ಶೀಘ್ರದಲ್ಲಿ ಭಾರತದ ಹಾಗೂ ಚೀನಾದ ಮೇಲೆಯೂ ಪ್ರತಿ ತೆರಿಗೆ ಹೇರುತ್ತೇವೆ’ : ಡೊನಾಲ್ಡ್‌ ಟ್ರಂಪ್‌

KannadaprabhaNewsNetwork | Updated : Feb 23 2025, 04:48 AM IST

ಸಾರಾಂಶ

ಈಗಾಗಲೇ ಕೆನಡಾ, ಮೆಕ್ಸಿಕೋದಂತಹ ದೇಶಗಳ ಮೇಲೆ ತೆರಿಗೆ ಪ್ರಹಾರ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಶೀಘ್ರದಲ್ಲಿ ಭಾರತದ ಹಾಗೂ ಚೀನಾದ ಮೇಲೆಯೂ ಪ್ರತಿ ತೆರಿಗೆ ಹೇರುತ್ತೇವೆ’ ಎಂದು ಘೋಷಿಸಿದ್ದಾರೆ.

ನ್ಯೂಯಾರ್ಕ್‌: ಈಗಾಗಲೇ ಕೆನಡಾ, ಮೆಕ್ಸಿಕೋದಂತಹ ದೇಶಗಳ ಮೇಲೆ ತೆರಿಗೆ ಪ್ರಹಾರ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಶೀಘ್ರದಲ್ಲಿ ಭಾರತದ ಹಾಗೂ ಚೀನಾದ ಮೇಲೆಯೂ ಪ್ರತಿ ತೆರಿಗೆ ಹೇರುತ್ತೇವೆ’ ಎಂದು ಘೋಷಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಭಾರತ ನಮ್ಮ ವಸ್ತುಗಳ ಮೇಲೆ ಭಾರಿ ತೆರಿಗೆ ಹೇರುತ್ತಿದೆ. ಅದಕ್ಕೆ ಪ್ರತಿಯಾಗಿ ನಾವೂ ಅಂತೆಯೇ ಮಾಡುತ್ತೇವೆ. ಇಷ್ಟರವರೆಗೆ ನಾವು ಹಾಗೆ ಮಾಡಿರಲಿಲ್ಲ. ಆದರೆ ಈಗ ಅದರ ತಯಾರಿ ನಡೆಸಿದ್ದೇವೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾಗಲೂ ಹೇಳಿದ್ದೆ’ ಎಂದರು. ಇದೇ ವೇಳೆ ಚೀನಾದ ಮೇಲೆಯೂ ಭಾರೀ ತೆರಿಗೆ ಹೇರುವುದಾಗಿ ಘೋಷಿಸಿದರು.

ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಟ್ರಂಪ್‌, ‘ನಮ್ಮ ಮೇಲೆ ಅತಿ ಹೆಚ್ಚು ತೆರಿಗೆ ಹೇರುತ್ತಿರುವ ದೇಶ ಭಾರತ. ಅದು ನಮ್ಮ ಪ್ರತಿತೆರಿಗೆಯಿಂದ ಬಚಾವಾಗಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಯಾರೂ ನನ್ನೊಂದಿಗೆ ವಾದಿಸಲಾರರು’ ಎಂದಿದ್ದರು.

ಎಫ್‌ಬಿಐ ನಿರ್ದೇಶಕ ಕಾಶ್‌ ಪಟೇಲ್‌ ಭಗವದ್ಗೀತೆ ಮೇಲೆ ಪ್ರಮಾಣ

ವಾಷಿಂಗ್ಟನ್‌: ಅಮೆರಿಕ ಗುಪ್ತಚರ ಸಂಸ್ಥೆ ಒಂದಾದ ಎಫ್‌ಬಿಐ (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್)ನ ನಿರ್ದೇಶಕರಾಗಿ ನೇಮಕಗೊಂಡಿರುವ ಭಾರತ ಮೂಲದ ಕಾಶ್‌ ಪಟೇಲ್‌ ಭಗವದ್ಗೀತೆ ಮೇಲೆ ಕೈ ಇರಿಸಿ ಪ್ರಮಾಣ ಸ್ವೀಕರಿಸಿದ್ದಾರೆ.ಸೆನೆಟ್‌ನಲ್ಲಿ 51-49 ಮತಗಳಿಂದ ಎಫ್‌ಬಿಐ ನಿರ್ದೇಶಕನ ಹುದ್ದೆಗೆ ಆಯ್ಕೆಯಾದ ಕಾಶ್‌ ಅವರಿಗೆ ಅಟಾರ್ನಿ ಜನರಲ್ ಪಾಮ್‌ ಬೊಂದಿ, ಶ್ವೇತ ಭವನದ ಆವರಣದಲ್ಲಿರುವ ಇಇಒಬಿ ಭವನದಲ್ಲಿ ಪ್ರಮಾಣ ಬೋಧಿಸಿದರು. ಈ ವೇಳೆ ಅವರ ಪರಿವಾರ ಹಾಗೂ ಪ್ರೇಯಸಿ ಉಪಸ್ಥಿತರಿದ್ದರು.

ಪ್ರಮಾಣ ಸ್ವೀಕರಿಸಿ ಮಾತನಾಡಿದ ಪಟೇಲ್‌, ‘ಮೊದಲ ತಲೆಮಾರಿನ ಭಾರತೀಯನಾದ ನಾನು ಅಮೆರಿಕದ ಕನಸನ್ನು ಈಡೇರಿಸುವೆ ಹಾಗೂ ಅಮೆರಿಕದ ಕಾನೂನು ಜಾರಿ ಸಂಸ್ಥೆಯನ್ನು ಮುನ್ನಡೆಸಲಿದ್ದೇನೆ. ಇದು ಬೇರೆಲ್ಲೂ ಆಗಲು ಸಾದ್ಯವಿಲ್ಲ’ ಎಂದರು. ಜೊತೆಗೆ ಟ್ರಂಪ್‌ ಹಾಗೂ ತಮ್ಮ ಪರವಾಗಿ ಮತ ಚಲಾಯಿಸಿದ ಸಂಸದರಿಗೆ ಧನ್ಯವಾದ ಸಲ್ಲಿಸಿದರು.ಪಟೇಲ್‌ ಅವರು ನ್ಯೂ ಯಾರ್ಕ್‌ನಲ್ಲಿ ಹುಟ್ಟಿದವರಾದರೂ, ಗುಜರಾತ್‌ ಮೂಲ ಹೊಂದಿದ್ದಾರೆ. ಇವರ ತಾಯಿ ತಾಂಜಾನಿಯಾ ಹಾಗೂ ತಂದೆ ಉಗಾಂಡಾದವರಾಗಿದ್ದು, 1970ಯಲ್ಲಿ ಅಮೆರಿಕಕ್ಕೆ ಬಂದು ನೆಲೆಸಿದ್ದರು.

ಅಮೆರಿಕ: ಸಶಸ್ತ್ರ ಪಡೆ ಮುಖ್ಯಸ್ಥ ಸೇರಿ 2 ಸೇನಾ ಅಧಿಕಾರಿಗಳು ವಜಾ

ವಾಷಿಂಗ್ಟನ್‌: ಅಮೆರಿಕ ಸೇನೆಯ ಅತ್ಯನ್ನತ ಶ್ರೇಣಿಯಾದ ಸೇನೆಯ ಜಂಟಿ ಮುಖ್ಯಸ್ಥರ ಅಧ್ಯಕ್ಷ ಹುದ್ದೆಯಿಂದ ವಾಯುಪಡೆಯ ಜನರಲ್‌ ಸಿ.ಕ್ಯು. ಬ್ರೌನ್‌ ಅವರನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಜಾಗೊಳಿಸಿದ್ದಾರೆ.ಇದೇ ವೇಳೆ, ಇನ್ನೂ ಇಬ್ಬರು ಹಿರಿಯ ಅಧಿಕಾರಿಗಳಾದ, ನೌಕಾ ಕಾರ್ಯಾಚರಣೆಯ ಮುಖ್ಯಸ್ಥೆಯಾದ ಮೊದಲ ಮಹಿಳೆ ಅಡ್ಮ್ ಫ್ರಾಂಚೆಟ್ಟಿ ಹಾಗೂ ವಾಯುಪಡೆಯ ಮುಖ್ಯಸ್ಥ ಜನರಲ್‌ ಜಿಮ್‌ ಸ್ಲೈಫ್ ಅವರನ್ನೂ ವಜಾಗೊಳುಸಿರುವುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಘೋಷಿಸಿದ್ದಾರೆ. ಇವರೆಲ್ಲ ಮಾಜಿ ಅಧ್ಯಕ್ಷ ಬೈಡೆನ್‌ ಅವಧಿಯಲ್ಲಿ ನೇಮಕಗೊಂಡದ್ದು ಗಮನಾರ್ಹ.

ಅಮೆರಿಕ ನಿಧಿ ದುರ್ಬಳಕೆ : ಜೈಶಂಕರ್ ಕಳವಳ

ನವದೆಹಲಿ: ಭಾರತದ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಭಾರತಕ್ಕೆ ಅಮೆರಿಕದಿಂದ ಲಕ್ಷಾಂತರ ಡಾಲರ್‌ಗಳನ್ನು ರವಾನಿಸಲಾಗಿದೆ ಎಂದು ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ ಮಾಹಿತಿಯ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕಳವಳ ವ್ಯಕ್ತಪಡಿಸಿದ್ದಾರೆ.ಸಮಾರಂಭವೊಂದರಲ್ಲಿ ಶನಿವಾರ ಮಾತನಾಡಿದ ಅವರು, ‘ಟ್ರಂಪ್ ಆಡಳಿತದ ಅಧಿಕಾರಿಗಳು ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆಂದು ನಾನು ಭಾವಿಸುತ್ತೇನೆ ಮತ್ತು ಅದು ಕಳವಳಕಾರಿಯಾಗಿದೆ. ಅಮೆರಿಕ ನೀಡಿದ 180 ಕೋಟಿ ರು. ನಿಧಿಯನ್ನು ಭಾರತದಲ್ಲಿ ಚುನಾವಣೆ ಮೇಲೆ ಪ್ರಭಾವ ಬೀರಲು ಬಳಸಿಕೊಂಡಿದ್ದಾರೆ ಎಂದರೆ ಅದರ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗಬೇಕು’ ಎಂದರು.

‘ಅಮೆರಿಕ ಮಾಡಿದ ಆರೋಪಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಸತ್ಯಗಳು ಹೊರಬರುತ್ತವೆ ಎಂಬುದು ನನ್ನ ಭಾವನೆ’ ಎಂದೂ ಜೈಶಂಕರ್ ನುಡಿದರು.--

ಭಾರತಕ್ಕೆ ಅಮೆರಿಕ ಹಣ ನೀಡಿಲ್ಲ: ವಾಷಿಂಗ್ಟನ್‌ ಪೋಸ್ಟ್‌ವಾಷಿಂಗ್ಟನ್‌: ‘ಬಾಂಗ್ಲಾದೇಶ ಹಾಗೂ ಭಾರತಕ್ಕೆ ಅಮೆರಿಕ ಪ್ರತ್ಯೇಕ ಚುನಾವಣಾ ನಿಧಿ ನೀಡಿದೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ಪಷ್ಟನೆ ಹೊರತಾಗ್ಯೂ ಅಮೆರಿಕದ ವಾಷಿಂಗ್ಟನ್‌ ಪೋಸ್ಟ್‌, ‘ ಅಮೆರಿಕದಿಂದ ಬಾಂಗ್ಲಾದೇಶಕ್ಕೆ ಹಣ ಹೋಗಿದೆಯೇ ವಿನಾ ಭಾರತಕ್ಕಲ್ಲ’ ಎಂದು ವರದಿ ಮಾಡಿದೆ. ಈ ಮೂಲಕ ‘2008 ರಿಂದ ಭಾರತವು ಯಾವುದೇ ಚುನಾವಣೆಗೆ ಸಂಬಂಧಿಸಿದ ಯೋಜನೆಗೆ ಅಮೆರಿಕದಿಂದ ನಿಂದ ಯಾವುದೇ ಹಣವನ್ನು ಪಡೆದಿಲ್ಲ’ ಎಂಬ ಭಾರತದ ಪತ್ರಿಕೆಯೊಂದರ ವರದಿಯನ್ನು ಬೆಂಬಲಿಸಿದೆ.

Share this article