ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದ ಆರೋಪ ಮಾಡಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಆಯೋಗದ ಮೇಲೆ ನಂಬಿಕೆ ಇಲ್ಲದಿದ್ದರೆ, ಕನಿಷ್ಠ ನೈತಿಕತೆಯ ಆಧಾರದಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಅಲ್ಲದೆ ಆಯೋಗದ ಮೇಲೆ ಇದೇ ರೀತಿಯ ಆರೋಪ ಮಾಡಿರುವ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳೂ ರಾಜೀನಾಮೆ ನೀಡಬೇಕು ಎಂದು ಪಕ್ಷ ಒತ್ತಾಯಿಸಿದೆ.
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ ಲೋಸಕಭಾ ಚುನಾವಣೆ ವೇಳೆ ಭಾರೀ ಅಕ್ರಮ ನಡೆದಿದೆ ಎಂದು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನಡೆಸಿದ ರ್‍ಯಾಲಿ ಬಗ್ಗೆ ಶನಿವಾರ ಇಲ್ಲಿ ಪ್ರತಿಕ್ರಿಯೆ ನೀಡಿದ ಪಕ್ಷದ ವಕ್ತಾರ ಗೌರವ್ ಭಾಟಿಯಾ, ‘ನೀವು ( ರಾಹುಲ್ ಗಾಂಧಿ) ಚುನಾವಣಾ ಆಯೋಗದ ವಿರುದ್ಧ ಮಾಧ್ಯಮಗಳಲ್ಲಿ ಆಧಾರರಹಿತ ಆರೋಪಗಳನ್ನು ಮಾಡಿ, ಪುರಾವೆ ಮತ್ತು ಲಿಖಿತ ಫೋಷಣೆಯನ್ನು ಕೇಳಿದಾಗ ಅದನ್ನು ನೀಡಲು ನಿರಾಕರಿಸುತ್ತೀರಿ. ಸುಪ್ರೀಂ ಕೋರ್ಟ್ ಕೂಡ ಆಯೋಗದ ಕಾರ್ಯನಿರ್ವಹಣೆ ಮತ್ತು ಪ್ರಾಮಾಣಿಕತೆ ಮೇಲೆ ಸಂದೇಹವಿಲ್ಲ ಎಂದಿತ್ತು. ಹೀಗಿರುವಾಗ, ನೀವು ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನ ಅವಲೋಕನಗಳನ್ನು ನಂಬದಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ’ ಎಂದಿದ್ದಾರೆ.
ಜತೆಗೆ, ‘ಚುನಾವಣೆಯ ಮೇಲೆ ನಂಬಿಕೆ ಇಲ್ಲದಿದ್ದರೆ ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಅವರೂ ತಮ್ಮತಮ್ಮ ಲೋಕಸಭೆ ಮತ್ತು ರಾಜ್ಯಸಭೆ ಸ್ಥಾನಗಳಿಗೆ ರಾಜೀನಾಮೆ ನೀಡಲಿ’ ಎಂದು ಸವಾಲು ಹಾಕಿದ್ದಾರೆ.ಜೊತೆಗೆ, ‘ನಿಮಗೆ ಯಾವುದು ಸರಿಹೊಂದುತ್ತದೆಯೋ ನೀವು ಅದನ್ನು ಸ್ವೀಕರಿಸುತ್ತೀರಿ. ಯಾವುದು ಅನನುಕೂಲ ಆಗುತ್ತದೆಯೋ ಅದನ್ನು ತಿರಸ್ಕರಿಸುತ್ತೀರಿ. ಬಳಿಕ ಆಯೋಗದ ಮೇಲೆ ಅಪಾದನೆ ಮಾಡುತ್ತೀರಿ’ ಎಂದು ಕಿಡಿಕಾರಿದರು.
ಬೆಂಗಳೂರು ಸೆಂಟ್ರಲ್‌ನ ಮಹದೇವಪುರ ಕ್ಷೇತ್ರದಲ್ಲಿ ಮತಚೋರಿ ನಡೆದಿದೆ ಎಂದು ಆರೋಪಿಸಿದ್ದ ರಾಹುಲ್, ‘ತಾವು ಸಂಸತ್ತಿನಲ್ಲಿ ಸಂವಿಧಾನದ ಮೇಲೆ ಪ್ರಮಾಣ ಮಾಡಿರುವ ಕಾರಣ, ಘೋಷಣಾ ಪತ್ರ ಸಲ್ಲಿಸುವುದಿಲ್ಲ’ ಎಂದಿದ್ದರು.
ಘೋಷಣಾ ಪತ್ರ ಸಲ್ಲಿಸಿ ಅಥವಾ
ಕ್ಷಮೆ ಕೇಳಿ : ರಾಗಾಗೆ ಆಯೋಗ
ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ಮತಚೋರಿ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಶನಿವಾರ ಮತ್ತೊಮ್ಮೆ ಚುನಾವಣಾ ಆಯೋಗ ಗರಂ ಆಗಿದ್ದು, ‘ತಾವು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಘೋಷಣಾ ಪತ್ರಕ್ಕೆ ಸಹಿ ಹಾಕಿ ಇಲ್ಲವೇ ದೇಶದ ಮುಂದೆ ಕ್ಷಮೆ ಕೇಳಿ’ ಎಂದಿದೆ.ರಾಹುಲ್ ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಆರೋಪಿಸುತ್ತಿದ್ದಂತೆ ಆಯೋಗ ಘೋಷಣಾ ಪತ್ರಕ್ಕೆ ಸಹಿ ಹಾಕುವಂತೆ ಸೂಚಿಸಿತ್ತು. ಆದರೆ ರಾಹುಲ್ ಇದಕ್ಕೆ ಒಪ್ಪಿರಲಿಲ್ಲ. ಈ ಸಂಬಂಧ ಇದೀಗ ಮತ್ತೆ ಕಿಡಿಕಾರಿರುವ ಆಯೋಗ, ‘ ನಿಯಮದ ಪ್ರಕಾರ ರಾಹುಲ್ ಗಾಂಧಿ ಒಂದೋ ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು. ಇಲ್ಲದಿದ್ದರೆ ಸುಳ್ಳು ಆರೋಪಕ್ಕೆ ಸಂಬಂಧಿಸಿದಂತೆ ದೇಶದ ಮುಂದೆ ಕ್ಷಮೆ ಕೇಳಬೇಕು’ ಎಂದಿದೆ.