ದೇಶವ್ಯಾಪಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಟೆರರ್‌ ಡಾಕ್ಟರ್ಸ್‌!

KannadaprabhaNewsNetwork |  
Published : Nov 13, 2025, 12:45 AM ISTUpdated : Nov 13, 2025, 04:21 AM IST
Shaheen

ಸಾರಾಂಶ

12 ಜನರ ಬಲಿ ಪಡೆದ ದೆಹಲಿ ಸ್ಫೋಟದ ರೂವಾರಿಗಳಾದ ಫರೀದಾಬಾದ್‌ ಅಲ್‌ ಫಲಾ ಆಸ್ಪತ್ರೆಯ ‘ಟೆರರ್‌ ಡಾಕ್ಟರ್‌’ಗಳ ಗುರಿ ಕೇವಲ ರಾಜಧಾನಿ ಮಾತ್ರ ಆಗಿರಲಿಲ್ಲ. ಬದಲಾಗಿ ಇಡೀ ದೇಶಾದ್ಯಂತ ಮುಂಬೈ ಸರಣಿ ಸ್ಫೋಟದ ಮಾದರಿಯಲ್ಲಿ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದರು. 

 ನವದೆಹಲಿ/ಫರೀದಾಬಾದ್‌: 12 ಜನರ ಬಲಿ ಪಡೆದ ದೆಹಲಿ ಸ್ಫೋಟದ ರೂವಾರಿಗಳಾದ ಫರೀದಾಬಾದ್‌ ಅಲ್‌ ಫಲಾ ಆಸ್ಪತ್ರೆಯ ‘ಟೆರರ್‌ ಡಾಕ್ಟರ್‌’ಗಳ ಗುರಿ ಕೇವಲ ರಾಜಧಾನಿ ಮಾತ್ರ ಆಗಿರಲಿಲ್ಲ. ಬದಲಾಗಿ ಇಡೀ ದೇಶಾದ್ಯಂತ ಮುಂಬೈ ಸರಣಿ ಸ್ಫೋಟದ ಮಾದರಿಯಲ್ಲಿ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದರು. ಅಯೋಧ್ಯೆ, ದೆಹಲಿ, ಕಾಶಿ ಸೇರಿ ವಿವಿಧ ಊರುಗಳು ಇವರ ಗುರಿಯಾಗಿದ್ದವು ಎಂಬ ಸ್ಫೋಟಕ ಅಂಶವು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಸ್ಫೋಟ ನಡೆಸಲೆಂದೇ ಇದಕ್ಕೆಂದೇ ಆಯ್ದ ಪ್ರದೇಶಗಳ ಪರಿಶೀಲನೆ ನಡೆಸಿ, 200ಕ್ಕೂ ಹೆಚ್ಚು ಸುಧಾರಿತ ಸ್ಫೋಟಕಗಳ ತಯಾರಿಗೆ ಸಿದ್ದತೆ ನಡೆಸಿದ್ದರು. ಈ ಪೈಕಿ ಕೆಲವೊಂದು ಸ್ಫೋಟದ ಸಂಚು ವಿಫಲವಾಗಿದ್ದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಫೋಟದ ಯೋಜನೆ ರೂಪಿಸಿದ್ದರು. ಆದರೆ ಕಳೆದ ಕೆಲ ದಿನಗಳಿಂದ ವೈದ್ಯರ ಉಗ್ರ ಜಾಲದ ಮೇಲೆ ತನಿಖಾ ಸಂಸ್ಥೆಗಳ ನಿಗಾ ಮತ್ತು ಅವರ ಬಂಧನವು ದೊಡ್ಡ ದಾಳಿಯಿಂದ ದೇಶವನ್ನು ಬಚಾವ್‌ ಮಾಡಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಗಣರಾಜ್ಯೋತ್ಸವ ಗುರಿ:

ಕಳೆದ ಜ.26 ಗಣರಾಜ್ಯೋತ್ಸವದಂದೇ ಕೆಂಪು ಕೋಟೆಯ ಬಳಿ ಸ್ಫೋಟಕ್ಕೆ ಉಗ್ರರು ಸಂಚು ರೂಪಿಸಿದ್ದರು. ಇದರ ಭಾಗವಾಗಿ ಬಂಧಿತ ಡಾ. ಮುಜಮ್ಮಿಲ್‌ ಮತ್ತು ಕಾರು ಸ್ಫೋಟದಲ್ಲಿ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾದ ಉಮರ್‌ ನಬಿ ಇಬ್ಬರೂ ಕಳೆದ ಜನವರಿ ತಿಂಗಳ ಮೊದಲ ವಾರದಲ್ಲಿ ಕೆಂಪುಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹಲವು ಭಾರೀ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದು ಆ ಪ್ರದೇಶದಲ್ಲಿನ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ಮತ್ತು ಜನಸಂದಣಿ ಹೆಚ್ಚಿರುವ ಸಮಯದ ಬಗ್ಗೆ ತಿಳಿಯುವ ಕೆಲಸವಾಗಿತ್ತು. ಇಬ್ಬರ ಮೊಬೈಲ್ ಡಾಟಾ ಮತ್ತು ಕೆಂಪುಕೋಟೆ ಸುತ್ತಮುತ್ತಲಿನ ಪ್ರದೇಶದ ಸಿಸಿಟೀವಿಗಳ ಅಧ್ಯಯನದಲ್ಲಿ ಕೆಂಪುಕೋಟೆ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಅವರ ಚಲನವಲನ ಕಂಡುಬಂದಿದೆ. ಅಲ್ಲದೆ ಪ್ರಾಥಮಿಕ ವಿಚಾರಣೆ ವೇಳೆ ಸ್ವತಃ ಮುಜಮ್ಮಿಲ್‌ ಕೂಡಾ ಜ.26ರ ಸ್ಫೋಟದ ಸಂಚಿನ ಬಗ್ಗೆ ಬಾಯಿಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಆದರೆ ಜ.26ರ ಕಾರ್ಯಕ್ರಮಕ್ಕೆ ತಿಂಗಳ ಮುನ್ನವೇ ಅದರ ಸುತ್ತಮುತ್ತಲೂ ಪೊಲೀಸರು ಭಾರೀ ಭದ್ರತೆ ವಹಿಸುವ ಕಾರಣ ಅಲ್ಲಿ ಸ್ಫೋಟಕ್ಕೆ ಅವಕಾಶ ಕಡಿಮೆ ಎನ್ನುವ ಕಾರಣಕ್ಕೆ ಉಗ್ರರು ಪ್ಲ್ಯಾನ್‌ ಕೈಬಿಟ್ಟಿದ್ದರು. ಬಳಿಕ ದೀಪಾವಳಿ ವೇಳೆ ಹೆಚ್ಚು ಜನಸಂದಣಿ ಇರುವ ಮಾರುಕಟ್ಟೆಗಳ ಬಳಿ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು. ಆದರೆ ಆ ಯೋಜನೆ ಕೂಡಾ ನಾನಾ ಕಾರಣಗಳಿಂದ ಕಾರ್ಯರೂಪಕ್ಕೆ ಬಂದಿರಲಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದೇಗುಗಗಳೂ ಗುರಿ:

ದೆಹಲಿ ಕೆಂಪುಕೋಟೆ ಜೊತೆಗೆ ಇಂಡಿಯಾ ಗೇಟ್‌, ಕಾನ್‌ಸ್ಟಿಟ್ಯೂಷನ್‌ ಕ್ಲಬ್‌, ಸೇನಾ ಭವನ, ದಿಲ್ಲಿ ಗೌರಿ ಶಂಕರ ದೇಗುಲ, ನೂತನವಾಗಿ ನಿರ್ಮಾಣಗೊಂಡ ಅಯೋಧ್ಯೆಯ ರಾಮಮಂದಿರ, ನವೀಕರಣಗೊಂಡ ಕಾಶಿಯ ವಿಶ್ವನಾಥ ದೇಗುಲ ಕೂಡಾ ಅವರ ಹಿಟ್‌ಲಿಸ್ಟ್‌ನಲ್ಲಿತ್ತು ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಬಾಬ್ರಿ ಮಸೀದಿ ಧ್ವಂಸ:

ಕಳೆದ ಜ.26 ಮತ್ತು ದೀಪಾವಳಿ ವೇಳೆ ಸ್ಫೋಟದ ಸಂಚು ವಿಫಲವಾದ ಹಿನ್ನೆಲೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ದಿನವಾದ ಡಿ.6ರಂದು ಸ್ಫೋಟ ನಡೆಸುವ ಮೂಲಕ ಸೇಡು ತೀರಿಸಿಕೊಳ್ಳಲು ಉಮರ್‌ ನಬಿ ಯೋಜಿಸಿದ್ದ ಎಂಬ ವಿಷಯ ಕೂಡಾ ತನಿಖೆ ವೇಳೆ ಬೆಳಕಿಗೆ ಬಂದಿದೆ.

 ರಜೆ ಕಾರಣ ಕೆಂಪುಕೋಟೇಲಿ ತಪ್ಪಿತು ಘೋರ ಅನಾಹುತ!

- ಸೋಮವಾರ ಕೋಟೆಗೆ ರಜೆ, ಪ್ರವಾಸಿಗರಿಗಿಲ್ಲ ಪ್ರವೇಶ- ಹೀಗಾಗಿ ಅಲ್ಲಿ ಬಾಂಬ್‌ ಸ್ಫೋಟಿಸುವ ಆಸೆಗೆ ತಣ್ಣೀರು

- ಅದರ ಬದಲು ರಸ್ತೆಗಿಳಿದು ಸ್ಫೋಟಿಸಿದ ಟೆರರ್‌ ಡಾಕ್ಟರ್‌ನವದೆಹಲಿ: ಸೋಮವಾರ ಕೆಂಪುಕೋಟೆ ಸಿಗ್ನಲ್‌ ಬಳಿ ಸಂಭವಿಸಿದ ಸ್ಫೋಟ, ವಾಸ್ತವವಾಗಿ ಕೆಂಪುಕೋಟೆಯ ವಾಹನ ಪಾರ್ಕಿಂಗ್‌ ಜಾಗದಲ್ಲಿ ನಡೆಯಬೇಕಿತ್ತು. ಆದರೆ ಸೋಮವಾರ ಕೆಂಪುಕೋಟೆಗೆ ರಜೆ ಇದ್ದ ಕಾರಣ ಪಾರ್ಕಿಂಗ್‌ ಜಾಗದಲ್ಲಿ ಹೆಚ್ಚು ವಾಹನಗಳು ಹಾಗೂ ಜನರು ಇರದೇ ‘ಟೆರರ್‌ ಡಾಕ್ಟರ್’ ಡಾ। ಉಮರ್‌ ನಬಿ ಸಂಚು ಭಗ್ನವಾಗಿತ್ತು ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಫರೀದಾಬಾದ್‌ನಲ್ಲಿನ ತನ್ನ ಸ್ನೇಹಿತ ವೈದ್ಯರ ಬಂಧನದ ಬಳಿಕ ಡಾ। ನಬಿ ಹತಾಶನಾಗಿದ್ದ. ಹೀಗಾಗಿ ಸ್ಫೋಟಕವಿದ್ದ ಐ20 ಕಾರಿನಲ್ಲಿ ದಿಲ್ಲಿಗೆ ಬಂದು ಕೆಂಪುಕೋಟೆ ಪಾರ್ಕಿಂಗ್ ತಾಣದಲ್ಲಿ ಸ್ಫೋಟಿಸಲು ಸಂಚು ರೂಪಿಸಿದ್ದ. ಏಕೆಂದರೆ ಯಾವಾಗಲೂ ಪಾರ್ಕಿಂಗ್‌ ತಾಣ ಜನರು ಹಾಗೂ ವಾಹನಗಳಿಂದ ಗಿಜಿಗಿಜಿ ಎನ್ನುತ್ತದೆ ಎಂದು ಆತನಿಗೆ ಗೊತ್ತಿತ್ತು.‘ಯೋಜನೆಯಂತೆ ಸೋಮವಾರ ಮಧ್ಯಾಹ್ನ 3.19ಕ್ಕೆ ಅಲ್ಲಿ ಕಾರು ಸಮೇತ ಆತ ಬಂದ.  

ಆದರೆ ಪಾರ್ಕಿಂಗ್ ಜಾಗ ಗಿಜಿಗಿಜಿ ಎನ್ನದೇ ಅಂದು ಖಾಲಿ ಇತ್ತು. ಇದು ಆತನಿಗೆ ಅಚ್ಚರಿ ಮೂಡಿಸಿತು ಹಾಗೂ ಸೋಮವಾರ ಕೆಂಪುಕೋಟೆಗೆ ರಜೆ ಇರುವ ವಿಷಯ ಆಗ ಗೊತ್ತಾಯಿತು. ಹೀಗಾಗಿ 3 ಗಂಟೆ ಕಾದ ಉಗ್ರ ಡಾ। ನಬಿ, ಅವಕಾಶ ಕೈತಪ್ಪಿದ್ದಕ್ಕೆ ಬೇಸತ್ತು ಅಲ್ಲಿಂದ ಹೊರಟ. ಅದೇ ಆಕ್ರೋಶದಲ್ಲಿ ಆತ ಕೆಂಪುಕೋಟೆ ಸಮೀಪದ ರಸ್ತೆ ಸಿಗ್ನಲ್‌ ಬಳಿ ಸ್ಫೋಟ ನಡೆಸಿರಬಹುದು’ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

12 ದಿನ ವಿವಿಯಲ್ಲೇ ನಿಂತಿದ್ದ ಕಾರು:ಈ ನಡುವೆ ಸ್ಫೋಟಕ್ಕೆ ಕಾರಣವಾದ ಹ್ಯುಂಡೈ ಐ20 ಕಾರನ್ನು ಆರೋಪಿ ಉಮರ್‌, ಅ.29ರಂದು ಖರೀದಿ ಮಾಡಿದ್ದ. ಬಳಿಕ 12 ದಿನಗಳ ಕಾಲ ಅದನ್ನು ಫರೀದಾಬಾದ್‌ನ ಅಲ್‌ ಫಲಾ ವಿವಿ ಆವರಣದಲ್ಲಿ ಮತ್ತೊಬ್ಬ ಉಗ್ರ ಮುಜಮ್ಮಿಲ್‌ನ ಕಾರಿನ ಪಕ್ಕದಲ್ಲೇ ನಿಲ್ಲಿಸಿದ್ದ.ಆದರೆ ಸೋಮವಾರ ಮಜಮ್ಮಿಲ್‌ ಸೇರಿದಂತೆ ಇತರರ ಬಂಧನದ ಸುದ್ದಿ ಕೇಳಿ ಉಮರ್ ಆತಂಕಕ್ಕೆ ಒಳಗಾಗಿ ದಿಢೀರನೆ ಅಲ್ಲಿಂದ ಕಾರಿನೊಂದಿಗೆ ಕಾಲು ಕಿತ್ತಿದ್ದ. ಬಳಿಕ ದೆಹಲಿಯ ಹಲವು ಭಾಗ ಸುತ್ತಿ ಬಳಿಕ ಕೆಂಪುಕೋಟೆ ಬಳಿ ಪಾರ್ಕ್‌ ಮಾಡಿದ್ದ. ಅಲ್ಲಿಂದ ನೇರವಾಗಿ ತಂದು ಸ್ಫೋಟ ನಡೆಸಿದ್ದ ಎಂಬುದು ಬೆಳಕಿಗೆ ಬಂದಿದೆ.

ಸ್ಫೋಟಕ ಅಂಶಗಳು

ಮುಂಬೈ ಸರಣಿ ದಾಳಿ ಮಾದರಿ ಸ್ಫೋಟಕ್ಕೆ ಉಗ್ರರ ಮಹಾ ಸಂಚು

ಇದಕ್ಕೆಂದೇ ಹಲವು ಬಾರಿ ಕೆಂಪು ಕೋಟೆ, ಮಾರುಕಟ್ಟೆ ಪರಿಶೀಲನೆ

- ಇದಕ್ಕೆಂದೇ 200 ಐಇಡಿ ತಯಾರಿಸಲು ಯೋಜಿಸಿದ್ದ ಉಗ್ರರು

- ಮುಜಮ್ಮಿಲ್‌, ಉಮರ್‌ ಮೊಬೈಲ್‌ನಿಂದ ಸ್ಫೋಟಕ ಅಂಶ ಪತ್ತೆ

PREV
Read more Articles on

Recommended Stories

ರಜೆಯಿದ್ದ ಕಾರಣಕ್ಕೆ ಕೆಂಪುಕೋಟೇಲಿ ತಪ್ಪಿತ್ತು ಘೋರ ಅನಾಹುತ
ದಿಲ್ಲಿ ಸ್ಫೋಟ ‘ಉಗ್ರ ಕೃತ್ಯ’: ಕೇಂದ್ರ ಘೋಷಣೆ