ರೆಪೋ ದರ ಶೇ.0.25 ಕಡಿತ : ಬ್ಯಾಂಕ್‌ ಬಡ್ಡಿದರ ಮತ್ತಷ್ಟು ಅಗ್ಗ

KannadaprabhaNewsNetwork |  
Published : Dec 06, 2025, 02:00 AM IST
RBI Repo Rate Cut

ಸಾರಾಂಶ

ಅಮೆರಿಕದ ಸುಂಕ ಏರಿಕೆಯ ಬಿಸಿ ಅನುಭವಿಸುತ್ತಿರುವ ಭಾರತೀಯ ಆರ್ಥಿಕತೆಗೆ ಉತ್ತೇಜನ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಸಾಲದ ಮೇಲಿನ ಬಡ್ಡಿದರ ಅಥವಾ ರೆಪೋದರವನ್ನು 25 ಅಂಕಗಳಷ್ಟು ಕಡಿತಗೊಳಿಸಿದೆ.

ಮುಂಬೈ: ಅಮೆರಿಕದ ಸುಂಕ ಏರಿಕೆಯ ಬಿಸಿ ಅನುಭವಿಸುತ್ತಿರುವ ಭಾರತೀಯ ಆರ್ಥಿಕತೆಗೆ ಉತ್ತೇಜನ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಸಾಲದ ಮೇಲಿನ ಬಡ್ಡಿದರ ಅಥವಾ ರೆಪೋದರವನ್ನು 25 ಅಂಕಗಳಷ್ಟು ಕಡಿತಗೊಳಿಸಿದೆ.

ಈ ನಿರ್ಧಾರದಿಂದ ಗೃಹ, ವಾಹನ ಮತ್ತು ವಾಣಿಜ್ಯ ಸಾಲದ ಮೇಲಿನ ಬಡ್ಡಿದರ ಇನ್ನಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ. ಆದರೆ ಇದೇ ವೇಳೆ ಠೇವಣಿ ಮೇಲಿನ ಬಡ್ಡಿದರ ಕೂಡ ಕಡಿತವಾಗಲಿದೆ. ಇದರ ಬೆನ್ನಲ್ಲೇ ಬ್ಯಾಂಕ್‌ ಆಫ್‌ ಬರೋಡಾ ಸಾಲದ ಬಡ್ಡಿದರ ಕಡಿತ ಘೋಷಣೆ ಮಾಡಿದೆ.

ಬಡ್ಡಿದರವನ್ನು ಶೇ.5.50ರಿಂದ ಶೇ.5.25ಕ್ಕೆ ಇಳಿಸಲು ಸರ್ವಾನುಮತ

ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ನೇತೃತ್ವದ ವಿತ್ತೀಯ ನೀತಿ ಸಮಿತಿ (ಎಂಪಿಸಿ) ತನ್ನ ಐದನೇ ದ್ವೈಮಾಸಿಕ ಸಭೆಯಲ್ಲಿ ಅಲ್ಪಾವಧಿ ಸಾಲದ ಮೇಲಿನ ಬಡ್ಡಿದರವನ್ನು ಶೇ.5.50ರಿಂದ ಶೇ.5.25ಕ್ಕೆ ಇಳಿಸಲು ಸರ್ವಾನುಮತದಿಂದ ನಿರ್ಧರಿಸಿದೆ. ಈ ಮೂಲಕ ಕಳೆದ 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ರೆಪೋದರ ಕಡಿತಗೊಂಡಂತಾಗಿದೆ.

ಜೂನ್‌ನಲ್ಲಿ ಅಲ್ಪಾವಧಿ ಸಾಲದ ಮೇಲಿನ ಬಡ್ಡಿದರವನ್ನು ಕಡಿತ

ಈ ಹಿಂದೆ ಕೊನೆಯ ಬಾರಿ ಜೂನ್‌ನಲ್ಲಿ ಅಲ್ಪಾವಧಿ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲಾಗಿತ್ತು. ವಿತ್ತೀಯ ನೀತಿ ಸಮಿತಿ (ಎಂಪಿಸಿ) ಶಿಫಾರಸು ಆಧರಿಸಿ ಆರ್‌ಬಿಐ ಫೆಬ್ರವರಿ ಮತ್ತು ಏಪ್ರಿಲ್‌ನಲ್ಲಿ ತಲಾ 25 ಅಂಕಗಳು ಮತ್ತು ಜೂನ್‌ನಲ್ಲಿ 50 ಅಂಕಗಳಷ್ಟು ಬಡ್ಡಿದರ ಕಡಿತಗೊಳಿಸಿತ್ತು. ಈ ಮೂಲಕ ಚಿಲ್ಲರೆ ಹಣದುಬ್ಬರ ನಿಯಂತ್ರಣಕ್ಕೆ ನೆರವಾಗಿತ್ತು.

ಸಾಲಗಾರರಿಗೆ ಅನುಕೂಲ,ಹೂಡಿಕೆದಾರರಿಗೆ ಬೇಸರಆರ್‌ಬಿಐನ ಬಡ್ಡಿದರ ಕಡಿತದಿಂದ ಸಾಲಗಾರರು ಖುಷಿಯಾಗಿದ್ದಾರೆ. ರೆಪೋದರ ಕಡಿತದಿಂದ ಗೃಹ, ವಾಣಿಜ್ಯ, ಆಟೋ ಸಾಲಗಳ ಮೇಲಿನ ಬಡ್ಡಿ ಕಡಿತಗೊಳ್ಳುವ ನಿರೀಕ್ಷೆ ಇದೆ. ಒಂದು ವೇಳೆ ಯಾವುದೇ ವ್ಯಕ್ತಿ ಶೇ.8.5 ಬಡ್ಡಿದರದಲ್ಲಿ 15 ವರ್ಷಗಳ ಅವಧಿಗೆ 25 ಲಕ್ಷ ಸಾಲ ಪಡೆದಿದ್ದರೆ, ಬ್ಯಾಂಕುಗಳೇನಾದರೂ ಶೇ.0.25ರಷ್ಟು ಬಡ್ಡಿ ಕಡಿತ ಮಾಡಿದರೆ ವಾರ್ಷಿಕ ಶೇ.65 ಸಾವಿರ ರು.ನಷ್ಟು ಉಳಿತಾಯವಾಗಲಿದೆ. ಇದೇ ರೀತಿ ನಿಶ್ಚಿತ ಠೇವಣಿ, ಉಳಿತಾಯ ಠೇವಣಿಯ ಬಡ್ಡಿದರವೂ ಕಡಿತಗೊಂಡರೆ ಹೂಡಿಕೆದಾರರ ವಾರ್ಷಿಕ ಬಡ್ಡಿ ಆದಾಯ ಇಳಿಕೆಯಾಗಲಿದೆ.

ಆರ್‌ಬಿಐ ವಿತ್ತ ನೀತಿಯ ಪ್ರಮುಖ ಅಂಶಗಳು- ರೆಪೋ ದರ 25 ಅಂಕ ಕಡಿತ. ಈ ಮೂಲಕ ಒಟ್ಟಾರೆ ರೆಪೋದರ ಶೇ.5.25ಕ್ಕೆ ಇಳಿಕೆ.- 2026ನೇ ವಿತ್ತೀಯ ವರ್ಷದ ಆರ್ಥಿಕ ಬೆಳವಣಿಗೆ ದರ ಶೇ.6.8ರಿಂದ ಶೇ.7.3ಕ್ಕೆ ಪರಿಷ್ಕರಣೆ

- ಹಣದುಬ್ಬರದ ಅಂದಾಜು ಶೇ.2.6ರಿಂದ ಶೇ.2ಕ್ಕೆ ಪರಿಷ್ಕರಣೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

150 ದೇಶಗಳಿಗೆ ಭಾರತದ ಇಂಧನ : ಮೋದಿ
ಯುಜಿಸಿಯ ತಾರತಮ್ಯ ತಡೆ ಸಮಿತಿ : ಜನರಲ್‌ ವರ್ಗ ಕಿಡಿ