;Resize=(412,232))
ನವದೆಹಲಿ: ಆಪರೇಷನ್ ಸಿಂದೂರದ ಬಳಿಕ ಜಾಗತಿಕವಾಗಿ ಉಗ್ರಪೋಷಕ ಪಾಕಿಸ್ತಾನದ ಬಣ್ಣ ಬಯಲು ಮಾಡಲು ಸರ್ವಪಕ್ಷ ನಿಯೋಗದ ಭಾಗವಾಗಿ ಮಲೇಷ್ಯಾಕ್ಕೆ ತೆರಳಿರುವ ಕಾಂಗ್ರೆಸ್ ಸಂಸದ ಸಲ್ಮಾನ್ ಖುರ್ಷಿದ್, ಸ್ವಂತ ಪಕ್ಷದ ನಡೆ ನುಡಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ‘ಒಗ್ಗಟ್ಟು ಕೇವಲ ವಿದೇಶದಲ್ಲಿದ್ದರೆ ಸಾಲದು’ ಎಂದು ಟಾಂಗ್ ನೀಡಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಉಗ್ರವಾದದ ವಿರುದ್ಧ ಭಾರತದ ಸಂದೇಶವನ್ನು ಜಗತ್ತಿಗೆ ರವಾನಿಸಲು ಈಗ ಅಭಿಯಾನ ನಡೆಯುತ್ತಿದೆ. ಆದರೆ ಮನೆಯಲ್ಲಿಯೇ (ಭಾರತದಲ್ಲಿ) ಇರುವ ಜನರು ರಾಜಕೀಯ ನಿಷ್ಠೆಯನ್ನು ಲೆಕ್ಕ ಹಾಕುತ್ತಿದ್ದಾರೆ. ದೇಶಭಕ್ತರಾಗಿರುವುದು ಅಷ್ಟೊಂದು ಕಷ್ಟವೇ?’ ಎಂದು ಬರೆದುಕೊಂಡಿದ್ದಾರೆ.
ಭಾನುವಾರ ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ಮಾತನಾಡಿದ್ದದ ಅವರು, ‘ಭಾರತ ಏಕಧ್ವನಿಯಿಂದ ಉಗ್ರವಾದ ಇನ್ನಿಲ್ಲ ಎನ್ನುತ್ತಿದೆ. ಈ ಏಕತೆ ಕೇವಲ ವಿದೇಶದಲ್ಲಿದ್ದರೆ ಸಾಲದು, ಸ್ವದೇಶಕ್ಕೆ ಮರಳಿದ ಮೇಲೂ ಕಂಡುಬರಬೇಕು’ ಎಂದಿದ್ದರು. ಅಲ್ಲದೆ, ಇತ್ತೀಚೆಗೆ ಮೋದಿ ಸರ್ಕಾರವು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ಶ್ಲಾಘಿಸಿದ್ದರು.