ನವದೆಹಲಿ: ವೈದ್ಯಕೀಯ ಪಿ.ಜಿ. ಕೋರ್ಸ್‌ಗಳಿಗೆ ಸಂಬಂಧಿಸಿ ರಾಜ್ಯ ಕೋಟಾದಡಿ ನೀಡುತ್ತಿದ್ದ ಸ್ಥಳೀಯ (ನಿವಾಸ ಆಧಾರಿತ) ಮೀಸಲಾತಿಯನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್, ಈ ರೀತಿಯ ಮೀಸಲಾತಿ ಅಸಾಂವಿಧಾನಿಕ. ಇದು ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಪಿ.ಜಿ.ಮೆಡಿಕಲ್ ಕೋರ್ಸ್‌ಗಳ ಪ್ರವೇಶವು ಮೆರಿಟ್ ಮೇಲೆ ನಡೆಯಬೇಕು ಎಂದು ಹೇಳಿದ ಕೋರ್ಟ್ ಆದರೆ, ಈಗಾಗಲೇ ರಾಜ್ಯಗಳ ಕೋಟಾದಡಿ ನಿವಾಸ ಆಧಾರಿತ ಮೀಸಲಾತಿ ನೀಡಿದ್ದರೆ ಅದಕ್ಕೆ ಈ ತೀರ್ಪು ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದೆ.
ಚಂಡೀಗಢದ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪಿಜಿ ವೈದ್ಯಕೀಯ ಕೋರ್ಸ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನಿವಾಸ ಆಧಾರದ ಮೀಸಲಾತಿ ಪರವಾಗಿ 2019ರಲ್ಲಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.
ನ್ಯಾಯಮೂರ್ತಿ ಹೃಷಿಕೇಷ್ ರಾಯ್, ನ್ಯಾ. ಸುದಾಂಶು ಧುಲಿಯಾ ಮತ್ತು ನ್ಯಾ. ಎಸ್‌ವಿಎನ್ ಭಟ್ಟಿ ಅವರಿದ್ದ ತ್ರಿಸದಸ್ಯ ಪೀಠವು ಈ ತೀರ್ಪು ನೀಡಿದೆ.
ಪಿ.ಜಿ.ಮೆಡಿಕಲ್ ಕೋರ್ಸ್‌ಗಳ ಪ್ರವೇಶ ವೇಳೆ ರಾಜ್ಯ ಕೋಟಾದಡಿ ನಿವಾಸ ಆಧಾರಿತ ಮೀಸಲಾತಿ ನೀಡುವುದು ಸ್ವೀಕಾರ್ಹವಲ್ಲ. ರಾಜ್ಯ ಕೋಟಾದಡಿಯ ಸೀಟುಗಳನ್ನು ನೀಟ್ ಪರೀಕ್ಷೆಯ ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ.
"ನಾವೆಲ್ಲರೂ ಭಾರತೀಯ ಭೂಪ್ರದೇಶದ ನಿವಾಸಿಗಳು. ನಮ್ಮಲ್ಲಿ ಪ್ರಾಂತೀಯ ಅಥವಾ ರಾಜ್ಯ ನಿವಾಸಿ ಎಂಬುದಿಲ್ಲ. ದೇಶದ ಯಾವುದೇ ಸ್ಥಳದಲ್ಲಿ ವಾಸಿಸುವ ಮತ್ತು ಯಾವುದೇ ಪ್ರದೇಶದಲ್ಲಿ ವ್ಯಾಪಾರ ಹಾಗೂ ಉದ್ಯೋಗ ನಡೆಸುವ ಹಕ್ಕನ್ನು ನಾವು ಹೊಂದಿದ್ದೇವೆ. ಅದೇ ರೀತಿ ದೇಶದ ಯಾವುದೇ ಭಾಗದ ಶಿಕ್ಷಣ ಸಂಸ್ಥೆಗೆ ಸೇರಲೂ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಎಂಬಿಬಿಎಸ್ ಕೋರ್ಸ್ ಪ್ರವೇಶ ವೇಳೆ ನಿರ್ದಿಷ್ಟ ಭಾಗದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬಹುದು. ಆದರೆ, ಸ್ಪೈಷಲೈಸ್ಡ್ ಡಾಕ್ಟರ್ಸ್‌ಗಳ ಅಗತ್ಯವನ್ನು ಪರಿಗಣಿಸಿ ಪಿ.ಜಿ.ಮೆಡಿಕಲ್ ಕೋರ್ಸ್‌ಗಳಲ್ಲಿ ಈ ರೀತಿಯ ಮೀಸಲಾತಿ ನೀಡಲು ಸಾಧ್ಯವಿಲ್ಲ. ಉನ್ನತಮಟ್ಟದಲ್ಲಿ ನಿವಾಸದ ಆಧಾರದ ಮೇಲೆ ಮೀಸಲಾತಿ ನೀಡುವುದು ಸಂವಿಧಾನದ 14ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ತಿಳಿಸಿತು.