1.5 ವರ್ಷದಲ್ಲಿ ದಾಖಲೆಯ 10 ಲಕ್ಷ ಶಾಶ್ವತ ಸರ್ಕಾರಿ ಉದ್ಯೋಗ : ಪ್ರಧಾನಿ ನರೇಂದ್ರ ಮೋದಿ

KannadaprabhaNewsNetwork |  
Published : Dec 24, 2024, 12:47 AM ISTUpdated : Dec 24, 2024, 03:41 AM IST
ಮೋದಿ | Kannada Prabha

ಸಾರಾಂಶ

ಕಳೆದ 1.5 ವರ್ಷದಲ್ಲಿ ತಮ್ಮ ಸರ್ಕಾರ 10 ಲಕ್ಷಕ್ಕೂ ಅಧಿಕ ಜನರಿಗೆ ಶಾಶ್ವತ ಸರ್ಕಾರಿ ಉದ್ಯೋಗ ಒದಗಿಸಿ ದಾಖಲೆ ನಿರ್ಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ನವದೆಹಲಿ: ಕಳೆದ 1.5 ವರ್ಷದಲ್ಲಿ ತಮ್ಮ ಸರ್ಕಾರ 10 ಲಕ್ಷಕ್ಕೂ ಅಧಿಕ ಜನರಿಗೆ ಶಾಶ್ವತ ಸರ್ಕಾರಿ ಉದ್ಯೋಗ ಒದಗಿಸಿ ದಾಖಲೆ ನಿರ್ಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೋಮವಾರ ಉದ್ಯೋಗ ಮೇಳದ ಅಡಿಯಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿವಿಧ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಸುಮಾರು 71,000 ಜನರಿಗೆ ನೇಮಕಾತಿ ಪತ್ರ ಹಂಚಿಕೆ ಮಾಡಿ ಮಾತನಾಡಿದ ಮೋದಿ, ‘ದೇಶದ ಯುವಕರೇ ನಮ್ಮ ಸರ್ಕಾರದ ನೀತಿಗಳು ಹಾಗೂ ಯೋಜನೆಗಳ ಕೇಂದ್ರವಾಗಿದ್ದಾರೆ. ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಿಂದ ನೇಮಕಾತಿ ಪ್ರಕ್ರಿಯೆ ನಡೆಸಿದ್ದೇವೆ. 1.5 ವರ್ಷದಲ್ಲಿ 10 ಲಕ್ಷ ಯುವಕರನ್ನು ನೇಮಿಸಿಕೊಂಡಿದ್ದೇವೆ. ಹಿಂದಿನ ಯಾವ ಸರ್ಕಾರಗಳೂ ಈ ಮಟ್ಟದಲ್ಲಿ ಉದ್ಯೋಗ ಒದಗಿಸಿರಲಿಲ್ಲ. 13 ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಮೂಲಕ ಭಾಷೆಯೇ ತೊಡಕಾಗದಂತೆ ನೋಡಿಕೊಳ್ಳಲಾಯಿತು’ ಎಂದರು.

‘ಇಂದಿನ ಯುವಕರಲ್ಲಿ ಆತ್ಮವಿಶ್ವಾಸ ಭರಪೂರಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುತ್ತಿದ್ದಾರೆ. ಉದ್ಯೋಗ ಮೇಳದಿಂದ ಯುವಕರ ಸಾಮರ್ಥ್ಯವನ್ನು ಅನಾವರಣಗೊಳುತ್ತದೆ. ಈ ಬಾರಿ ಮಹಿಳೆಯರನ್ನು ಅಧಿಕ ಸಂಖ್ಯೆಯಲ್ಲಿ ನೇಮಿಸಿಕೊಳ್ಳಲಾಗಿದ್ದು, ಅವರನ್ನು ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಬಿಯನ್ನಾಗಿಸುವುದೇ ನಮ್ಮ ಸರ್ಕಾರದ ಗುರಿ’ ಎಂದು ಮೋದಿ ಹೇಳಿದರು.

ಮಹಿಳೆಯರಿಗೆ 26 ವಾರಗಳ ತಾಯ್ತನದ ರಜೆಯಿಂದಾಗಿ ಔದ್ಯೋಗಿಕವಾಗಿ ಸಹಾಯವಾಗಿದೆ ಎಂದ ಮೋದಿ, ಸ್ತ್ರೀಯರೇ ಅಧಿಕ ಸಂಖ್ಯೆಯಲ್ಲಿ ಪಿಎಂ ಆವಾಸ್‌ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದರು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌, ನೇಮಕಗೊಂಡವರಲ್ಲಿ ಶೇ.29ರಷ್ಟು ಮಂದಿ ಒಬಿಸಿ ವರ್ಗದವರಾಗಿದ್ದಾರೆ ಎಂದು ತಿಳಿಸಿದರು.

ಇದು ಸುಳ್ಳು- ಖರ್ಗೆ:

ಮೋದಿ ಮಾಡುತ್ತಿರುವುದು ಕೇವಲ ಪ್ರಚಾರ ಸ್ಟಂಟ್‌. ಕೇಂದ್ರ ಸರ್ಕಾರದಲ್ಲಿ 9.56 ಲಕ್ಷ, ರಕ್ಷಣಾ ಇಲಾಖೆಯಲ್ಲಿ 2.13 ಲಕ್ಷ ಹುದ್ದೆ ಖಾಲಿ ಇವೆ ಎಂದು ಇತ್ತೀಚೆಗೆ ಮಾಹಿತಿ ಹಕ್ಕು ಅಡಿ ವರದಿ ಬಂದಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ