ನವದೆಹಲಿ: ‘ಪ್ರತಿಭಟನಾನಿರತ ರೈತರ ಜತೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ರೈತರನ್ನು ಬೇರೆಡೆ ದಾರಿ ತಪ್ಪಿಸುವ ಯತ್ನಗಳು ನಡೆಯುತ್ತಿದೆ. ಅದಕ್ಕೆ ರೈತರು ಬಲಿ ಆಗಬಾರದು’ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಅರ್ಜುನ್ ಮುಂಡಾ ಮನವಿ ಮಾಡಿದ್ದಾರೆ.
ಅಲ್ಲದೆ, ‘ಬೆಂಬಲ ಬೆಲೆಯ ಕಡ್ಡಾಯ ಜಾರಿಗೆ ಬಗ್ಗೆ ಕಾನೂನು ತರಬೇಕು ಎಂಬ ರೈತರ ಬೇಡಿಕೆಯನ್ನು ತರಾತುರಿಯಲ್ಲಿ ಈಡೇರಿಸಲು ಆಗದು. ಈ ಬಗ್ಗೆ ಎಲ್ಲರೊಂದಿಗೆ ಮಾತುಕತೆ ನಡೆಸಿ ನಂತರ ನಿರ್ಣಯ ಕೈಗೊಳ್ಳಬೇಕು’ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,‘ಈಗಾಗಲೇ ರೈತರೊಂದಿಗೆ ನಡೆದ ಎರಡೂ ಸಭೆಗಳು ಫಲಿತಾಂಶ ನೀಡಲಿಲ್ಲ. ಈ ಸಮಸ್ಯೆಗೆ ಪರಿಹಾರ ಹುಡುಕಲು ಮಾತುಕತೆ ಅವಶ್ಯಕತೆ ಇದೆ.
ಇದಕ್ಕಾಗಿ ನಾವು ಸಿದ್ದರಿದ್ದೇವೆ. ರೈತರ ಪ್ರತಿಭಟನೆಯನ್ನು ದಿಕ್ಕು ತಪ್ಪಿಸಲು ಹಲವಾರು ಶಕ್ತಿಗಳು ಯತ್ನಿಸುತ್ತಿದೆ. ರೈತರು ಅವರಿಂದ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರ ರೈತರ ಹಿತಾಸಕ್ತಿಗೆ ಬದ್ಧ. ಸರ್ಕಾರದ ಮೇಲೆ ನಂಬಿಕೆ ಇರಿಸಿ’ ಎಂದು ಮನವಿ ಮಾಡಿದರು.
ಇನ್ನು ಕೆಲವು ಬಿಜೆಪಿ ನಾಯಕರು ಮಾತನಾಡಿ, ‘ಲೋಕಸಭೆ ಚುನಾವಣೆಗೂ ಮುನ್ನ ನಡೆದಿರುವ ಈ ಪ್ರತಿಭಟನೆಯ ಹಿಂದೆ ವಿಪಕ್ಷಗಳ ಕೈವಾಡವಿದೆ’ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬೆಂಬಲ ಬೆಲೆಗೆ ಲೀಗಲ್ ಗ್ಯಾರಂಟಿ: ಖರ್ಗೆ
ಪಿಟಿಐ ಅಂಬಿಕಾಪುರ
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕನಿಷ್ಠ ಬೆಂಬಲ ಬೆಲೆ ಕುರಿತು ಲೀಗಲ್ ಗ್ಯಾರಂಟಿ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈ ಮೂಲಕ ಬೆಂಬಲ ಬೆಲೆ ಕಡ್ಡಾಯ ಜಾರಿಗೆ ಕಾನೂನು ರೂಪಿಸುವ ಸುಳಿವು ನೀಡಿದ್ದಾರೆ.ಛತ್ತೀಸ್‌ಗಢದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಮಾತನಾಡಿದ ಖರ್ಗೆ,‘ಅಧಿಕಾರಕ್ಕೆ ಬಂದೊಡನೆ, ನಾವು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಸ್ವರೂಪ ನೀಡಿ ಲೀಗಲ್ ಗ್ಯಾರಂಟಿ ನೀಡುತ್ತೇವೆ.
ಇದು ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರಂಟಿ. ದಿಲ್ಲಿ ಚಲೋ ನಡೆಸುತ್ತಿರುವ ರೈತರು ಇದಕ್ಕೆ ಕಾನೂನು ಸ್ವರೂಪ ಕೇಳುತ್ತಿದ್ದಾರೆ. ಆದರೆ ಇದಕ್ಕೆ ಪ್ರಧಾನಿ ಮೋದಿ ಕಿವಿಗೊಡದೆ ಪ್ರಜಾಪ್ರಭುತ್ವವನ್ನು ನಂಬದೆ ಸ್ವಯಂ ಹಿತಾಸಕ್ತಿಗೆ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ರಾಹುಲ್ ಕಿಡಿ: ದಿಲ್ಲಿ ಚಲೋ ರೈತರ ಮೇಲೆ ಪೊಲೀಸರ ಕ್ರಮವನ್ನು ವಿರೋಧಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,‘ಬೇಡಿಕೆ ಕೇಳಿಕೊಂಡು ಬರುವ ರೈತರ ಮೇಲೆ ಕೇಂದ್ರ ಸರ್ಕಾರ ಅಶ್ರುವಾಯುವನ್ನು ಸಿಡಿಸಿ ಚದುರಿಸುತ್ತಿದೆ.
ಅವರನ್ನು ಹಿಂಸಿಸುತ್ತಿದೆ. ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ಆಗುತ್ತಿಲ್ಲ.
ಮತ್ತೊಂದೆಡೆ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಿಸಿದೆ. ಆದರೆ ಅವರ ಸಲಹೆಗಳನ್ನು ಜಾರಿಗೊಳಿಸಲು ತಯಾರಿಲ್ಲ’ ಎಂದು ಟೀಕಿಸಿದರು.
ರೈತರ ಮೇಲೆ ಬಲಪ್ರಯೋಗ ಬೇಡ: ಪಂಜಾಬ್ ಹೈಕೋರ್ಟ್
ಚಂಡೀಗಢ: ತಮ್ಮ ನಡುವಿನ ಬಿಕ್ಕಟ್ಟುಗಳ ಇತ್ಯರ್ಥಕ್ಕೆ ರೈತ ಸಂಘಟನೆಗಳು ಮತ್ತು ಸರ್ಕಾರ ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಬೇಕು. ಆದರೆ, ರೈತರ ಮೇಲೆ ಏಕಾಏಕಿ ಬಲಪ್ರಯೋಗ ಮಾಡಬಾರದು.
ಬಲಪ್ರಯೋಗ ಕಟ್ಟಕಡೆಯ ಅಸ್ತ್ರವಾಗಿರಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಸಲಹೆ ನೀಡಿದೆ.
ರೈತರ ದೆಹಲಿಗೆ ಚಲೋಗೆ ಹರ್ಯಾಣದ ಸರ್ಕಾರದ ಅಡ್ಡಿ ಪ್ರಶ್ನಿಸಿದ್ದ ಅರ್ಜಿ ಮತ್ತು ರೈತರ ಪ್ರತಿಭಟನೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ‘ರೈತರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರತಿಭಟನೆ ನಡೆಸುವ ಮೂಲಭೂತ ಹಕ್ಕಿದೆ.
ಅದೇ ವೇಳೆ, ರೈತರ ಹೆದ್ದಾರಿ ತಡೆಯಿಂದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆಯೂ ಸರ್ಕಾರದ್ದಾಗಿದೆ’ ಎಂದಿದೆ.
‘ಹೀಗಾಗಿ ಈ ಎರಡರ ನಡುವೆ ಸಮತೋಲನ ಅಗತ್ಯ. ಎರಡೂ ಬಣಗಳು ಕುಳಿತು ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಬೇಕು.
ಪ್ರತಿಭಟನೆಗೆ ರಾಜ್ಯಗಳು ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು. ಬಲಪ್ರಯೋಗ ಕಡೆಯ ಅಸ್ತ್ರವಾಗಬೇಕು’ ಎಂದು ಸಲಹೆ ನೀಡಿದೆ.
ಜೊತೆಗೆ ಪಂಜಾಬ್, ಹರ್ಯಾಣ, ದೆಹಲಿ ಮತ್ತು ಕೇಂದ್ರ ಸರ್ಕಾರಗಳಿಗೆ ಈ ಸಂಬಂಧ ನೋಟಿಸ್ ಜಾರಿ ಮಾಡಿ ಪ್ರಕರಣದ ವಿಚಾರಣೆಯನ್ನು ಫೆ.15ಕ್ಕೆ ಮುಂದೂಡಿದೆ.