ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಪುನಾರಚನೆ

KannadaprabhaNewsNetwork |  
Published : May 01, 2025, 12:47 AM ISTUpdated : May 01, 2025, 04:59 AM IST
ಅಲೋಕ್‌ ಜೋಶಿ  | Kannada Prabha

ಸಾರಾಂಶ

ಪಹಲ್ಗಾಂ ಉಗ್ರ ದಾಳಿ ಬೆನ್ನಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಕೇಂದ್ರ ಸರ್ಕಾರ 

ನವದೆಹಲಿ: ಪಹಲ್ಗಾಂ ಉಗ್ರ ದಾಳಿ ಬೆನ್ನಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ಭದ್ರತಾ ಮಂಡಳಿಗೆ ಸಲಹೆ ನೀಡುವ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ (ಎನ್‌ಎಸ್‌ಎಬಿ)ಯನ್ನು ಬುಧವಾರ ಪುನರ್‌ರಚಿಸಿದೆ. ರಿಸರ್ಚ್‌ ಮತ್ತು ಅನಾಲಿಸಿಸ್‌ ವಿಂಗ್‌ (ಗುಪ್ತಚರ ಸಂಸ್ಥೆ-ರಾ) ಮಾಜಿ ಮುಖ್ಯಸ್ಥ ಅಲೋಕ್‌ ಜೋಶಿ ಅವರನ್ನು ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿದೆ.

ಅಧ್ಯಕ್ಷರ ಜತೆಗೆ ಆರು ಮಂದಿ ಹೊಸ ಸದಸ್ಯರನ್ನೂ ಸರ್ಕಾರ ನೇಮಿಸಿದೆ. ನಿವೃತ್ತ ವೆಸ್ಟರ್ನ್‌ ಏರ್‌ ಕಮಾಂಡರ್‌ ಏರ್‌ ಮಾರ್ಷಲ್‌ ಪಿ.ಎಂ.ಸಿನ್ಹಾ, ನಿವೃತ್ತ ಸದರ್ನ್‌ ಆರ್ಮಿ ಕಮಾಂಡರ್‌ ಲೆ.ಜ.ಎ.ಕೆ.ಸಿಂಗ್‌ ಮತ್ತು ನಿವೃತ್ತ ರಿಯರ್‌ ಅಡ್ಮಿರಲ್‌ ಮೋಂಟಿ ಖನ್ನಾ, ಭಾರತೀಯ ಪೊಲೀಸ್‌ ಸೇವೆಯ ನಿವೃತ್ತ ಅಧಿಕಾರಿಗಳಾದ ರಾಜೀವ್‌ ರಂಜನ್‌ ವರ್ಮಾ ಮತ್ತು ಮನಮೋಹನ್‌ ಸಿಂಗ್‌, ಭಾರತೀಯ ವಿದೇಶಾಂಗ ಸೇವೆಯ ನಿವೃತ್ತ ಅಧಿಕಾರಿ ಬಿ.ವೆಂಕಟೇಶ್‌ ವರ್ಮಾ ಅವರು ಮಂಡಳಿಯ ಸದಸ್ಯರು.

ಎನ್‌ಎಬಿ ಬಹುಶಿಸ್ತೀಯ ಸಮಿತಿಯಾಗಿದ್ದು, ಸರ್ಕಾರದ ಹೊರಗಿರುವ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಭದ್ರತಾ ಮಂಡಳಿ(ಎನ್‌ಎಸ್‌ಎ)ಗೆ ದೀರ್ಘಾವಧಿಯ ವಿಶ್ಲೇಷಣೆ ಒದಗಿಸುವುದು ಮತ್ತು ಎನ್‌ಎಸ್‌ಎ ಎತ್ತುವ ವಿಚಾರಗಳಿಗೆ ಸಂಬಂಧಿಸಿ ಪರಿಹಾರಗಳು ಹಾಗೂ ಮತ್ತು ನೀತಿನಿರೂಪಣೆ ಕುರಿತು ಆಯ್ಕೆಗಳ ನೆರವು ನೀಡುವುದು ಈ ಮಂಡಳಿಯ ಕಾರ್ಯ.

ಪ್ರಧಾನಿ ಮೋದಿ ಅವರ ಮನೆಯಲ್ಲಿ ನಡೆದ ಭದ್ರತೆಗೆ ಸಂಬಂಧಿಸಿದ ಕ್ಯಾಬಿನೆಟ್‌ ಸಮಿತಿ(ಸಿಸಿಎಸ್‌) ಸಭೆ ಬಳಿಕ ಈ ಎನ್‌ಎಸ್‌ಎಬಿಯನ್ನು ಪುನರ್‌ ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಿಸಿಎಸ್‌ ಸಭೆ ಜತೆಗೆ ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್‌ ಸಮಿತಿ ಸಭೆ ಮತ್ತು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್‌ ಕಮಿಟಿ ಸಭೆ ಕೂಡ ಇದೇ ವೇಳೆ ನಡೆಸಲಾಯಿತು. ಪಹಲ್ಗಾಂ ದಾಳಿ ಬಳಿಕ ಏ.23ರಂದು ಭದ್ರತೆಗೆ ಸಂಬಂಧಿಸಿದ ಕ್ಯಾಬಿನೆಟ್‌ ಸಭೆ ನಡೆಸಲಾಗಿತ್ತು.

ಯಾರೀ ಅಲೋಕ್‌ ಜೋಶಿ?

ಅಲೋಕ್‌ ಜೋಶಿ ಅವರು ಭಾರತದ ಗುಪ್ತಚರ ಸಂಸ್ಥೆ ‘ರಾ’ ದ ಮಾಜಿ ಮುಖ್ಯಸ್ಥರು. 2012ರಿಂದ 2014ರ ವರೆಗೆ ರಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಜೋಶಿ ತಮ್ಮ ಕಾರ್ಯಾವಧಿಯಲ್ಲಿ ಅನೇಕ ಮಹತ್ವದ ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದರು. ಅವರೊಬ್ಬ ಅನುಭವಿ ಗುಪ್ತಚರ ಅಧಿಕಾರಿಯಾಗಿದ್ದು, ಭಾರತದ ಭದ್ರತೆ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸಿದವರು. ಜೆಎನ್‌ಯುನಲ್ಲಿ ಓದಿರುವ ಜೋಶಿ ಅವರು ಹರ್ಯಾಣ ಕೆಡಾರ್‌ನ 1976ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ. 2005ರಲ್ಲಿ ಗುಪ್ತಚರದಳದ ಜಂಟಿ ನಿರ್ದೇಶಕರಾಗಿ ನೇಮಕಗೊಂಡ ಅ‍ವರು, 2010ರಲ್ಲಿ ವಿಶೇಷ ಕಾರ್ಯದರ್ಶಿಯಾಗಿ ರಾಗೆ ನೇಮಕಗೊಂಡಿದ್ದರು. 2012ರಿಂದ 14ರ ವರೆಗೆ ರಾ ಮುಖ್ಯಸ್ಥರಾಗಿದ್ದರು.

PREV

Recommended Stories

ಮಹಿಳಾ ಡಿಎಸ್ಪಿಗೆ ‘ಎಷ್ಟು ಧೈರ್ಯ’ ಎಂದ ಅಜಿತ್‌: ವಿವಾದ
ಭಾರತಕ್ಕೆ ಮತ್ತಷ್ಟು ರಕ್ಷಣಾ ಬಲ: 15 ವರ್ಷದ ನೀಲನಕ್ಷೆ ಸಿದ್ಧ