ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ವಿ. ಡಿ. ಸತೀಶನ್ ವಿಧಾನಸಭೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತ ಶ್ವೇತಪತ್ರ ಮಂಡಿಸಿದ್ದಾರೆ. ಅದರಲ್ಲಿ ರಾಜ್ಯ 5 ಲಕ್ಷ ಕೋಟಿ ರು. ಸಾಲದಲ್ಲಿದ್ದು, ಒಟ್ಟಾರೆ ಆದಾಯದಲ್ಲಿ ಶೇ.30ರಷ್ಟು ವೇತನ ಪಾವತಿಗೆ, ಶೇ.20.9ರಷ್ಟು ಸಾಲದ ಬಡ್ಡಿಗೆ ವ್ಯಯವಾಗುತ್ತಿದೆ ಎಂಬ ಗಂಭೀರ ಅಂಕಿ ಅಂಶಗಳಿವೆ
ವರದಿ ಅನ್ವಯ, ರಾಜ್ಯದ ಬಾಹ್ಯ ಸಾಲ 5.07 ಲಕ್ಷ ಕೋಟಿ ರು.ನಷ್ಟಿದೆ. ಇದು ರಾಜ್ಯದ ಒಟ್ಟು ಸಮಗ್ರ ಉತ್ಪನ್ನದ ಶೇ.35ರಷ್ಟಿದೆ (ರಾಷ್ಟ್ರೀಯ ಸರಾಸರಿ ಶೇ.29). ರಾಜ್ಯದ ಒಟ್ಟು ಆದಾಯದಲ್ಲಿ ಶೇ.77ರಷ್ಟು ಹಣ ಕಡ್ಡಾಯವಾಗಿ ಮಾಡಲೇಬೇಕಾದ ಖರ್ಚುವೆಚ್ಚಗಳಿಗೆ (ರಾಷ್ಟ್ರೀಯ ಸರಾಸರಿ ಶೇ.46) ಹೋಗುತ್ತಿದೆ.
ಹೀಗಾಗಿ ಒಟ್ಟು ಆದಾಯದಲ್ಲಿ ಅಭಿವೃದ್ಧಿ, ಮೂಲಸೌಕರ್ಯ, ಕಲ್ಯಾಣ ಯೋಜನೆಗೆ ಉಳಿಯುವುದು ಶೇ.23ರಷ್ಟು ಹಣ ಮಾತ್ರ. ಜೊತೆಗೆ ರಾಜ್ಯದ ಒಟ್ಟು ಬಂಡವಾಳ ವೆಚ್ಚವು ರಾಜ್ಯದ ಒಟ್ಟು ಆದಾಯದಲ್ಲಿ ಕೇವಲ ಶೇ.1.3ರಷ್ಟು ಮಾತ್ರವೇ ಇದೆ. ಇದು ದೇಶದಲ್ಲೇ ಅತ್ಯಂತ ಕಡಿಮೆ ಎಂದು ವರದಿ ಹೇಳಿದೆ.ಸರ್ಕಾರದ ಈ ಆರ್ಥಿಕ ಪರಿಸ್ಥಿತಿಯು, ಚುನಾವಣೆ ವೇಳೆ ಕರ್ನಾಟಕದ ಮಾದರಿ ಹಲವು ಉಚಿತ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಕೇರಳದ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಸವಾಲಾಗುವ ನಿರೀಕ್ಷೆ ಇದೆ.