ಕೋಲ್ಕತಾ: ಬಂಗಾಳದಲ್ಲಿ ನಡೆದ ವೈದ್ಯೆ ರೇಪ್ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರಿಗೆ ‘ಮಂಗಳವಾರ ಸಂಜೆ 5 ಗಂಟೆಯೊಳಗೆ ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ’ ಎಂದು ಸುಪ್ರೀಂ ಕೋರ್ಟ್ ಸೂಚಿಸಿದ್ದರೂ, ಕಿರಿಯ ವೈದ್ಯರು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.
ಬೇಡಿಕೆ ಈಡೇರುವ ತನಕ ಪ್ರತಿಭಟನೆ ಕೈಬಿಡಲ್ಲ ಎಂದಿದ್ದಾರೆ.ಸೋಮವಾರ ಸುಪ್ರೀಂ ಕೋರ್ಟ್, ‘ಮಂಗಳವಾರ ಸಂಜೆ 5ರೊಳಗೆ ಪ್ರತಿಭಟನೆ ನಿಲ್ಲಿಸಿ, ಕರ್ತವ್ಯಕ್ಕೆ ಹಾಜರಾಗಿ. ಯಾವುದೇ ಕಾನೂನು ಕ್ರಮವನ್ನು ಕೈಗೊಳ್ಳುವುದಿಲ್ಲ’ ಎನ್ನುವ ಭರವಸೆ ನೀಡಿತ್ತು. ಆದರೆ ಸುಪ್ರೀಂ ಆದೇಶ ಧಿಕ್ಕರಿಸಿ, ವೈದ್ಯರು ಮಂಗಳವಾರವೂ ಕೆಲಸಕ್ಕೆ ಹಾಜರಾಗದೇ ಪ್ರತಿಭಟಿಸಿದರು.
‘ಪೊಲೀಸ್ ಆಯುಕ್ತ, ಆರೋಗ್ಯ ಇಲಾಖೆ ಕಾರ್ಯದರ್ಶಿ, ಆರೋಗ್ಯ ಸೇವೆ ನಿರ್ದೇಶಕ, ವೈದ್ಯಕೀಯ ಶಿಕ್ಷಣನಿರ್ದೇಶಕರನ್ನು ಸಂಜೆ 5 ಗಂಟೆಯೊಳಗೆ ಅಮಾನತುಗೊಳಿಸಲು ಕೋರಿದ್ದೆವು. ನಮ್ಮ ಬೇಡಿಕೆಗಳು ಈಡೇರದ ನಾವು ಪ್ರತಿಭಟನೆ ಮುಂದುವರೆಸುತ್ತಿದ್ದೇವೆ’ ಎಂದು ಪ್ರತಿಭಟನಾ ನಿರತ ವೈದ್ಯರು ಹೇಳಿದ್ದಾರೆ.
51 ಸಂದೀಪ್ ಘೋಷ್ ಆಪ್ತ ವೈದ್ಯರ ಮೇಲೆ ಶಿಸ್ತುಕ್ರಮ ಸಂಭವ
ಕೋಲ್ಕತಾ: ವೈದ್ಯೆಯ ಅತ್ಯಾಚಾರ-ಕೊಲೆ ಸಂಭವಿಸಿದ ಕೋಲ್ಕತಾ ಆರ್‌ಜಿ ಕರ್ ಆಸ್ಪತ್ರೆ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‌ರ ಚೇಲಾಗಳೆನ್ನಲಾದ ಅದೇ ಆಸ್ಪತ್ರೆಯ 51 ವೈದ್ಯರಿಗೆ ಆಸ್ಪತ್ರೆಯ ವಿಚಾರಣೆ ಸಮಿತಿ ಸೆ.11ರಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದೆ.ಈ 51 ವೈದ್ಯರು ಇತರ ವೈದ್ಯರಿಗೆ ಬೆದರಿಕೆ ಹಾಕುತ್ತಿದ್ದರು ಹಾಗೂ ಆಸ್ಪತ್ರೆಯೊಳಗೆ ಭಯ ವಾತಾವರಣ ಸೃಷ್ಟಿಸುತ್ತಿದ್ದರು ಎಂಬ ದೂರುಗಳಿವೆ. ಹೀಗಾಗಿ 11ಕ್ಕೆ ವಿಚಾರಣೆ ಎದುರಿಸಲು ಇವರಿಗೆ ಸೂಚಿಸಲಾಗಿದೆ. ವಿಚಾರಣಾ ದಿನ ಹೊರತುಪಡಿಸಿ ಮಿಕ್ಕ ದಿನಗಳಲ್ಲಿ ಆಸ್ಪತ್ರೆ ಪ್ರವೇಶಿಸದಂತೆ ಇವರಿಗೆ ಸೂಚಿಸಲಾಗಿದೆ.
ಡಾ। ಸಂದೀಪ್ ಘೋಷ್‌ರನ್ನು ಈಗಾಗಲೇ ಸಿಬಿಐ ಬಂಧಿಸಿದೆ. ಮಂಗಳವಾರ ಕೋರ್ಟು ಅವರನ್ನು 14 ದಿನ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.
ಮಾತುಕತೆಗೆ ಮಮತಾ ಆಹ್ವಾನ: ವೈದ್ಯರ ನಕಾರ
ಕೋಲ್ಕತಾ: ನಗರ ಪೊಲೀಸ್ ಕಮಿಶ್ನರ್, ಆರೋಗ್ಯ ಕಾರ್ಯದರ್ಶಿ ಬದಲಾವಣೆ ಸೇರಿ ಹಲವು ಬೇಡಿಕೆ ಇಟ್ಟಿರುವ ಮುಷ್ಕರ ನಿರತ ವೈದ್ಯರಿಗೆ ಮಾತುಕತೆಗಾಗಿ ಮಮತಾ ಬ್ಯಾನರ್ಜಿ ಆಹ್ವಾನ ನೀಡಿದ್ದಾರೆ. ಈ ಸಂಬಂಧ ಸಚಿವಾಲಯದಿಂದ ವೈದ್ಯರಿಗೆ ಇ-ಮೇಲ್ ಮೂಲಕ ಆಹ್ವಾನ ಕಳಿಸಲಾಗಿದೆ. ‘ಆದರೆ ನಮಗೆ ಆಹ್ವಾನ ಬಂದಿರುವುದು ಆರೋಗ್ಯ ಕಾರ್ಯದರ್ಶಿಯಿಂದ. ಅವರ ವಿರುದ್ಧವೇ ನಾವು ಪ್ರತಿಭಟಿಸುತ್ತಿದ್ದೇವೆ. ಇಂಥ ಆಹ್ವಾನ ನಮಗೆ ಅವಮಾನ. ಹೀಗಾಗಿ ಸಭೆಗೆ ಹೋಗಲ್ಲ’ ಎಂದು ವೈದ್ಯರು ಹೇಳಿದ್ದಾರೆ.