2024ರ ವಿಜಿಕಿ ನ್ಯೂಸ್ ಸ್ಕೋರ್ : ಭಾರತದ ಅತಿದೊಡ್ಡ ಕಂಪನಿ ರಿಲಯನ್ಸ್‌ಗೆ ಅಗ್ರ ಸ್ಥಾನ

KannadaprabhaNewsNetwork | Updated : Dec 02 2024, 04:44 AM IST

ಸಾರಾಂಶ

ದಾಯ, ಲಾಭ, ಮಾರುಕಟ್ಟೆ ಮೌಲ್ಯ ಮತ್ತು ಸಾಮಾಜಿಕ ಪರಿಣಾಮದ ಪ್ರಕಾರ ಭಾರತದ ಅತಿದೊಡ್ಡ ಕಂಪನಿ ಆಗಿರುವ ರಿಲಯನ್ಸ್, 2024ರ ವಿಜಿಕಿ (Wiziki) ನ್ಯೂಸ್ ಸ್ಕೋರ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ

ನವದೆಹಲಿ: ಆದಾಯ, ಲಾಭ, ಮಾರುಕಟ್ಟೆ ಮೌಲ್ಯ ಮತ್ತು ಸಾಮಾಜಿಕ ಪರಿಣಾಮದ ಪ್ರಕಾರ ಭಾರತದ ಅತಿದೊಡ್ಡ ಕಂಪನಿ ಆಗಿರುವ ರಿಲಯನ್ಸ್, 2024ರ ವಿಜಿಕಿ (Wiziki) ನ್ಯೂಸ್ ಸ್ಕೋರ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಎಐ ಚಾಲಿತ ಮಾಧ್ಯಮ ಕಣ್ಗಾವಲು ಸಂಸ್ಥೆ ತಿಳಿಸಿದೆ. ಮಾಧ್ಯಮಗಳಲ್ಲಿ ರಿಲಯನ್ಸ್‌ನ ಗೋಚರತೆ ಭಾರತದ ಪ್ರಮುಖ ಎಫ್ಎಂಸಿಜಿ, ಬ್ಯಾಂಕಿಂಗ್, ಹಣಕಾಸು ಕಂಪನಿಗಳಿಗಿಂತ ಹೆಚ್ಚಾಗಿದೆ. ರಿಲಯನ್ಸ್ 2024ರ ನ್ಯೂಸ್ ಸ್ಕೋರ್‌ನಲ್ಲಿ 100ಕ್ಕೆ 97.43 ಅಂಕಗಳನ್ನು ಗಳಿಸಿದೆ. ಇದು 2023ರಲ್ಲಿ 96.46, 2022ರಲ್ಲಿ 92.56ರಷ್ಟಿತ್ತು. ಎಸ್‌ಬಿಐ (89.13), ಎಚ್‌ಡಿಎಫ್‌ಸಿ ಬ್ಯಾಂಕ್ (86.24) ಇದರ ನಂತರದಲ್ಲಿದೆ.

ಅಮೆರಿಕ ಗುಪ್ತಚರ ಪಡೆ ಎಫ್‌ಬಿಐಗೆ ಭಾರತೀಯ ಕಾಶ್ ಪಟೇಲ್‌ ಮುಖ್ಯಸ್ಥ

ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಮೂಲದ ಕಶ್ಯಪ್ ‘ಕಾಶ್’ ಪಟೇಲ್ ಅವರನ್ನು ದೇಶದ ಉನ್ನತ ಗುಪ್ತಚರ ಸಂಸ್ಥೆಯಾದ ‘ಎಫ್‌ಬಿಐ’ ನಿರ್ದೇಶಕರಾಗಿ ಆಯ್ಕೆ ಮಾಡಿದ್ದಾರೆ.‘ಕಾಶ್‌ ಅವರೊಬ್ಬ ಅದ್ಭುತ ವಕೀಲ, ತನಿಖಾಧಿಕಾರಿ ಮತ್ತು ‘ಅಮೆರಿಕಾ ಫಸ್ಟ್’ ಹೋರಾಟಗಾರ’ ಎಂದಿರುವ ಟ್ರಂಪ್‌, ‘ಕಾಶ್‌ ಅವರು ರಷ್ಯಾದ ಅನೇಕ ವಂಚನೆಗಳನ್ನು ಬಹಿರಂಗಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.

ಕಶ್ಯಪ್ ಪ್ರಮೋದ್ ಪಟೇಲ್ ಅಥವಾ ಕಾಶ್ ಪಟೇಲ್ ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿ ಗುಜರಾತಿ-ಭಾರತೀಯ ಪೋಷಕರಿಗೆ ಜನಿಸಿದ್ದರು. ಟ್ರಂಪ್ ಅವರ ಮೊದಲ ಅವಧಿಯಲ್ಲಿ, ಪಟೇಲ್ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಮತ್ತು ರಕ್ಷಣಾ ಕಾರ್ಯದರ್ಶಿರಾಗಿ ಸಲಹೆ ನೀಡಿದ್ದರು. ನ್ಯಾಯಾಂಗ ಇಲಾಖೆಯಲ್ಲೂ ಸೇವೆ ಸಲ್ಲಿಸಿದ್ದ ಕಾಶ್‌, ಟ್ರಂಪ್ ವಿರುದ್ಧದ ಪ್ರಕರಣಗಳಲ್ಲಿ ಅವರಿಗೆ ಸಹಾಯ ಮಾಡಿದ್ದರು. ರಷ್ಯಾ-ಟ್ರಂಪ್‌ ನಡುವಿನ ಸಂಘರ್ಷದಲ್ಲಿ ಟ್ರಂಪ್‌ ಪರ ಗಟ್ಟಿಯಾಗಿ ನಿಂತಿದ್ದರು.

ಕಾಶಿ ಕಾಲಭೈರವ ದೇಗುಲದಲ್ಲಿ ಕೇಕ್‌ ಕಟ್‌: ವಿವಾದ

ವಾರಾಣಸಿ: ಇನ್‌ಸ್ಟಾಗ್ರಾಂ ಸ್ಟಾರ್‌ ಹಾಗೂ ಮಾಡೆಲ್ ಮಮತಾ ರಾಯ್‌, ತಮ್ಮ ಹುಟ್ಟುಹಬ್ಬವನ್ನು ವಾರಾಣಸಿಯ ಕಾಲ ಭೈರವ ದೇವಸ್ಥಾನದಲ್ಲಿ ಕೇಕ್‌ ಕತ್ತರಿಸಿ ಆಚರಿಸಿದ್ದು ವಿವಾದಕ್ಕೀಡಾಗಿದೆ. ಈಕೆ ಗರ್ಭಗುಡಿಯಲ್ಲಿ ಕೇಕ್ ಕತ್ತರಿಸುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದಕ್ಕೆ ಭಕ್ತರು ಮತ್ತು ಧಾರ್ಮಿಕ ಮುಖಂಡರು ಕಿಡಿಕಾರಿದ್ದಾರೆ.

ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಇಲ್ಲ: ಕೇಜ್ರಿವಾಲ್‌

ನವದೆಹಲಿ: ಮುಂದಿನ ವರ್ಷದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಆಪ್‌ ನೇತಾರ ಅರವಿಂದ ಕೇಜ್ರಿವಾಲ್‌ ತಳ್ಳಿಹಾಕಿದ್ದಾರೆ.ಭಾಣುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ದೆಹಲಿಯಲ್ಲಿ ಯಾವುದೇ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ತಮ್ಮ ಮೇಲೆ ಆದ ದಾಳಿ ಖಂಡಿಸಿದ ಅವರು, ‘ನಾನು ದಿಲ್ಲಿಯಲ್ಲಿ ಕಾನೂನು-ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದ್ದೆ. ಆದರೆ ನನ್ನ ಮೇಲೇ ದಾಳಿ ನಡೆಸಲಾಯಿತು’ ಎಂದರು.

ದೆಹಲಿಯಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ಈ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಕೂಟದ ಅಡಿ ಮೈತ್ರಿ ಮಾಡಿಕೊಂಡಿದ್ದವು. ಆದರೆ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಅಕ್ಟೋಬರ್‌ನಲ್ಲಿ ನಡೆದ ಹರ್ಯಾಣ ವಿಧಾನಸಭೆ ಚುನಾವಣೆ ವೇಳೆಯೂ ಕಾಂಗ್ರೆಸ್‌ ಮತ್ತು ಆಪ್ ನಡುವೆ ಸೀಟ್‌ ಹಂಚಿಕೆ ವಿಚಾರವಾಗಿ ಹಲವು ಸುತ್ತಿನ ಮಾತುಕತೆ ನಡೆದರೂ ಕೂಡ ಒಮ್ಮತ ಮೂಡಿರಲಿಲ್ಲ.

ನನ್ನ ಮೊದಲ ಕೆಲಸ ಮಲಯಾಳಂ ಕಲಿಯುವುದು: ಪ್ರಿಯಾಂಕಾ

ವಯನಾಡು: ವಯನಾಡಿನಿಂದ ಲೋಕಸಭೆ ಉಪ ಚುನಾವಣೆ ಗೆದ್ದು ಸಂಸದೆಯಾಗಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಮಲಯಾಳಂ ಕಲಿಯುವುದು ತಮ್ಮ ಮೊದಲ ಕೆಲಸ ಎಂದು ಹೇಳಿದ್ದಾರೆ.ಭಾನುವಾರ ಮತದಾರರಿಗೆ ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಯನಾಡಿನಲ್ಲಿ ಗೆದ್ದ ಬಳಿಕ ಇಲ್ಲಿನ ಭಾಷೆ ಕಲಿಯಬೇಕಿರುವುದು ನನ್ನ ಕರ್ತವ್ಯ. ಹಾಗಾಗಿ ನಾನು ಮಲಯಾಳಂ ಕಲಿಯುತ್ತೇನೆ. ಹಾಗೆ ನಾನು ಇಲ್ಲಿಯೇ ನಿಮ್ಮ ಸೇವೆ ಮಾಡುತ್ತಾ ಇರುತ್ತೇನೆ. ಹಾಗಾಗಿ ಜನರು ನನ್ನನ್ನು ನೋಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದರು.

ಬಳಿಕ ವಯನಾಡಿನಲ್ಲಿ ಪುನರ್ವಸತಿ ಬಗ್ಗೆ ಮಾತನಾಡಿದ ಅವರು, ನಾನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆದು ಕೇಂದ್ರದ ಮೇಲೆ ಒತ್ತಡ ಹಾಕುವಂತೆ ಒತ್ತಾಯಿಸುತ್ತೇನೆ ಎಂದರು. ಜೊತೆಗೆ ದೇಶದ ಜನರು ವಯನಾಡಿಗೆ ಪ್ರವಾಸಕ್ಕಾಗಿ ಬರಬೇಕು. ಇಲ್ಲಿನ ಜನರು ಪ್ರವಾಸೋದ್ಯಮದ ಮೇಲೆ ಜೀವನ ನಡೆಸುತ್ತಿದ್ದಾರೆ ಎಂದರು.

Share this article