ಪಿಟಿಐ ಧುಳೆ/ನವದೆಹಲಿಕರ್ನಾಟಕ ಹಾಗೂ ಕೆಲ ರಾಜ್ಯಗಳಲ್ಲಿ ಮಹಿಳೆಯರೂ ಸೇರಿದಂತೆ ವಿವಿಧ ವರ್ಗಗಳಿಗೆ ಪ್ರತಿ ತಿಂಗಳು ಹಣ ನೀಡುವ ‘ಗ್ಯಾರಂಟಿ’ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಪಕ್ಷ ಇದೀಗ ಕೇಂದ್ರದಲ್ಲೂ ಇದೇ ಪ್ರಯೋಗಕ್ಕೆ ದೊಡ್ಡ ಮಟ್ಟದಲ್ಲಿ ಕೈಹಾಕಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ಕಡು ಬಡ ಕುಟುಂಬದ ತಲಾ ಒಬ್ಬ ಮಹಿಳೆಗೆ ‘ಮಹಾಲಕ್ಷ್ಮೀ ಗ್ಯಾರಂಟಿ’ ಯೋಜನೆಯಡಿ ಪ್ರತಿ ವರ್ಷ 1 ಲಕ್ಷ ರು. ನಗದು ನೀಡುವುದಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.ಇದರ ಜೊತೆಗೆ, ಕೇಂದ್ರ ಸರ್ಕಾರದ ನೌಕರಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವುದು, ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟದ ನೌಕರರಿಗೆ ನೀಡುವ ಕೇಂದ್ರ ಸರ್ಕಾರದ ವೇತನವನ್ನು ದುಪ್ಪಟ್ಟು ಮಾಡುವುದು, ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಹಾಸ್ಟೆಲ್ ತೆರೆಯುವುದು ಹಾಗೂ ಎಲ್ಲಾ ಪಂಚಾಯ್ತಿಗಳಲ್ಲೂ ಅರೆ ನ್ಯಾಯಾಂಗ ಅಧಿಕಾರಿಯೊಬ್ಬರನ್ನು ನೇಮಿಸಿ ಮಹಿಳೆಯರಿಗೆ ಅವರ ಹಕ್ಕುಗಳನ್ನು ಪಡೆದುಕೊಳ್ಳಲು ನೆರವಾಗುವ ಒಟ್ಟು ಐದು ಗ್ಯಾರಂಟಿಗಳನ್ನು ‘ನಾರಿ ನ್ಯಾಯ’ ಹೆಸರಿನಲ್ಲಿ ರಾಹುಲ್ ಗಾಂಧಿ ಪ್ರಕಟಿಸಿದ್ದಾರೆ.ಮಹಾರಾಷ್ಟ್ರದ ಧುಳೆಯಲ್ಲಿ ಬುಧವಾರ ನಡೆದ ಮಹಿಳಾ ಸಮಾವೇಶದಲ್ಲಿ ರಾಹುಲ್ ಈ ಘೋಷಣೆಗಳನ್ನು ಮಾಡುತ್ತಿದ್ದಂತೆ ಈ ಬಗ್ಗೆ ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ನಮ್ಮ ಭರವಸೆಗಳು ಬರೀ ಭರವಸೆಗಳಲ್ಲ. ಇವುಗಳನ್ನು ನಾವು ಜಾರಿಗೊಳಿಸುವುದು ಶಿಲಾಶಾಸನದಷ್ಟೇ ಸತ್ಯ. ನಾರಿ ನ್ಯಾಯ ಗ್ಯಾರಂಟಿಗಳೊಂದಿಗೆ ನಮ್ಮ ಪಕ್ಷವು ದೇಶದ ಮಹಿಳೆಯರಿಗಾಗಿ ಹೊಸ ಅಜೆಂಡಾ ನಿಗದಿಪಡಿಸುತ್ತಿದೆ’ ಎಂದು ತಿಳಿಸಿದ್ದಾರೆ.ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಕೂಡ ಈ ಕುರಿತು ಹೇಳಿಕೆ ನೀಡಿ, ‘ನಮ್ಮ ಪಕ್ಷ ನಾರಿ ನ್ಯಾಯ ಯೋಜನೆಯಡಿ ಇಂದು ಮಹಿಳೆಯರಿಗಾಗಿ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಈಗಾಗಲೇ ನಾವು ರೈತರಿಗಾಗಿ ಕಿಸಾನ್ ನ್ಯಾಯ, ಹಿಸೆದಾರಿ ನ್ಯಾಯ ಹಾಗೂ ಯುವಕರಿಗಾಗಿ ಯುವ ನ್ಯಾಯ ಕಾರ್ಯಕ್ರಮಗಳನ್ನು ಘೋಷಿಸಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.