ಮುಂಬೈ: ಹೈದ್ರಾಬಾದ್‌ನ ರಾಸಾಯನಿಕ ಫ್ಯಾಕ್ಟರಿಯೊಂದರ ಮೇಲೆ ದಾಳಿ ನಡೆಸಿರುವ ಮಹಾರಾಷ್ಟ್ರದ ಪುಣೆ ಪೊಲೀಸರು ಭರ್ಜರಿ 12000 ಕೋಟಿ ರು. ಮೊತ್ತದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲೇ ದೇಶದಲ್ಲಿ ಒಂದೇ ಸ್ಥಳದಲ್ಲಿ ವಶಪಡಿಸಿಕೊಂಡ ಭಾರೀ ಮೊತ್ತದ ಮಾದಕ ವಸ್ತುವಾಗಿದೆ. ಪ್ರಕರಣ ಸಂಬಂಧ 13 ಜನರನ್ನು ಬಂಧಿಸಲಾಗಿದೆ. ಈ ಪೈಕಿ ಒಬ್ಬ ನುರಿತ ಟೆಕ್ಕಿ ಮತ್ತು ಓರ್ವ ಬಾಂಗ್ಲಾದೇಶ ಮೂಲದ ಮಹಿಳೆ ಕೂಡಾ ಸೇರಿದ್ದಾರೆ.
ಇತ್ತೀಚೆಗೆ ಪುಣೆ ಪೊಲೀಸರು ವ್ಯಕ್ತಿಯೊಬ್ಬನಿಂದ 25 ಲಕ್ಷ ರು. ಮೌಲ್ಯದ 200 ಗ್ರಾಂ ಮೆಫಡ್ರೋನ್ ಮಾದಕ ವಸ್ತು ವಶಪಡಿಸಿಕೊಂಡಿದ್ದರು. ಈ ಮಾದಕ ವಸ್ತು ಮಾರಾಟದ ಜಾಲ ಹಿಡಿದು ಹೊರಟಾಗ ಅದು ಅವರನ್ನು ಹೈದ್ರಾಬಾದ್‌ನ ಚೆರಮಲ್ಲಿ ಪ್ರದೇಶದಲ್ಲಿನ ರಾಸಾಯನಿಕ ಉತ್ಪಾದನಾ ಕಾರ್ಖಾನೆಯೊಂದಕ್ಕೆ ಕರೆದೊಯ್ದಿದೆ. ಅದರ ಮೇಲೆ ದಾಳಿ ನಡೆಸಿದಾಗ, ಒಳಗೆ ಅತ್ಯಾಧುನಿಕ ಯಂತ್ರೋಪಕರಣ ಬಳಸಿ ಮಾದಕ ವಸ್ತು ತಯಾರಿಸುತ್ತಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ದಾಳಿ ವೇಳೆ 12000 ಕೋಟಿ ರು.ಮೌಲ್ಯದ 35000 ಲೀ.ನಷ್ಟು ಡ್ರಗ್ಸ್ ತಯಾರಿಸಲು ಬಳಸುವ ರಾಸಾಯನಿಕ ಪತ್ತೆಯಾಗಿದ್ದು ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಈ ಗುಂಪು, ದೇಶ ಮತ್ತು ವಿದೇಶಗಳಲ್ಲೂ ತನ್ನ ಜಾಲದ ಮೂಲಕ ಮಾದಕ ವಸ್ತು ವಿತರಣೆ ಮಾಡುತ್ತಿತ್ತು ಎಂದು ಕಂಡುಬಂದಿದೆ. ಹಲವು ವರ್ಷಗಳಿಂದ ನಡೆಯುತ್ತಿದ್ದ ಈ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾದ ಬಹುತೇಕ ಡ್ರಗ್ಸ್ ಅನ್ನು ಮುಂಬೈಗೆ ಸಾಗಿಸಲಾಗುತ್ತಿತ್ತು ಎಂದೂ ಕಂಡುಬಂದಿದೆ.
ಈ ಕುರಿತು ಖಚಿತ ಮಾಹಿತಿ ಪಡೆದಿದ್ದ ಪೊಲೀಸರ ತಂಡ ಕಳೆದ ಒಂದು ತಿಂಗಳಿನಿಂದ ಜಾಲದ ಮೇಲೆ ನಿಗಾ ವಹಿಸಿ ಏಕಕಾಲಕ್ಕೆ 60 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಬಂಧಿತರ ಪೈಕಿ ಓರ್ವ ನುರಿತ ಟೆಕ್ಕಿ ಇದ್ದು, ಈತ ರಾಸಾಯನಿಕ ಬಳಸಿ ಮಾದಕವಸ್ತು ತಯಾರಿಸುವ ತಂತ್ರಜ್ಞಾನವನ್ನು ಸಿದ್ಧಿಸಿಕೊಂಡಿದ್ದ.