ಯುಪಿಐಗೆ ಬಳಕೆದಾರರ ಶುಲ್ಕ: ಆರ್‌ಬಿಐ ಸುಳಿವು

Published : Jul 28, 2025, 04:20 AM IST
RBI Logo (File Photo/ANI)

ಸಾರಾಂಶ

ಉಚಿತವಾಗಿ ಲಭ್ಯವಿರುವ ಯುಪಿಐ ವ್ಯವಸ್ಥೆಗೂ ಶುಲ್ಕ ಜಾರಿ ಮಾಡಲಾಗುವುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸುಳಿವು ನೀಡಿದೆ.

ನವದೆಹಲಿ: ಕರ್ನಾಟಕದಲ್ಲಿ ಸಣ್ಣ ವ್ಯಾಪಾರಿಗಳು ಯುಪಿಐ ಮೂಲಕ ಸ್ವೀಕರಿಸಿದ ಹಣಕ್ಕೆ ವಾಣಿಜ್ಯ ತೆರಿಗೆ ಇಲಾಖೆ ಜಿಎಸ್ಟಿ ನೋಟಿಸ್‌ ಜಾರಿ ಮಾಡಿದ ವಿಷಯ ಭಾರೀ ಗದ್ದಲಕ್ಕೆ ಕಾರಣವಾಗಿರುವ ಹೊತ್ತಿನಲ್ಲೇ, ಸದ್ಯ ಉಚಿತವಾಗಿ ಲಭ್ಯವಿರುವ ಯುಪಿಐ ವ್ಯವಸ್ಥೆಗೂ ಶುಲ್ಕ ಜಾರಿ ಮಾಡಲಾಗುವುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸುಳಿವು ನೀಡಿದೆ.

ಈ ಕುರಿತು ಕಾರ್ಯಕ್ರಮವೊಂದಲ್ಲಿ ಮಾತನಾಡಿರುವ ಆರ್‌ಬಿಐನ ಗವರ್ನರ್‌ ಸಂಜಯ್‌ ಮಲ್ಹೋತ್ರಾ, ‘ಪಾವತಿ ಮತ್ತು ಹಣ ಆರ್ಥಿಕತೆಯ ಜೀವನಾಡಿ. ಇದಕ್ಕಾಗಿ ನಾವು ಸಾರ್ವತ್ರಿಕವಾಗಿ ಸಶಕ್ತವಾಗಿರುವ ವ್ಯವಸ್ಥೆ ಹೊಂದಿರಬೇಕು. ಸದ್ಯ ನಾವು ಯುಪಿಐ ಸೇವೆಗಳಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಇದಕ್ಕೆ ತಗಲುವ ವೆಚ್ಚವನ್ನು ನಾವು ಬ್ಯಾಂಕ್‌ ಮತ್ತು ವ್ಯವಸ್ಥೆಯ ಇತರೆ ಭಾಗೀದಾರ ಸಂಸ್ಥೆಗಳಿಗೆ ಸಬ್ಸಿಡಿ ನೀಡುವ ಮೂಲಕ ಭರಿಸುತ್ತಿದ್ದೇವೆ. ಯಾವುದೇ ಮಹತ್ವದ ಮೂಲಸೌಕರ್ಯ ಫಲಪ್ರದವಾಗಿರಬೇಕು. ಯಾವುದೇ ವ್ಯವಸ್ಥೆ ನಿಜವಾಗಿಯೂ ಸುಸ್ಥಿರವಾಗಿರಬೇಕಾದರೆ ಅದರ ವೆಚ್ಚವನ್ನು ಎಲ್ಲರೂ ಒಟ್ಟಾಗಿ ಇಲ್ಲವೇ ಬಳಕೆದಾರ ಪಾವತಿಬೇಕು’ ಎಂದು ಹೇಳಿದ್ದಾರೆ.

ಶುಲ್ಕ ಏಕೆ?:

ಯುಪಿಐ ಪಾವತಿ ಅಭೂತಪೂರ್ವ ಯಶಸ್ಸು ಕಂಡಿದೆ. ಅದರೆ ಇದು ವ್ಯವಸ್ಥೆಯನ್ನು ನಿರ್ವಹಿಸುವ ಮೂಲಸೌಕರ್ಯದ ಮೇಲೆ ಭಾರೀ ಒತ್ತಡ ಹೇರಿದೆ. ಈ ಮೂಲಸೌಕರ್ಯವನ್ನು ಬ್ಯಾಂಕ್‌ಗಳು, ಪಾವತಿ ಸೇವಾದಾರರು ಮತ್ತು ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ನಿರ್ವಹಿಸುತ್ತದೆ. ಅಂದರೆ ನಿರ್ವಹಣೆ ವೆಚ್ಚವನ್ನು ಸರ್ಕಾರ ಪೂರ್ಣವಾಗಿ ಭರಿಸುತ್ತಿದೆ.

ಮತ್ತೊಂದೆಡೆ, ‘ಸರ್ಕಾರವು ಶೂನ್ಯ ಮರ್ಚೆಂಟ್‌ ಡಿಸ್ಕೌಂಟ್‌ ದರ ನೀತಿ ಪಾಲಿಸುತ್ತಿದೆ. ಅಂದರೆ ಯುಪಿಐ ವ್ಯವಸ್ಥೆಗೆ ಯಾವುದೇ ಆದಾಯ ಇಲ್ಲ. ಪರಿಣಾಮ ಹಾಲಿ ಜಾರಿಯಲ್ಲಿರುವ ಇಂಥ ವ್ಯವಸ್ಥೆ ದೀರ್ಘಕಾಲ ಆರ್ಥಿಕವಾಗಿ ಸುಸ್ಥಿರವಲ್ಲ ಎಂದು ಈ ಉದ್ಯಮ ವಲಯ ಪದೇ ಪದೇ ಹೇಳುತ್ತಲೇ ಬಂದಿದೆ’ ಎಂದು ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಯುಪಿಐ ವ್ಯವಸ್ಥೆ ಬಳಸಿದ್ದಕ್ಕೆ ಬಳಕೆದಾರರೇ ಶುಲ್ಕ ನೀಡಬೇಕಾಗಿ ಬರಲಿದೆ ಎಂದು ಸುಳಿವು ನೀಡಿದ್ದಾರೆ.

ಮರ್ಚೆಂಟ್‌ ಡಿಸ್ಕೌಂಟ್‌ ಪಾಲಿಸಿ:

ನಾವು ಯಾವುದೇ ಮಳಿಗೆಯಲ್ಲಿ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಿ ಹಣ ಪಾವತಿ ಮಾಡಿದರೆ ಅದಕ್ಕೆ ಬ್ಯಾಂಕ್‌ಗಳು ನಿಗದಿತ ಶುಲ್ಕ ವಿಧಿಸುತ್ತದೆ. 2019ರವರೆಗೂ ರುಪೇ ಡೆಬಿಟ್‌ ಕಾರ್ಡ್‌ ಮತ್ತು ಭೀಮ್‌-ಯುಪಿಐ ಪಾವತಿಗೆ ಶೇ.1ರಿಂದ ಶೇ.3ರಷ್ಟು ಮರ್ಚೆಂಟ್‌ ಡಿಸ್ಕೌಂಟ್‌ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ 2019ರಲ್ಲಿ ಸರ್ಕಾರ ಇದನ್ನು ತೆಗೆದು ಹಾಕಿತ್ತು. ಹೀಗಾಗಿ ಯುಪಿಐ ಪಾವತಿ ಪೂರ್ಣ ಉಚಿತವಾಗಿತ್ತು.

ಬಳಕೆದಾರರ ಶುಲ್ಕ ಎಂದರೇನು?

ಇದು ಪ್ರತಿ ಬಾರಿ ನಾವು ಯುಪಿಐ ಮೂಲಕ ಮಾಡಿದ ಪಾವತಿ ಅಥವಾ ಸ್ವೀಕಾರಕ್ಕೆ ಬಳಸುವ ಶುಲ್ಕ ಅಲ್ಲ. ಬದಲಾಗಿ ಮಾಸಿಕ, 3,6 ಅಥವಾ 12 ತಿಂಗಳಿಗೊಮ್ಮೆ ನಾವು ಯುಪಿಐ ವ್ಯವಸ್ಥೆ ಬಳಕೆ ಮಾಡುತ್ತಿರುವುದಕ್ಕೆ ವಿಧಿಸುವ ಬಳಕೆದಾರರ ಶುಲ್ಕ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ