ಈ ಹಿಂದೆ ಸಲ್ಮಾನ್ ಖಾನ್-ಶಾರುಖ್ ಖಾನ್ ಜಗಳ ಬಗೆಹರಿಸಿದ್ದ ಸಲ್ಮಾನ್ ಆಪ್ತ, ಮಾಜಿ ಸಚಿವ ಹಾಗೂ ಎನ್‌ಸಿಪಿ (ಅಜಿತ್ ಬಣ) ನಾಯಕ ಬಾಬಾ ಸಿದ್ದಿಕಿ ಅವರನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಮುಂಬೈ: ಈ ಹಿಂದೆ ಸಲ್ಮಾನ್ ಖಾನ್-ಶಾರುಖ್ ಖಾನ್ ಜಗಳ ಬಗೆಹರಿಸಿದ್ದ ಸಲ್ಮಾನ್ ಆಪ್ತ, ಮಾಜಿ ಸಚಿವ ಹಾಗೂ ಎನ್‌ಸಿಪಿ (ಅಜಿತ್ ಬಣ) ನಾಯಕ ಬಾಬಾ ಸಿದ್ದಿಕಿ ಅವರನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಬಾಂದ್ರಾದಲ್ಲಿನ ತಮ್ಮ ಪುತ್ರ ಜೀಶನ್ ಸಿದ್ದಿಕಿ ಅವರ ಕಚೇರಿ ಹೊರಗೆ ಸಿದ್ದಿಕಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಆಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು 3 ಸುತ್ತು ಗುಂಡು ಹಾರಿಸಿದ್ದಾರೆ. ಬಳಿಕ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
48 ವರ್ಷ ಕಾಂಗ್ರೆಸ್‌ನಲ್ಲಿದ್ದ ಸಿದ್ದಿಕಿ ಇತ್ತೀಚೆಗೆ ಅಜಿತ್ ಬಣದ ಎನ್‌ಸಿಪಿ ಸೇರಿದ್ದರು. ಸಲ್ಮಾನ್ ಹಾಗೂ ಶಾರುಖ್‌ರ ಆಪ್ತರಾಗಿ ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ಧರಾಗಿದ್ದರು.
ಈ ನಡುವೆ, ಸಿದ್ದಿಕಿ ಹತ್ಯೆ ಕಾರಣ ಮುಂಬೈನಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಹೀಗಾಗಿ ಭಾರಿ ಭದ್ರತೆ ಹಮ್ಮಿಕೊಳ್ಳಲಾಗಿದೆ. ಈ ನಡುವೆ ದುಷ್ಕರ್ಮಿಗಳ ಹೆಡೆಮುರಿ ಕಟ್ಟಲಾಗುವುದು ಎಂದು ಸಿಎಂ ಏಕನಾಥ ಶಿಂಧೆ ಹಾಗೂ ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.