಿಯುತ್ತದೆ.

 ಹಲವು ವಿದೇಶಿ ಉದ್ಯಮ ಸಂಸ್ಥೆಗಳು, ವಿವಿಗಳಿಂದಲೂ ರತನ್‌ಗೆ ಗೌರವ ವಿದೇಶಿ ನೆಲದಲ್ಲೂ ಭಾರತದ ಪುತ್ರ ರತನ್ ಟಾಟಾರಿಗೆ ಉನ್ನತ ಸ್ಥಾನಮಾನ ನೀಡಲಾಗಿತ್ತು. ಟಾಟಾ ಹಲವು ವಿದೇಶಿ ಸಂಸ್ಥೆಗಳೊಂದಿಗೆ ಸ್ನೇಹಯುತ ಸಂಬಂಧ ಹೊಂದಿದ್ದರು.ಉದ್ಯಮ ವಲಯದಲ್ಲಿ ರತನ್‌ರ ಸಾಧನೆ ಕಂಡು ಹಲವು ಪ್ರತಿಷ್ಠಿತ ಸಂಸ್ಥೆಗಳು ಅವರನ್ನು ತಮ್ಮ ಹಲವು ಸಮಿತಿಗಳಲ್ಲಿ ಉನ್ನತ ಸ್ಥಾನ ನೀಡಿ ಗೌರವಿಸಿದ್ದವು. ರತನ್ ಟಾಟಾ ಕೆಲವು ಉನ್ನತ ವಿದೇಶಿ ಸಂಸ್ಥೆಗಳ ಅಂತರಾಷ್ಟ್ರೀಯ ಸಲಹಾ ಮಂಡಳಿಯಲ್ಲಿ ಸದಸ್ಯರಾಗಿ ಗೌರವಿಸಲ್ಪಟ್ಟಿದ್ದರು. ಅವೆಂದರೆ,

- ಜಪಾನಿನ ಮಿಟ್ಸುಬಿಷಿ ಕಾರ್ಪೊರೇಷನ್,

- ಅಮೆರಿಕದ ಇನ್ಯೂರೆನ್ಸ್‌ ಸಂಸ್ಥೆಯಾದ ಅಮೆರಿಕನ್ ಇಂಟರ್‌ನ್ಯಾಷನಲ್ ಗ್ರೂಪ್,

- ವಿಶ್ವದ ಅತಿ ಹಳೆಯ ಹಣಕಾಸು ವಿಲೇವಾರಿ ಸಂಸ್ಥೆ ಹಾಗೂ

- ಬೂಝ್ ಅಲೆನ್ ಹ್ಯಾಮಿಲ್ಟನ್ ಕನ್ಸಲ್ಟಿಂಗ್ ಸಂಸ್ಥೆ.

ಇದಲ್ಲದೇ ರತನ್ ಟಾಟಾರವರು ಯೂನಿವರ್ಸಿಟ್ ಆಫ್‌ ಸದರ್ನ್‌ ಕ್ಯಾಲಿಫೋರ್ನಿಯಾ (2005ರಲ್ಲಿ), ಪ್ರತಿಷ್ಠಿತ ಆಲ್ಮಾ ಮ್ಯಾಟರ್ ಶಿಕ್ಷಣ ಸಮೂಹ ಹಾಗೂ ನ್ಯೂಯಾರ್ಕ್‌ನ ಕಾರ್ನೆಲ್ ಯೂನಿವರ್ಸಿಟಿಗಳಂತಹ ಅತ್ಯುನ್ನತ ವಿವಿಗಳ ಮಂಡಳಿಗಳಲ್ಲಿ ಗೌರವಾನ್ವಿತ ಟ್ರಸ್ಟೀ ಆಗಿದ್ದರು.

ಅಷ್ಟೇ ಅಲ್ಲ ಸೌತ್ ಆಫ್ರಿಕಾ ಗಣರಾಜ್ಯದ ಅಂತರಾಷ್ಟ್ರೀಯ ಬಂಡವಾಳ ಸಮಿತಿ ಸದಸ್ಯ ಹಾಗೂ ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದ ಏಷ್ಯಾ ಪೆಸಿಫಿಕ್ ಭಾಗದ ಸಲಹಾ ಸಮಿತಿ ಸದಸ್ಯರಾಗಿದ್ದರು.

Share this article