ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್ ಪುನಾರಂಭಗೊಳ್ಳಲು ಮಳೆರಾಯ ಅಡ್ಡಿಪಡಿಸಿದ. ಶನಿವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ರೈಡರ್ಸ್ ನಡುವಿನ ಪಂದ್ಯ ಟಾಸ್ ಕೂಡ ಕಾಣದೆ ರದ್ದಾಯಿತು.
ಬೆಂಗಳೂರು : ಭಾರತ-ಪಾಕಿಸ್ತಾನ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್ ಪುನಾರಂಭಗೊಳ್ಳಲು ಮಳೆರಾಯ ಅಡ್ಡಿಪಡಿಸಿದ. ಶನಿವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ರೈಡರ್ಸ್ ನಡುವಿನ ಪಂದ್ಯ ಟಾಸ್ ಕೂಡ ಕಾಣದೆ ರದ್ದಾಯಿತು.
ಉಭಯ ತಂಡಗಳಿಗೆ ತಲಾ 1 ಅಂಕ ಹಂಚಲಾಯಿತು. ಇದರಿಂದಾಗಿ ಹಾಲಿ ಚಾಂಪಿಯನ್ ಕೆಕೆಆರ್ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದರೆ, ಆರ್‌ಸಿಬಿ ಪ್ಲೇ-ಆಫ್ ಹೊಸ್ತಿಲು ತಲುಪಿದ್ದು, ಅಗ್ರ-4ರಲ್ಲಿ ಸ್ಥಾನ ಬಹುತೇಕ ಖಚಿತಗೊಂಡಿದೆ. ತಂಡ ಬಾಕಿ ಇರುವ 2 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ, ಅಗ್ರ-2ರಲ್ಲಿ ಸ್ಥಾನ ಗಳಿಸಿ, ಕ್ವಾಲಿಫೈಯರ್-1 ಪಂದ್ಯಕ್ಕೆ ಅರ್ಹತೆ ಪಡೆಯುವ ಸಾಧ್ಯತೆಯೂ ಇದೆ.
ಶನಿವಾರ ರಾಜ್ಯ ರಾಜಧಾನಿಯಲ್ಲಿ ಭಾರೀ ಮಳೆ ಮುನ್ಸೂಚನೆ ಇತ್ತು. ನಿರೀಕ್ಷೆಯಂತೆಯೇ ಸಂಜೆ 6.15ರ ಸುಮಾರಿಗೆ ಆರಂಭಗೊಂಡ ಮಳೆ ರಾತ್ರಿಯಾದರೂ ನಿಲ್ಲಲಿಲ್ಲ. ಸತತವಾಗಿ ಮಳೆ ಸುರಿದ ಕಾರಣ, ಪಂದ್ಯವನ್ನು ರದ್ದುಗೊಳಿಸದೆ ಬೇರೆ ಆಯ್ಕೆಯೇ ಇರಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್-ಏರ್ ವ್ಯವಸ್ಥೆ ಇರುವ ಕಾರಣ ಮಳೆ ನಿಂತ 20-30 ನಿಮಿಷಗಳಲ್ಲಿ ಆಟ ಆರಂಭಿಸಬಹುದು. ಆದರೆ ಮಳೆ ನಿಲ್ಲಲೇ ಇಲ್ಲ.
6.15ರಿಂದ 7.30ರ ವರೆಗೂ ಧಾರಾಕಾರವಾಗಿ ಸುರಿದ ಮಳೆ ಆ ಬಳಿಕ ನಿಧಾನಗೊಂಡಿತು. ಸುಮಾರು 8 ಗಂಟೆ ಸಮಯದಲ್ಲಿ ಮೈದಾನಕ್ಕೆ ಹೊದಿಸಿದ್ದ ಹೊದಿಕೆಗಳನ್ನು ತೆಗೆಯಲು ಮೈದಾನ ಸಿಬ್ಬಂದಿ ಸಿದ್ಧತೆ ನಡೆಸಿದರು. 4ನೇ ಅಂಪೈರ್ ಮೈದಾನಕ್ಕಿಳಿದು ಪರಿಶೀಲನೆ ನಡೆಸಿ ಬಳಿಕ ಪಿಚ್ ಕ್ಯುರೇಟರ್ ಜೊತೆ ಚರ್ಚೆ ನಡೆಸಿದರು. ಆದರೆ ಮತ್ತೆ ಮಳೆ ಜೋರಾದ ಕಾರಣ, ಪಂದ್ಯ ಆರಂಭಗೊಳ್ಳುವ ನಿರೀಕ್ಷೆ ಹುಸಿಯಾಯಿತು.
ಅಭಿಮಾನಿಗಳಿಗೆ ಭಾರೀ ನಿರಾಸೆ
ಭಾರೀ ಮಳೆ ಮುನ್ಸೂಚನೆ ಇದ್ದರೂ, ಕ್ರೀಡಾಂಗಣಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಮಳೆ ನಿಲ್ಲಲಿದೆ. ಪಂದ್ಯ ಆರಂಭಗೊಳ್ಳಲಿದೆ ಎನ್ನುವ ವಿಶ್ವಾಸ ಎಲ್ಲರಲ್ಲೂ ಇತ್ತು. ಆದರೆ, ಅಭಿಮಾನಿಗಳ ಆಸೆಗೆ ಮಳೆ ತಣ್ಣೀರೆರಚಿತು. ಬಿಳಿ ಜೆರ್ಸಿ ತೊಟ್ಟು
ಬಂದಿದ್ದ ಕೊಹ್ಲಿ ಫ್ಯಾನ್ಸ್!
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಮೊದಲ ಬಾರಿಗೆ ಮೈದಾನಕ್ಕಿಳಿಯಲಿದ್ದಾರೆ ಎಂಬ ಕಾರಣಕ್ಕೆ, ಅವರಿಗೆ ಗೌರವ ಸೂಚಿಸುವ ಉದ್ದೇಶದಿಂದ ಸಾವಿರಾರು ಅಭಿಮಾನಿಗಳು ‘ವಿರಾಟ್ 18’ ಎಂದು ಬರೆದಿದ್ದ ಭಾರತ ಟೆಸ್ಟ್ ತಂಡದ ಜೆರ್ಸಿಯನ್ನು ಹೋಲುವ ಬಿಳಿ ಬಣ್ಣದ ಜೆರ್ಸಿಗಳನ್ನು ತೊಟ್ಟು ಕ್ರೀಡಾಂಗಣಕ್ಕೆ ಬಂದಿದ್ದರು. ಅಭಿಮಾನಿಗಳ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು.ಮೇ 23ಕ್ಕೆ ಸನ್‌ರೈಸರ್ಸ್
ವಿರುದ್ಧ ಆರ್‌ಸಿಬಿಗೆ ಪಂದ್ಯ
ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಮೇ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ತಂಡ ಮುಂದಿನ ಒಂದು ವಾರ ಬೆಂಗಳೂರಲ್ಲೇ ಉಳಿಯಲಿದೆ. ಆ ಬಳಿಕ ಆರ್‌ಸಿಬಿ ಲಖನೌಗೆ ಪ್ರಯಾಣಿಸಿ ಮೇ 27ರಂದು ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.